×
Ad

ʼಅಪರೇಷನ್ ಸಿಂಧೂರʼ ಕಾರ್ಯಾಚರಣೆ ಯಶಸ್ವಿ: ಬಿಜೆಪಿಯಿಂದ ತಿರಂಗಾ ಯಾತ್ರೆ

Update: 2025-05-15 18:37 IST

ಬೆಂಗಳೂರು : ಭಯೋತ್ಪಾದಕರ ವಿರುದ್ಧ ‘ಆಪರೇಷನ್ ಸಿಂಧೂರ್’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಯೋಧರನ್ನು ಬೆಂಬಲಿಸಿ ಪ್ರತಿಪಕ್ಷ ಬಿಜೆಪಿ ತಿರಂಗ ಯಾತ್ರೆ ನಡೆಸಿತು.

ಗುರುವಾರ ಇಲ್ಲಿನ ನಗರದ ಮಲ್ಲೇಶ್ವರ ಮಂತ್ರಿಮಾಲ್‍ನ ಸಂಪಿಗೆ ರಸ್ತೆಯ ಶಿರೂರು ಆಟದ ಮೈದಾನದಿಂದ ಮಲ್ಲೇಶ್ವರ 18ನೇ ಕ್ರಾಸ್‍ನ ವರೆಗೂ ನಡೆದ ಯಾತ್ರೆಯಲ್ಲಿ ನೂರಾರು ನಾಯಕರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಬೃಹತ್ ತ್ರಿವರ್ಣ ಧ್ವಜದಡಿ ಜನತೆ ಸೇರಿ ಸೇನಾ ಕಾರ್ಯಾಚರಣೆಗೆ ಬೆಂಬಲ ಸೂಚಿಸಿದರು.

ನಿವೃತ್ತ ಏರ್ ಮಾರ್ಷಲ್ ಎ.ವಿ.ಮುರುಳಿ ಮಾತನಾಡಿ, ‘ಆಪರೇಷನ್ ಸಿಂಧೂರ್’ ಇನ್ನೂ ಮುಗಿದಿಲ್ಲ. ಇನ್ನೊಮ್ಮೆ ನಡೆದರೆ ಪಾಕಿಸ್ತಾನ ನಿರ್ನಾಮವಾಗಲಿದೆ. ಪಿಒಕೆ ನಮ್ಮದಾಗಲಿದೆ. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂಬುದು ದೇಶದ ನಿಲುವಾಗಿತ್ತು. ಪ್ರಧಾನಿ ಮೋದಿಯವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರು ಎಂದು ಮೆಚ್ಚುಗೆ ಸೂಚಿಸಿದರು.

ಜನರು ಬಯಸಿದ್ದನ್ನು ನಾವು ಮಾಡಿ ತೋರಿಸಿದೆವು. ಸೈನಿಕರ ಹಿಂದೆ ಇಡೀ ರಾಷ್ಟ್ರ ನಿಂತಿತ್ತು ಎಂದರು. ಆಪರೇಷನ್ ಸಿಂಧೂರ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತದ ಸೈನಿಕರಿಗೆ ಬೆಂಬಲ ಮತ್ತು ಧನ್ಯವಾದ ಸಲ್ಲಿಸುವ ಸಲುವಾಗಿ ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಅಡಿಯಲ್ಲಿ ಈ ಯಾತ್ರೆ ನೆಡಸಲಾಗಿದೆ ಎಂದರು.

ವಕೀಲೆ ಕ್ಷಮಾ ನರಗುಂದ ಮಾತನಾಡಿ, ‘ಅಪರೇಷನ್ ಸಿಂಧೂರದ ಮೂಲಕ 72 ತಾಸುಗಳಲ್ಲಿ ಪಾಕಿಸ್ತಾನಕ್ಕೆ ನಮ್ಮ ಸೈನ್ಯವು ತಕ್ಕ ಉತ್ತರ ಕೊಟ್ಟಿದೆ. ಪಾಕಿಸ್ತಾನದ ಸುಮಾರು 16ಕ್ಕೂ ಹೆಚ್ಚು ವಾಯುನೆಲೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿದೆ ಎಂದು ತಿಳಿಸಿದರು.

ಈ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ಡಾ.ರಾಧಾಮೋಹನ್ ಅಗವಾಲ್, ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ, ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್, ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಸಂಸದ ಪಿ.ಸಿ.ಮೋಹನ್, ಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕ ಎನ್.ಮುನಿರತ್ನ, ಎಸ್. ಮುನಿರಾಜು, ಮಾಜಿ ಸಂಸದ ಮುನಿಸ್ವಾಮಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News