×
Ad

‘ದಿಲ್ಲಿ ರೈತರ ಹೋರಾಟ’ಕ್ಕೆ ಬೆಂಬಲ ; ಕೇಂದ್ರದ ಜನ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

Update: 2024-02-16 22:22 IST

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಡಿಯುವ ಜನರ ಶೋಷಣೆ, ನಿರುದ್ಯೋಗ ಸಮಸ್ಯೆ, ರೈತ ವಿರೋಧಿ ಕೃಷಿ ನೀತಿ, ದಿಲ್ಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಹತ್ತಿಕ್ಕುವುದನ್ನು ಖಂಡಿಸಿ, ಸಂಯುಕ್ತ ಹೋರಾಟ-ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಶುಕ್ರವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ‘ಬಿಜೆಪಿ, ಆರೆಸ್ಸೆಸ್‍ನವರು ದೇಶವನ್ನು ಮಾತೃಭೂಮಿ ಎಂದು ಹೇಳುತ್ತಾರೆ. ಆದರೆ, ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಪ್ರಶ್ನಿಸಲು ದಿಲ್ಲಿಗೆ ಹೋದ ರೈತರನ್ನು ಹತ್ತಿಕ್ಕಲು ಅದೇ ಮಾತೃಭೂಮಿಗೆ ಮೊಳೆ ಹೊಡೆದಿದ್ದಾರೆ. ತಂದೆ ಕಷ್ಟಪಟ್ಟು ದುಡಿದ ಆಸ್ತಿಯನ್ನು ಉಡಾಳ ಮಗ ಮಾರಾಟಮಾಡಿದಂತೆ ದೇಶದ ಜನರು ಕಟ್ಟಿದ ಸಾರ್ವಜನಿಕ ಸಂಸ್ಥೆಗಳನ್ನು ಪ್ರಧಾನಿ ಮೋದಿ ಮಾರಾಟ ಮಾಡುತ್ತಿದ್ದಾರೆ. ಅದನ್ನು ಕಾರ್ಮಿಕರು ಅರ್ಥ ಮಾಡಿಕೊಂಡು ಮೋದಿ ಸರಕಾರಕ್ಕೆ ಪಾಠ ಕಲಿಸಬೇಕು’ ಎಂದು ಸಲಹೆ ನೀಡಿದರು.

ಸಂಯುಕ್ತ ಹೋರಾಟ ಸಮಿತಿಯ ಯು.ಬಸವರಾಜು ಮಾತನಾಡಿ, ‘ದೇಶದ ರೈತರಿಗೆ ಬರುತ್ತಿರುವ ಆದಾಯ ಕಡಿಮೆ, ಆದರೆ ರೈತರ ಮೇಲೆ ಸಾಲದ ಹೊರೆಯಿದೆ. ಕೃಷಿಯನ್ನು ಲಾಭದಾಯಕವಾಗಿಸಲು ಕೂಡಲೇ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಪಡಿಸಬೇಕು. ಕೇಂದ್ರ ಡಾ.ಎಂ.ಎಸ್.ಸ್ವಾಮಿನಾಥನ್‍ರಿಗೆ ಭಾರತ ರತ್ನ ನೀಡಿ ಗೌರವಿಸಿರುವುದು ಸ್ವಾಗತಾರ್ಹ, ಆದರೆ ಭಾರತ ರತ್ನ ನೀಡಿದ ಮಾತ್ರಕ್ಕೆ ಅವರ ಆಶಯ ಈಡೇರಲು ಸಾಧ್ಯವಿಲ್ಲ. ಸ್ವಾಮಿನಾಥನ್ ಮೇಲೆ ಗೌರವವಿದ್ದರೆ ಎಂಎಸ್‍ಪಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಒಂದು ಕಡೆ ಬೆಲೆಯೇರಿಕೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನೊಂದು ಕಡೆ ಬರ ಸ್ಥಿತಿ ಕಾರಣದಿಂದ ಬೆಳೆಯಲ್ಲಿ ನಷ್ಟ ಅನುಭವಿಸುತ್ತಿರುವುದರಿಂದ ರೈತರಿಗಾಗಿ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಸಿಐಟಿಯುನ ವರಲಕ್ಷ್ಮಿ, ಹೊಸತು ಪತ್ರಿಕೆ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಎಐಯುಟಿಯುಸಿ ಮುಖಂಡ ಕೆ.ವಿ.ಭಟ್, ಶಾಮಣ್ಣರೆಡ್ಡಿ, ಅಪ್ಪಣ್ಣ, ಮೈಕಲ್ ಫರ್ನಾಂಡಸ್, ಕಾಳಪ್ಪ, ನಾಗನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News