'ಜಿಹಾದಿ' ಪದ ಬಳಕೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದು : ಹೈಕೋರ್ಟ್ ಅಭಿಪ್ರಾಯ
ಫೇಸ್‌ಬುಕ್ ಪೋಸ್ಟ್ ಗೆ ಸಂಬಂಧಿಸಿದ ಪ್ರಕರಣ ರದ್ದುಗೊಳಿಸಿದ ನ್ಯಾಯಾಲಯ
ಬೆಂಗಳೂರು : ಫೇಸ್‌ಬುಕ್ ಪೋಸ್ಟ್‌ನಲ್ಲಿ 'ಜಿಹಾದಿ' ಮತ್ತು 'ಕಾಫಿರ್' ಎಂಬ ಪದಗಳನ್ನು ಬಳಸಿದ ಮಾತ್ರಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಅಥವಾ ಸಮುದಾಯಗಳ ನಡುವೆ ದ್ವೇಷ ಪ್ರಚೋದಿಸಿದ ಅಪರಾಧ ಸಾಬೀತಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದೆ.
'ಹಿಂದು ಸಾಮ್ರಾಟ್ ಧರ್ಮಸೇನೆ' ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಹಾಕಿದ ಸಂಬಂಧ ಮಧುಗಿರಿಯ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಅತುಲ್ ಕುಮಾರ್ ಸಬರ್ವಾಲ್ ಅಲಿಯಾಸ್ ಮಧುಗಿರಿ ಮೋದಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಆರೋಪಿತ ಪೋಸ್ಟ್‌ನಲ್ಲಿರುವ ವಿಷಯವನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 295ಎ ಮತ್ತು 505(2)ರ ಅಂಶಗಳೊಂದಿಗೆ ಹೋಲಿಸಿದಾಗ ಅಪರಾಧ ಮುಂದುವರಿಸಲು ಅಗತ್ಯವಾದ ಮೂಲಭೂತ ಅಂಶಗಳೇ ಕಾಣಿಸುವುದಿಲ್ಲ ಎಂದಿರುವ ನ್ಯಾಯಾಲಯ, ಅರ್ಜಿದಾರರ ವಿರುದ್ಧದ ಎಫ್‌ಐಆರ್ ಮತ್ತು ಆನಂತರದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.
ಇದೇ ವೇಳೆ, 'ಜಿಹಾದಿ' ಅಥವಾ 'ಕಾಫಿರ್' ಪದಗಳ ಬಳಕೆ ಯಾವುದೇ ಸಂದರ್ಭದಲ್ಲಿಯೂ ಅಪರಾಧವಾಗುವುದಿಲ್ಲ ಎಂಬ ಸಾರ್ವತ್ರಿಕ ನಿಯಮವನ್ನು ಹೈಕೋರ್ಟ್ ರೂಪಿಸಿಲ್ಲ. ಈ ನಿರ್ದಿಷ್ಟ ಪ್ರಕರಣದಲ್ಲಿದ್ದ ಪೋಸ್ಟ್‌ನ ಪೂರ್ಣ ವಿಷಯ, ಅದರ ಸಂದರ್ಭ ಮತ್ತು ಕಾನೂನಿನ ಅಗತ್ಯ ಅಂಶಗಳ ಆಧಾರದಲ್ಲಿ ಮಾತ್ರ ಎಫ್‌ಐಆರ್ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಹೈಕೋರ್ಟ್ ಆದೇಶವೇನು? :
ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಪ್ರಕರಣ ದಾಖಲಿಸಲು ಕೇವಲ ಧಾರ್ಮಿಕವಾಗಿ ಅಸಮಾಧಾನಕರವಾಗಬಹುದಾದ ಪದಗಳ ಬಳಕೆ ಸಾಕಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ನಿರ್ದಿಷ್ಟ ಸಮುದಾಯದ ಧರ್ಮ ಅಥವಾ ಧಾರ್ಮಿಕ ನಂಬಿಕೆಯನ್ನು ಅವಮಾನಿಸುವ ಅಥವಾ ಅವಮಾನಿಸಲು ಯತ್ನಿಸುವ ಕೃತ್ಯ ಇರಬೇಕು. ಅದರ ಜತೆಗೆ ಆ ಕೃತ್ಯವು ಉದ್ದೇಶಪೂರ್ವಕ ಹಾಗೂ ದುರುದ್ದೇಶಪೂರಿತವಾಗಿರಬೇಕು. ಮಾತು, ಬರಹ, ಸಂಕೇತ, ದೃಶ್ಯರೂಪ ಅಥವಾ ಇತರ ವಿಧಾನಗಳ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸ್ಪಷ್ಟ ಉದ್ದೇಶ ಕಂಡುಬರಬೇಕಾಗುತ್ತದೆ ಎಂದು ಹೇಳಿದೆ.
ಹಾಲಿ ಪ್ರಕರಣದಲ್ಲಿ ಫೇಸ್‌ಬುಕ್ ಸಂದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಅಂತಹ ಉದ್ದೇಶಪೂರ್ವಕ ಅಥವಾ ದುರುದ್ದೇಶಪೂರಿತ ಧಾರ್ಮಿಕ ಅವಮಾನ ಕಂಡುಬರುವುದಿಲ್ಲ. ಐಪಿಸಿ ಸೆಕ್ಷನ್ 505(2) ಅನ್ವಯಿಸಲು ಎರಡು ಸಮುದಾಯಗಳು ಅಥವಾ ವರ್ಗಗಳ ನಡುವೆ ದ್ವೇಷ, ವೈಮನಸ್ಸು ಅಥವಾ ಶತ್ರುತ್ವವನ್ನು ಹುಟ್ಟುಹಾಕುವ ಉದ್ದೇಶದಿಂದ ಹೇಳಿಕೆ ಪ್ರಕಟಿಸಿರಬೇಕು. ಅಪರಾಧದ ಮೂಲಭೂತ ಅಂಶಗಳೇ ಇಲ್ಲದಿದ್ದಾಗ ಅರ್ಜಿದಾರರನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸುವುದು ಸಮರ್ಥನೀಯವಲ್ಲ. ಇಂತಹ ಪ್ರಕರಣವನ್ನು ಮುಂದುವರಿಸುವುದು ನ್ಯಾಯಾಂಗ ಮತ್ತು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗುತ್ತದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಪ್ರಕರಣವೇನು? :
ಬಡವನಹಳ್ಳಿ ಪೊಲೀಸ್ ಠಾಣೆಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಘಟಕದ ಸದಸ್ಯರಾಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಫೇಸ್‌ಬುಕ್‌ನಲ್ಲಿದ್ದ ಕನ್ನಡ ಸಂದೇಶವನ್ನು ಗಮನಿಸಿದ್ದರು. ಅದರಲ್ಲಿ 'ಜಿಹಾದಿ' ಮತ್ತು 'ಕಾಫಿರ್' ಪದಗಳನ್ನು ಬಳಸಲಾಗಿದ್ದು, ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಹಾಗೂ ಸಮಾಜದಲ್ಲಿ ಸಾಮರಸ್ಯ ಕದಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದರು. 2024ರ ಏಪ್ರಿಲ್ 27ರಂದು ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 295ಎ ಮತ್ತು 505(2) ಅನ್ವಯ ಎಫ್‌ಐಆರ್ ದಾಖಲಾಗಿತ್ತು. ಮಧುಗಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಪ್ರಕರಣ ಬಾಕಿ ಇತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ದೂರು ಮತ್ತು ಎಫ್‌ಐಆರ್‌ನಲ್ಲಿರುವ ಆರೋಪಗಳನ್ನು ಸಂಪೂರ್ಣವಾಗಿ ಒಪ್ಪಿಕೊಂಡರೂ ಐಪಿಸಿ ಸೆಕ್ಷನ್ 295ಎ ಮತ್ತು 505(2)ರಡಿ ಅಪರಾಧ ರೂಪಿಸುವ ಅಗತ್ಯ ಅಂಶಗಳಿಲ್ಲ. ಧಾರ್ಮಿಕ ನಂಬಿಕೆಯನ್ನು ಉದ್ದೇಶಪೂರ್ವಕವಾಗಿ ಹಾಗೂ ದುರುದ್ದೇಶದಿಂದ ಅವಮಾನಿಸುವ ಉದ್ದೇಶ ಆರೋಪಿತ ಪೋಸ್ಟ್‌ನಲ್ಲಿ ಕಾಣಿಸುವುದಿಲ್ಲ. ಜತೆಗೆ, ಎರಡು ಧಾರ್ಮಿಕ ಅಥವಾ ಸಾಮಾಜಿಕ ಗುಂಪುಗಳ ನಡುವೆ ದ್ವೇಷ, ವೈಮನಸ್ಸು ಅಥವಾ ಶತ್ರುತ್ವ ಪ್ರಚೋದಿಸುವ ಹೇಳಿಕೆಯೂ ಇಲ್ಲ ಎಂದು ವಾದಿಸಿದ್ದರು.
ರಾಜ್ಯ ಸರ್ಕಾರದ ಪರ ವಕೀಲರು, 'ಜಿಹಾದಿ' ಮತ್ತು 'ಕಾಫಿರ್' ಪದಗಳ ಬಳಕೆಯು ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶ ಹೊಂದಿದೆ ಎಂದು ಮೇಲ್ನೋಟಕ್ಕೆ ತೋರುತ್ತದೆ. ಇಂತಹ ಸಂದೇಶಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಸಾಧ್ಯತೆಯಿರುವುದರಿಂದ ತನಿಖೆ ಮುಂದುವರಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.