ಬೆಂಗಳೂರು | ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ; ಕೇರಳದ ದೇವಸ್ಥಾನದ ಸಹಾಯಕ ಅರ್ಚಕನ ಬಂಧನ
ಬೆಂಗಳೂರು, ಜೂ.16: ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಬೆಳ್ಳಂದೂರು ಠಾಣೆ ಪೊಲೀಸರು ಕೇರಳದ ತ್ರಿಶೂರ್ ಜಿಲ್ಲೆಯ ದೇವಸ್ಥಾನದ ಅರ್ಚಕನೋರ್ವನನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ತ್ರಿಶೂರ್ ಜಿಲ್ಲೆಯ ಪೆರಿಂಗೋಟ್ಟುಕ್ಕರ ದೇವಸ್ಥಾನದ ಸಹಾಯಕ ಅರ್ಚಕ ಅರುಣ್ ಬಂಧಿತ ಆರೋಪಿ.
2024ನೇ ಅಕ್ಟೋಬರ್ ತಿಂಗಳಿನಲ್ಲಿ ನಾನು ನನ್ನ ಸ್ನೇಹಿತೆಯರೊಂದಿಗೆ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಪೆರಿಂಗೋಟ್ಟುಕ್ಕರ ಬಳಿ ಇರುವ ವಿಷ್ಣುಮಯ ದೇವಸ್ಥಾನಕ್ಕೆ ಬೇಟಿ ನೀಡಿದ್ದ ಸಮಯದಲ್ಲಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ಪರಿಚಯವಾಗಿತ್ತು. ದೇವಸ್ಥಾನಕ್ಕೆ ಭೇಟಿ ನೀಡಿದ ಸಮಯದಲ್ಲಿ ತನ್ನ ಜೊತೆಯಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದಲ್ಲದೇ ನಂತರದ ದಿನಗಳಲ್ಲಿ ಈತ ವಿಡಿಯೋ ಕಾಲ್ ಮಾಡಿ ಖಾಸಗಿ ಭಾಗಗಳನ್ನ ತೋರಿಸುವಂತೆ ಒತ್ತಾಯಿಸುತ್ತಿದ್ದನು ಎಂದು ಮಹಿಳೆಯು ಮೇ 29 ರಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಜೂ.13 ರಂದು ಆರೋಪಿಯನ್ನು ಬಂಧಿಸಿದ್ದಾರೆ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.