×
Ad

Bengaluru | ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಜಾಲ ಬಯಲಿಗೆ : ಯುಪಿ, ಹೊಸದಿಲ್ಲಿ, ಬಿಹಾರ ಸೇರಿ ವಿವಿಧ ರಾಜ್ಯಗಳಲ್ಲಿದ್ದ 11 ಮಂದಿ ಬಂಧನ

Update: 2026-01-14 19:12 IST
ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಯಲಿಗೆಳೆದಿದ್ದು, ಬೆಂಗಳೂರು, ಉತ್ತರ ಪ್ರದೇಶ, ಹೊಸದಿಲ್ಲಿ, ಬಿಹಾರ, ರಾಜಸ್ಥಾನ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿದ್ದ 11 ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಆರೋಪಿಗಳು ವಂಚಿಸಿದ್ದ 94 ಲಕ್ಷ ರೂಪಾಯಿ ಹಣ ಹಿಂಪಡೆಯಲಾಗಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 240 ಕೋಟಿ ರೂಪಾಯಿ ಹಣವನ್ನು ತಡೆಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸದಿಲ್ಲಿಯ ಓಲ್ಡ್ ರಾಜೇಂದ್ರ ನಗರದಲ್ಲಿ ಕಾಲ್‍ಸೆಂಟರ್ ನಡೆಸುತ್ತಿದ್ದ ಆರೋಪಿಗಳು, ಜನರಿಗೆ ಕರೆ ಮಾಡಿ ಹೂಡಿಕೆ ಯೋಜನೆಗಳ ಬಗ್ಗೆ ಅವರನ್ನು ಆಕರ್ಷಿಸುತ್ತಿದ್ದರು. ನಂತರ ತಮ್ಮದೇ ಅನಧಿಕೃತ ಆ್ಯಪ್ ಇನ್‍ಸ್ಟಾಲ್ ಮಾಡಿಸಿ ಅದರ ಮೂಲಕ ಹೂಡಿಕೆ ಮಾಡಿಸುತ್ತಿದ್ದರು. ಹಣ ಹೂಡಿಕೆ ಮಾಡಿದವರಿಗೆ ಆರಂಭದಲ್ಲಿ ಅಲ್ಪ ಪ್ರಮಾಣದಲ್ಲಿ ಲಾಭಾಂಶ ನೀಡುವ ಮೂಲಕ ನಂಬಿಕೆ ಗಳಿಸುತ್ತಿದ್ದರು ಎನ್ನಲಾಗಿದೆ.

ಆದರೆ, ಹೆಚ್ಚು ಹಣ ಹೂಡಿಕೆ ಮಾಡಿದ ಬಳಿಕ ವಾಪಸ್ ಪಡೆಯುವ ಅವಕಾಶ ನೀಡುತ್ತಿರಲಿಲ್ಲ. ಇದೇ ರೀತಿ ನೂರಾರು ಜನರಿಗೆ ವಂಚಿಸಿದ್ದ ಆರೋಪಿಗಳ ವಿರುದ್ಧ ದೇಶದ ವಿವಿಧೆಡೆ ಸೈಬರ್ ಕ್ರೈಂ ಸಹಾಯವಾಣಿಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಇದೇ ವೇಳೆ, ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 3.20 ಕೋಟಿ ರೂ. ವಂಚಿಸಿದ್ದ ಆರೋಪಿಗಳ ವಿರುದ್ಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ವಂಚನೆ ಪ್ರಕರಣದ ತನಿಖೆ ಕೈಗೊಂಡ ಹುಳಿಮಾವು ಪೊಲೀಸರು ಆರಂಭದಲ್ಲಿ ಹಣ ವರ್ಗಾವಣೆಯಾಗಿದ್ದ ಖಾತೆಗಳ ಮಾಲಕ ಮಹಮ್ಮದ್ ಹುಜೈಫಾ ಮತ್ತು ಆತನ ತಾಯಿ ಸಭಾ ಎಂಬಾಕೆಯನ್ನು ಬಂಧಿಸಿದ್ದರು. ಪ್ರಮುಖ ಆರೋಪಿಗಳ ಸೂಚನೆಯಂತೆ ‘ಮ್ಯೂಲ್ ಅಕೌಂಟ್’ ತೆರೆದುಕೊಟ್ಟಿರುವುದಾಗಿ ಬಂಧಿತರು ಬಾಯ್ಬಿಟ್ಟಿದ್ದರು. ನಂತರ ಹಣ ವರ್ಗಾವಣೆಯಾಗಿದ್ದ ಖಾತೆಗಳ ವಿವರಗಳನ್ನು ಆಧರಿಸಿ ಹೊಸದಿಲ್ಲಿ ಸೇರಿದಂತೆ ವಿವಿಧೆಡೆ 11 ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಸುಮಾರು 9 ಸಾವಿರ ಮ್ಯೂಲ್ ಅಕೌಂಟ್‍ಗಳನ್ನು ಬಳಸಿರುವುದು ಪತ್ತೆಯಾಗಿದ್ದು, ಬಂಧಿತರಿಂದ ಒಟ್ಟು 58 ಮೊಬೈಲ್ ಫೋನ್‍ಗಳು, 242 ಡೆಬಿಟ್ ಕಾರ್ಡ್‍ಗಳು, 7 ಲ್ಯಾಪ್‍ಟಾಪ್‍ಗಳು, 530 ಗ್ರಾಂ ಚಿನ್ನ, 4.89 ಲಕ್ಷ ನಗದು, 21 ಬ್ಯಾಂಕ್ ಪಾಸ್‍ಬುಕ್‍ಗಳು, 33 ಚೆಕ್ ಬುಕ್‍ಗಳು, 9 ದುಬಾರಿ ಬೆಲೆಯ ವಾಚುಗಳು, 1 ಆನ್‍ಲೈನ್ ಡಿಜಿಟಲ್ ಪೇಮೆಂಟ್ ರಿಂಗ್, 1 ಕ್ರಿಪ್ಟೋ  ಕರೆನ್ಸಿ ಲೆಡ್ಜರ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ದುಬೈನಲ್ಲಿದ್ದು, ಆತನ ಪತ್ತೆಗಾಗಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News