ಬೆಂಗಳೂರು: ರೈತರ ಹಿತ ಕಾಪಾಡುವ ದೃಷ್ಟಿಯಿಂದ ತುಂಗಭದ್ರಾ ಅಣೆಕಟ್ಟೆಯಿಂದ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿನ ನಿಂತ ಬೆಳೆಗಳಿಗೆ ನ.28ರವರೆಗೆ ನೀರು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆಗಿರುವ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ಎಸ್.ತಂಗಡಗಿ ತಿಳಿಸಿದರು.

ವಿಕಾಸಸೌಧದಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ನಿಂತ ಬೆಳೆಗಳಿಗೆ ನಾಲ್ಕೂವರೆ ಟಿಎಂಸಿ ನೀರು ಒದಗಿಸಲಾಗುವುದು ಎಂದು ಹೇಳಿದರು.

ಪ್ರಸ್ತುತ ಜಲಾಶಯದಲ್ಲಿ 27.61 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ ಡೆಡ್ ಸ್ಟೋರೇಜ್ 2 ಟಿಎಂಸಿ ಹಾಗೂ ಆವಿಯಾಗುವಿಕೆ ಪ್ರಮಾಣ 2.85 ಟಿಎಂಸಿಯಾಗಿದೆ. ರಾಜ್ಯದ ಪಾಲು 9.6 ಟಿಎಂಸಿ ಇದ್ದು, ಆಂಧ್ರಪ್ರದೇಶದ ಪಾಲು 11 ಟಿಎಂಸಿಯಾಗಿದೆ. ರಾಜ್ಯದ ಪಾಲಿನ 9.6 ಟಿಎಂಸಿಯಲ್ಲಿ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ 5.5 ಟಿಎಂಸಿ ನೀರನ್ನು ಸಂಗ್ರಹಿಸಿಡಲಾಗಿದೆ. ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾಲುವೆಗಳಿಗೆ ನೀರು ಹರಿಸುವ ವೇಳಾಪಟ್ಟಿ :

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನವೆಂಬರ್ 21ರಿಂದ 28ರವರೆಗೆ 3,000 ಕ್ಯೂಸೆಕ್ ನೀರು ಹರಿಸಲಾಗುವುದು. ಬಲದಂಡೆ ಕೆಳಮಟ್ಟದ ಕಾಲುವೆಗೆ ನವೆಂಬರ್ 21ರಿಂದ 28ರವರೆಗೆ ನೀರು ಹರಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನವೆಂಬರ್ 21ರಿಂದ 30ರವರೆಗೆ ನೀರು ಸ್ಥಗಿತಗೊಳಿಸಿ, ಡಿಸೆಂಬರ್ 1ರಿಂದ 8ರವರೆಗೆ 1,000 ಕ್ಯೂಸೆಕ್ ನೀರು ಹರಿಸಲಾಗುವುದು.

ರಾಯಬಸವಣ್ಣ ಕಾಲುವೆಗೆ ನವೆಂಬರ್ 21ರಿಂದ 30ರವರೆಗೆ ನೀರು ಸ್ಥಗಿತಗೊಳಿಸಿ, ಡಿಸೆಂಬರ್ 1ರಿಂದ 12ರವರೆಗೆ 180 ಕ್ಯೂಸೆಕ್ ನೀರು ಹರಿಸಲಾಗುವುದು. ಡಿಸೆಂಬರ್ 11ರಿಂದ ಜನವರಿ 10ರವರೆಗೆ ನೀರು ಸ್ಥಗಿತಗೊಳಿಸಲಾಗುತ್ತದೆ. ಜನವರಿ 11ರಿಂದ ಮೇ 31ರವರೆಗೆ 150 ಕ್ಯೂಸೆಕ್ ನೀರನ್ನು ಹತ್ತು ದಿನ ಹರಿಸಿ, ಹತ್ತು ದಿನ ಸ್ಥಗಿತಗೊಳಿಸುವ ಪದ್ಧತಿಯಲ್ಲಿ ಪೂರೈಸಲಾಗುವುದು.

ಎಡದಂಡೆ ವಿಜಯನಗರ ಕಾಲುವೆಗೆ ನವೆಂಬರ್ 29ರಿಂದ ಜನವರಿ 10ರವರೆಗೆ ನೀರು ಸ್ಥಗಿತಗೊಳಿಸಿ, ಜನವರಿ 11ರಿಂದ ಮೇ 10ರವರೆಗೆ 60 ಕ್ಯೂಸೆಕ್ ನೀರನ್ನು ಹತ್ತು ದಿನ ಹರಿಸಿ, ಹತ್ತು ದಿನ ಸ್ಥಗಿತಗೊಳಿಸುವ ಕ್ರಮದಲ್ಲಿ ಪೂರೈಸಲಾಗುವುದು ಎಂದು ಸಚಿವರು ವಿವರಿಸಿದರು.

ರಾಜ್ಯದಲ್ಲಿ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ರೈತರ ಹಿತದ ಜೊತೆಗೆ ಜನರಿಗೆ ಕುಡಿಯುವ ನೀರು ಒದಗಿಸುವುದೂ ಬಹಳ ಮುಖ್ಯವಾಗಿದೆ. ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ ಒಮ್ಮತದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೆಲವೆಡೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಲಭ್ಯವಿರುವ ನೀರಿನ ಆಧಾರದ ಮೇಲೆ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಆಂಧ್ರಪ್ರದೇಶದ ಪಾಲಿನ ನೀರನ್ನು ಉಳಿಸಿಕೊಳ್ಳುವ ಪ್ರಯತ್ನದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆಂಧ್ರಪ್ರದೇಶದಲ್ಲಿ ಎರಡನೇ ಬೆಳೆ ಬೆಳೆಯಲಾಗುತ್ತಿಲ್ಲ. ಬದಲಾಗಿ ಈ ಬಾರಿ ಕುಡಿಯುವ ಉದ್ದೇಶಕ್ಕಾಗಿಯೇ ತಮ್ಮ ಪಾಲಿನ ನೀರನ್ನು ಉಳಿಸಿಕೊಂಡಿರುವುದಾಗಿ ತಿಳಿಸಿ, ನಮ್ಮ ಬಳಕೆಗೆ ನೀರು ನೀಡಲು ಒಪ್ಪಿಲ್ಲ. ನಮ್ಮ ರಾಜ್ಯದಲ್ಲಿ ಏಳೂವರೆ ಲಕ್ಷ ರೈತರು ಬೆಳೆ ಬೆಳೆದಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು. ಅದರಂತೆ ನಮ್ಮ ರೈತರ ಹಿತ ಕಾಪಾಡಲು ಪ್ರಯತ್ನಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮಾಜಿ ಸಚಿವ ಬೋಸರಾಜ್, ಶಾಸಕರಾದ ಜಿ. ಜನಾರ್ದನ ರೆಡ್ಡಿ, ಕೆ. ರಾಘವೇಂದ್ರ ಹಿಟ್ನಾಳ್, ಶಿವರಾಜ್ ಪಾಟೀಲ್, ನಾಗರಾಜ್, ಹಂಪನಗೌಡ ಬಾದರ್ಲಿ, ಗಣೇಶ್, ಬಸವರಾಜ್ ತೂರ್ವಿಹಾಳ್, ಬಸನಗೌಡ ಬಾದರ್ಲಿ, ಹೇಮಲತಾ ನಾಯಕ್, ವಸಂತಕುಮಾರ್, ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ನೀರಿನ ವಿಚಾರದಲ್ಲಿ ರಾಜಕೀಯ ಬೇಡ :

ನೀರಾವರಿ ಸಲಹಾ ಸಮಿತಿ ಸಭೆಗೆ ಹಾಜರಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕೇಂದ್ರ ಸಚಿವರ ಮೂಲಕ ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ನಾಲ್ಕು ಟಿಎಂಸಿ ನೀರನ್ನು ಉಳಿಸಿಕೊಳ್ಳಲು ಮನವಿ ಮಾಡಲಿ. ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಮಾರ್ಮಿಕವಾಗಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮುಹಮ್ಮದ್ ಅಖೀಲ್ ಉಡೇವು/ವಾರ್ತಾಭಾರತಿ

ಕೊಪ್ಪಳ ಜಿಲ್ಲಾ ವರದಿಗಾರರು

ಎಂ.ಡಿ.ಅಖೀಲ್ ಉಡೇವು ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿರುವ ಇವರು, ಪತ್ರಿಕೆಗಳ ಪುಟವಿನ್ಯಾಸ ಹಾಗೂ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡು ಅನುಭವಗಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಪ್ಪಳ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐತಿಹಾಸಿಕ ಸ್ಮಾರಕಗಳು ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳ ವರದಿಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ