×
Ad

ಭಾರತೀಯ ಸೇನೆಯನ್ನು ಬೆಂಬಲಿಸಿ ಕಾಂಗ್ರೆಸ್‌ನಿಂದ ತಿರಂಗಾ ಯಾತ್ರೆ

Update: 2025-05-09 15:10 IST

ಬೆಂಗಳೂರು : ಪಾಕಿಸ್ತಾನ ವಿರುದ್ಧ ‘ಆಪರೇಷನ್ ಸಿಂಧೂರ' ಹೆಸರಿನಲ್ಲಿ ಸಮರ ಸಾರಿರುವ ಭಾರತೀಯ ಸೇನಾ ಪಡೆಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಬೃಹತ್ ‘ತಿರಂಗಾ ಯಾತ್ರೆ' ನೋಡುಗರ ಗಮನ ಸೆಳೆಯಿತು.

ಸಾವಿರಾರು ಮಂದಿ ತಿರಂಗ ಧ್ವಜ ಕೈಯಲ್ಲಿ ಹಿಡಿದುಕೊಂಡು ಹೆಜ್ಜೆಹಾಕಿದ್ದು ಮಾತ್ರವಲ್ಲದೆ, ವಂದೇ ಮಾತರಂ ಹಾಗೂ ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಮೊಳಗಿಸಿದರು.

ಶುಕ್ರವಾರ ಇಲ್ಲಿನ ಕೆ.ಆರ್. ವೃತ್ತದಿಂದ ಕೆಎಸ್ಸ್‍ಪಿಎ ವೃತ್ತದ ವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ಎಚ್.ಕೆ.ಪಾಟೀಲ್, ಡಾ.ಎಚ್.ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್ ಸೇರಿದಂತೆ ಬಹುತೇಕ ಸಚಿವರು, ಕಾಂಗ್ರೆಸ್ ನಾಯಕರು, ಬಿಬಿಎಂಪಿ ಸಿಬ್ಬಂದಿ, ಸರಕಾರಿ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರ ಧ್ವಜ ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು.

ಕೆ.ಆರ್.ಸರ್ಕಲ್‍ನಿಂದ ವಿಧಾನಸೌಧ ಹಾಗೂ ಹೈಕೋರ್ಟ್‍ನ ನಡುವಿನ ಮುಖ್ಯರಸ್ತೆಯ ಮಾರ್ಗವಾಗಿ ಚಿನ್ನಸ್ವಾಮಿ ಸ್ಟೇಡಿಯಂ ಕ್ರೀಡಾಂಗಣದ ವೃತ್ತದವರೆಗೂ ನಡೆದ ತಿರಂಗ ಯಾತ್ರೆಯಲ್ಲಿ ಜನಜಂಗುಳಿಯೇ ನೆರೆದಿತ್ತು. 

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾವೆಲ್ಲರೂ ಒಂದಾಗಿದ್ದೇವೆ, ಒಟ್ಟಾಗಿದ್ದೇವೆ ಎಂಬ ಸಂದೇಶವನ್ನು ಭಾರತದ ಯೋಧರಿಗೆ ಕಳುಹಿಸಬೇಕು. ಕೇಂದ್ರ ಸರಕಾರದ ನಿರ್ಧಾರದ ಪರ ನಾವೆಲ್ಲರೂ ನಿಲ್ಲಬೇಕು. ದೇಶವನ್ನು ಉಳಿಸೋಣ, ಯೋಧರಿಗೆ ಗೌರವ ಕೊಡೋಣ ಎಂದು ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಾವು ನಮ್ಮ ಸೈನಿಕರ ಪರ ಇದ್ದೇವೆ. ಅದಕ್ಕಾಗಿ ಈ ಯಾತ್ರೆ ಹಮ್ಮಿಕೊಂಡಿದ್ದೇವೆ. ಇನ್ನೂ, ಸ್ಥಳೀಯ ಪೊಲೀಸರಿಗೂ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಡಲಾಗಿದೆ. ಜಲಾಶಯಗಳು, ಅಣೆಕಟ್ಟುಗಳು, ಪ್ರಮುಖ ಸ್ಥಳಗಳಿಗೆ ಭದ್ರತೆ ಕೊಟ್ಟಿದ್ದೇವೆ ಎಂದರು.

ದೇಶದ ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ನಮ್ಮ ಹೆಮ್ಮೆಯ ಸೈನಿಕರಿಗೆ ನೈತಿಕಸ್ಥೈರ್ಯ ತುಂಬುವ ಸಲುವಾಗಿ ಇಂದು ‘ತಿರಂಗಾ ಯಾತ್ರೆ’ ಹೆಸರಿನಲ್ಲಿ ತ್ರಿವರ್ಣ ಧ್ವಜ ಹಿಡಿದು ಪಾದಯಾತ್ರೆಯಲ್ಲಿ ಹೆಜ್ಜೆಹಾಕುತ್ತಾ, ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿದೆವು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News