ಯುಜಿಸಿ ಕರಡು ನಿಯಮಗಳ ತಿದ್ದುಪಡಿಯನ್ನು ತಿರಸ್ಕರಿಸಲು ಜಾಗೃತ ನಾಗರಿಕರ ವೇದಿಕೆ ಆಗ್ರಹ
ಬೆಂಗಳೂರು : ದೇಶದ ವಿಶ್ವವಿದ್ಯಾನಿಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಗುಣಮಟ್ಟ ಸುಧಾರಿಸುವ ಕುಂಟು ನೆಪದಲ್ಲಿ, ರಾಜ್ಯಗಳು ತಮ್ಮ ಸಂಪೂರ್ಣ ಧನ ಸಹಾಯದಿಂದ ನಡೆಸುತ್ತಿರುವ ಎಲ್ಲ ವಿವಿಗಳನ್ನು ಮತ್ತು ಸಂಯೋಜಿತ ಕಾಲೇಜುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರವನ್ನು ಹೊಂದಿರುವ ಯುಜಿಸಿಯ ಸಂವಿಧಾನ ಬಾಹಿರ ರಾಜಕೀಯ ಪ್ರೇರಿತ ಶಿಕ್ಷಣ ವಿರೋಧಿ ಕರಡು ನಿಯಮಗಳನ್ನು ರಾಜ್ಯ ಸರಕಾರ ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ಆಗ್ರಹಿಸಿದೆ.
ರವಿವಾರ ಈ ಸಂಬಂಧ ಚಿಂತಕರಾದ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಡಾ.ಸಬಿಹಾ ಭೂಮಿಗೌಡ, ವಿಮಲಾ ಕೆ.ಎಸ್., ಮಾವಳ್ಳಿ ಶಂಕರ್, ಬಿ.ಶ್ರೀಪಾದ ಭಟ್, ಪ್ರೊ.ನಿರಂಜನಾರಾಧ್ಯ ವಿ.ಪಿ., ಡಾ.ವಸುಂದರಾ ಭೂಪತಿ, ಡಾ.ಮೀನಾಕ್ಷಿ ಬಾಳಿ, ಡಾ.ಎಂ.ಎಸ್.ಆಶಾದೇವಿ, ಡಾ.ಆರ್.ಸುನಂದಮ್ಮ ಸೇರಿದಂತೆ ಹಲವರು ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಅಸಾಂವಿಧಾನಿಕ, ಅಪ್ರಜಾಸತ್ತಾತ್ಮಕ, ಶಿಕ್ಷಣದ ಕೇಂದ್ರಿಕರಣ, ಖಾಸಗಿಕರಣ, ಕಾರ್ಪೊರೇಟೀಕರಣ ಮತ್ತು ಕೋಮುವಾದಿಕರಣವನ್ನು ತನ್ನ ಮಡಿಲಿನಲ್ಲಿಟ್ಟುಕೊಂಡಿದ್ದ ಕಾರಣಗಳಿಂದ ದೇಶದ ಹಲವು ರಾಜ್ಯಗಳು ಎನ್‍ಇಪಿ ಯನ್ನು ಸಂವಿಧಾನದ ಮೂಲ ಆಶಯವಾದ ಒಕ್ಕೂಟ ಮತ್ತು ಪ್ರಜಾಸಾತ್ತಾತ್ಮಕ ತತ್ವಕ್ಕೆ ಮಾರಕವಾಗಿದ್ದ ಕಾರಣ ಒಮ್ಮತದಿಂದ ತಿರಸ್ಕರಿಸಿದ್ದವು. ನಮ್ಮ ರಾಜ್ಯವೂ ಸಹ ಎನ್‍ಇಪಿಯನ್ನು ತಿರಸ್ಕರಿಸಿ ರಾಜ್ಯದ ಶಿಕ್ಷಣ ನೀತಿ ರೂಪಿಸಲು, ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಿತು ಎಂದು ಮಾಹಿತಿ ನೀಡಿದ್ದಾರೆ.
ದೇಶದ ಬಹುತೇಕ ರಾಜ್ಯಗಳು ತಿರಸ್ಕರಿಸಿದ ಈ ಅಸಾಂವಿಧಾನಿಕ, ಅಪ್ರಜಾಸಾತ್ತಾತ್ಮಕ ಹಾಗೂ ಜನ ವಿರೋಧಿ ನೀತಿಯನ್ನೇ ಆಧರಿಸಿ ಯುಜಿಸಿ ತನ್ನ ಕರಡು ನಿಯಮಗಳನ್ನು ರೂಪಿಸಿ ಚರ್ಚೆಗೆ ಬಿಟ್ಟಿದೆ. ಈಗಾಗಲೇ ದೇಶದ ಜನತೆ ತಿರಸ್ಕರಿಸಿದ ನೀತಿಯನ್ನು ಆಧರಿಸಿ ರೂಪಿಸಲಾಗಿರುವ ಈ ಕರಡು ನಿಯಮಗಳು, ರಾಜ್ಯ ಸರಕಾರಗಳ ಮೇಲೆ ಮತ್ತೊಮ್ಮೆ ತಿರಸ್ಕೃತ ರಾಷ್ಟ್ರೀಯ ನೀತಿಯನ್ನು ಹಿಂಬಾಗಿಲಿನಿಂದ ಹೇರುವ ದೊಡ್ಡ ರಾಜಕೀಯ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಾಮಮಾರ್ಗದ ಮೂಲಕ ಕೇಂದ್ರ ಸರಕಾರ ತನ್ನ ರಾಜಕೀಯ ಅಜೆಂಡಾವಾದ ಒಂದು ದೇಶ, ಒಂದು ಭಾಷೆ, ಒಂದು ಸಂಸ್ಕೃತಿ, ಒಬ್ಬ ನಾಯಕ ಮತ್ತು ಒಂದೇ ಚುನಾವಣೆಯ ಮೂಲಕ ಪ್ರಜಾಸತ್ತಾತ್ಮಕ ಒಕ್ಕೂಟ ವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ತತ್ವವನ್ನು ಬುಡಮೇಲು ಮಾಡಿ ಕೇಂದ್ರೀಕೃತ ಸರ್ವಾಧಿಕಾರವನ್ನು ಜಾರಿಗೊಳಿಸಲು ರೂಪಗೊಂಡ ರಾಜಕೀಯ ಯೋಜನೆಯಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿದ್ದರೂ ರಾಜ್ಯಗಳ ಹಕ್ಕನ್ನು ಕಸಿದುಕೊಳ್ಳುವ, ವಿವಿಗಳ ಸ್ವಾಯತ್ತತೆಯನ್ನು ಮೊಟಕುಗೊಳಿಸುವ ಈ ತಿದ್ದುಪಡಿಯನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ ಮತ್ತು ಬೆಂಗಳೂರಿನಲ್ಲಿ ನಡೆಯುವ ದಕ್ಷಿಣ ಭಾರತದ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಈ ಕರಡು ನಿಯಮಗಳನ್ನು ಒಮ್ಮತದಿಂದ ಸಾರಾಸಗಟಾಗಿ ತಿರಸ್ಕರಿಸುವ ಒಂದು ಅಂಶದ ನಿರ್ಣಯ ಅಂಗೀಕರಿಸಬೇಕೆಂದು ಆಗ್ರಹಿಸಿದ್ದಾರೆ.