×
Ad

ಮಹಿಳಾ ಅಧಿಕಾರಿಗೆ ನಿಂದನೆ | ಕಠಿಣ ಕ್ರಮ ಕೈಗೊಳ್ಳದಿದ್ದರೆ ಜನರೇ ಪಾಠ ಕಲಿಸಲಿದ್ದಾರೆ : ವಿಜಯೇಂದ್ರ

Update: 2026-01-14 20:39 IST

ಬೆಂಗಳೂರು : ‘ಅಧಿಕಾರ ಮದದಿಂದ ಪ್ರಾಮಾಣಿಕ ಅಧಿಕಾರಿಗಳ ಮೇಲೆ ದರ್ಪ ತೋರಿಸುವುದನ್ನು ನೋಡಿಕೊಂಡು ಪಕ್ಷ ಸುಮ್ಮನಿರಲಾಗದು. ಮಹಿಳಾ ಅಧಿಕಾರಿ ವಿರುದ್ಧ ದಬ್ಬಾಳಿಕೆ ನಡೆಸುವ ಕಾಂಗ್ರೆಸ್‍ನ ಅಶಿಸ್ತಿನ ನಾಯಕರ ವಿರುದ್ಧ ರಾಜ್ಯ ಸರಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರೇ ರಸ್ತೆಗಿಳಿದು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ರಾಜ್ಯವನ್ನು ಗೂಂಡಾರಾಜ್ಯವನ್ನಾಗಿ ಪರಿವರ್ತಿಸಿರುವ ಈ ಕಾಂಗ್ರೆಸ್ ಸರಕಾರದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕಾಂಗ್ರೆಸ್ ಮುಖಂಡರುಗಳು ಇದಕ್ಕೆ ತಕ್ಕಂತೆ ಪುಡಿರೌಡಿಗಳಂತೆ ವರ್ತಿಸುತ್ತಿರುವುದು ಆ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ. ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ನಿಯಮಬಾಹಿರವಾಗಿ ಕೃತ್ಯ ಎಸಗಿರುವುದು ಮಾತ್ರವಲ್ಲದೆ, ಒಬ್ಬ ಕರ್ತವ್ಯನಿರತ ಮಹಿಳಾ ಅಧಿಕಾರಿಯ ಮೇಲೆ ಹೀಗೆ ಅಸಭ್ಯ ಪುಂಡನಂತೆ ವರ್ತಿಸುತ್ತಿರುವುದು ಅಕ್ಷಮ್ಯ’ ಎಂದು ಆಕ್ಷೇಪಿಸಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮದೇ ಪಕ್ಷದ ಈ ಮುಖಂಡನ ಈ ‘ಗೂಂಡಾ ವರ್ತನೆ'ಗೂ ಬಳ್ಳಾರಿಯ ಪ್ರಕರಣದಲ್ಲಿ ವಹಿಸಿದಂತೆ ಇದಕ್ಕೂ ನಿಮ್ಮ 'ಮೌನ' ಸಮ್ಮತಿ ಇದೆಯೇ? ಅಥವಾ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸುತ್ತೀರಾ? ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನಂತೂ ಕೇಳುವಂತೆಯೇ ಇಲ್ಲ. ಅವರ ಬಳಿ ಮಾಹಿತಿ ಇರುವುದೇ ಇಲ್ಲ. ಪೊಲೀಸ್ ಇಲಾಖೆಯ ಕೈಕಟ್ಟಿ ಹಾಕಿ, ಗೂಂಡಾಗಳಿಗೆ ರಕ್ಷಣೆ ನೀಡುತ್ತಿರುವುದೇ ನಿಮ್ಮ ಸಾಧನೆಯೇ?’ ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News