ರಾಜ್ಯದಲ್ಲಿರುವುದು ರಿಯಲ್ ಎಸ್ಟೇಟ್ ಸರಕಾರ : ಸುನೀಲ್ ಕುಮಾರ್ ಟೀಕೆ
ಬೆಂಗಳೂರು : ರಾಜ್ಯದಲ್ಲಿರುವುದು ರೈತಪರ ಸರಕಾರವಲ್ಲ, ಬದಲಾಗಿ ರಿಯಲ್ ಎಸ್ಟೇಟ್ ಸರಕಾರ ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರು ಗುಳೆ ಹೋಗುತ್ತಿರುವುದು ಮಾತ್ರವಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸರಕಾರ ಆ ಬಗ್ಗೆ ಗಮನವೇ ಕೊಟ್ಟಿಲ್ಲ. ಈ ಸರಕಾರ ಆದ್ಯತೆ ಅನ್ನದಾತ ಅಲ್ಲ, ರಿಯಲ್ ಎಸ್ಟೇಟ್. ಸರಕಾರ ಬಂದಾಗಿನಿಂದ ವ್ಯಾಪಾರ, ವ್ಯವಹಾರದಲ್ಲೇ ಮುಳುಗಿದೆ ಎಂದು ದೂರಿದರು.
ಬಿಜೆಪಿ ಪಕ್ಷದಿಂದ ಬರ ಅಧ್ಯಯನಕ್ಕೆ ತಂಡಗಳನ್ನು ಕಳುಹಿಸಲಾಗಿತ್ತು. ನಾನು ಅಧ್ಯಯನ ತಂಡದ ಭಾಗವಾಗಿ ಶಿವಮೊಗ್ಗ ಜಿಲ್ಲೆಯ ಶೆಟ್ಟಿಹಳ್ಳಿಗೆ ಹೋಗಿದ್ದೆ. ಅಲ್ಲಿ ಕೃಷಿಕರು 7 ಕೋಟಿ ಮೀನು ಮರಿಗಳನ್ನು ಉತ್ಪಾದಿಸುತ್ತಿದ್ದರು. ಅವುಗಳನ್ನು ಮೀನುಗಾರಿಕೆ ಇಲಾಖೆ ಖರೀದಿಸಿ ಕೆರೆ, ಅಣೆಕಟ್ಟುಗಳಿಗೆ ಬಿಡುತ್ತಿತ್ತು. ಆದರೆ ಹೊಸ ಸರಕಾರ ಬಂದ ಮೇಲೆ ಮೀನು ಖರೀದಿಯನ್ನು ಸ್ಥಗಿತಗೊಳಿಸಿ, ಬಡ ಜನರಿಗೆ ಅನ್ಯಾಯ ಮಾಡಿದೆ ಎಂದು ಅವರು ಆರೋಪಿಸಿದರು.
ಬರಪೀಡಿತ ತಾಲೂಕುಗಳ ಘೋಷಣೆ ವಿಚಾರದಲ್ಲೂ ರಾಜ್ಯ ಸರಕಾರ ಸರಿಯಾದ ತೀರ್ಮಾನಗಳನ್ನು ಮಾಡುತ್ತಿಲ್ಲ. ಬರ ಮಾರ್ಗಸೂಚಿ ಪ್ರಕಾರ ತೀರ್ಮಾನಗಳು ಆಗುತ್ತಿಲ್ಲ. ರಾಜಕೀಯ ಪ್ರಭಾವ, ಒತ್ತಡ, ರಾಜೀನಾಮೆ ಇವುಗಳಿಗೆ ಮಣಿದು ಬರಪೀಡಿತ ತಾಲೂಕು ಘೋಷಣೆ ಆಗುತ್ತಿದೆ. ಜಗಳೂರಿನಲ್ಲಿ ಬರ ಘೋಷಣೆಯಾಗಿದ್ದಕ್ಕೆ ಶಾಸಕರೊಬ್ಬರು ಸಂಭ್ರಮೋತ್ಸವ ನಡೆಸಿದ್ದಾರೆ. ಬರ ಸಂಭ್ರಮೋತ್ಸವವೇ. ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕು. ಅದು ಈ ಸರಕಾರದಿಂದ ಆಗುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.