ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗಿದ್ದ ಯುವಕ ಮೂರು ದಿನವಾದರೂ ನಾಪತ್ತೆ
ಬೆಂಗಳೂರು : ಮೂರು ದಿನಗಳ ಹಿಂದೆ ಶಿವಗಂಗೆ ಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗುವ ಸಲುವಾಗಿ ವೈಟ್‍ಫೀಲ್ಡ್ ನಿಂದ ಬುಲೆಟ್ ಬೈಕ್‍ನಲ್ಲಿ ಹೊರಟಿಸಿದ್ದ ಯುವಕ ನಾಪತ್ತೆಯಾಗಿದ್ದು, ಕಾಡುಗೋಡಿ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾಡುಗೋಡಿ ಮೈತ್ರಿ ಲೇಔಟ್‍ನ ನಿವಾಸಿ ಅದ್ವೈತ್ ಉಪಾಧ್ಯಾಯ(31) ಕಾಣೆಯಾದ ಯುವಕ ಎಂದು ತಿಳಿದು ಬಂದಿದೆ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಅದ್ವೈತ್ ಉಪಾಧ್ಯಾಯ(31) ಮನೆಯವರಿಗೆ ಕರೆ ಮಾಡಿ ತಾನು ಶಿವಗಂಗಾಬೆಟ್ಟಕ್ಕೆ ಟ್ರೆಕ್ಕಿಂಗ್ ಹೋಗುತ್ತಿರುವುದಾಗಿ ಹೇಳಿದ್ದನು.
ಅದ್ವೈತ್‍ಗೆ ಇತ್ತೀಚೆಗಷ್ಟೇ ಮದುವೆ ನಿಶ್ಚಯವಾಗಿತ್ತು. ಆತ ಶಿವಗಂಗೆ ಬೆಟ್ಟ ಹತ್ತುತ್ತಿದ್ದಂತೆ ಅಲ್ಲಿನ ಫೋಟೋವೊಂದನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಗೆ ಕಳುಹಿಸಿದ್ದನು. ನಂತರ ಆತನ ಸುಳಿವು ಸಿಗಲಿಲ್ಲ. ಹೀಗಾಗಿ ಆತನನ್ನು ಪತ್ತೆ ಹಚ್ಚಬೇಕು ಎಂದು ಆತ ಸಂಬಂಧಿ ಪ್ರಾಪ್ತಿ ಚೌಹಾಣ್ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಡುಗೋಡಿ, ನೆಲಮಂಗಲ, ಡಾಬಸ್‍ಪೇಟೆ ಪೊಲೀಸರು ಹಾಗೂ 60 ಸಿಬ್ಬಂದಿಗಳ ತಂಡದಿಂದ ಅದ್ವೈತ್‍ಗಾಗಿ ಡ್ರೋನ್‍ನಿಂದ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದ್ವೈತ್ ಶಿವಗಂಗೆ ಬೆಟ್ಟ ಹತ್ತುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಾರ್ಕಿಂಗ್ ಸ್ಥಳದಲ್ಲಿಯೇ ಬುಲೆಟ್ ಇದೆ. ಯುವಕ ಮಾತ್ರ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕಾಡುಗೋಡಿಯ ಅದ್ವೈತ್ ನಿವಾಸದಲ್ಲಿ ಪರಿಶೀಲನೆ ನಡೆಸಿದ ವೇಳೆ ಆತನ ಲ್ಯಾಪ್‍ಟಾಪ್ ದೊರೆತಿದೆ. ಪರಿಶೀಲನೆ ವೇಳೆ ವಿಷಯ ಬಯಲಾಗಿದೆ. ಅದ್ವೈತ್ ಲ್ಯಾಪ್‍ಟಾಟ್‍ನ ಇಂಟರ್‍ನೆಟ್‍ನಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮೂಲಕ ಆತ್ಮಹತ್ಯೆ ಬಗ್ಗೆ ಹುಡುಕಿದ್ದಾನೆ. ಶಿವಗಂಗೆಯ ಶಾಂತಲಾ ಡ್ರಾಪ್ ಬಗ್ಗೆಯೂ ಇಂಟರ್ ನೆಟ್‍ನಲ್ಲಿ ಪರಿಶೀಲಿಸಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.