×
Ad

ಸಂವಿಧಾನದಲ್ಲಿ ಜಾತ್ಯತೀತ, ಸಮಾಜವಾದಿ ಪದಗಳನ್ನು ಬದಲಿಸಿ ಅದರ ಜಾಗದಲ್ಲಿ ಯಾವುದನ್ನು ಸೇರಿಸುತ್ತೀರಿ?: ಆರೆಸ್ಸೆಸ್ ಗೆ ಬಿ.ಕೆ.ಹರಿಪ್ರಸಾದ್ ಪ್ರಶ್ನೆ

Update: 2025-06-27 11:28 IST

ಬಿ.ಕೆ.ಹರಿಪ್ರಸಾದ್

ಬೆಂಗಳೂರು: ಸಂವಿಧಾನದ ಪ್ರಸ್ತಾವನೆಯ 'ಜೀವಾಳ' ಹಾಗೂ 'ಹೃದಯವೇ' ಆಗಿರುವ ಜಾತ್ಯತೀತ ಹಾಗೂ ಸಮಾಜವಾದಿ ಪದಗಳನ್ನು ತೆಗೆದು ಹಾಕಬೇಕೆಂದು ಆರೆಸ್ಸೆಸ್ ಮತ್ತೆ ಒತ್ತಾಯಿಸಿದ್ದು, ಇದು ಖಂಡನೀಯ. ಈ ಬದಲಾವಣೆ ಹೇಳಿಕೆಗೂ ನನ್ನ ಸವಾಲಿದೆ. ಜಾತ್ಯತೀತ ಹಾಗೂ ಸಮಾಜವಾದಿ ಪದಗಳನ್ನು ಬದಲಾಯಿಸಿದರೆ ಅದರ ಜಾಗದಲ್ಲಿ ಯಾವುದನ್ನು ಸೇರಿಸುತ್ತೀರಿ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಇದೆಯೇ? ಎಂದು ಆರೆಸ್ಸೆಸ್ ಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದ್ದಾರೆ.

ಈ ಬಗ್ಗೆ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿರುವ ಅವರು, ಸಂವಿಧಾನದ ಪ್ರಸ್ತಾವನೆಯ 'ಜೀವಾಳ' ಹಾಗೂ 'ಹೃದಯವೇ' ಆಗಿರುವ ಜಾತ್ಯತೀತ ಹಾಗೂ ಸಮಾಜವಾದಿ ಪದಗಳನ್ನು ತೆಗೆದು ಹಾಕಬೇಕೆಂದು ಆರೆಸ್ಸೆಸ್ ಮತ್ತೆ ಒತ್ತಾಯಿಸಿದೆ. "ಸಂವಿಧಾನವನ್ನೆ ಬದಲಾಯಿಸುತ್ತೇವೆ", "ನಮ್ಮನ್ನ ಗೌರವಿಸುವ ಸಂವಿಧಾನ ಬೇಕು", "ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು", "ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನ ಬಿಜೆಪಿ ಪಡೆದರೆ ಸಂವಿಧಾನ ಬದಲಾಯಿಸುವುದೇ ನಮ್ಮ ಗುರಿ" ಎಂದು ಸಂವಿಧಾನ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸಿದ್ದ ಬಿಜೆಪಿಯ ಮನಸ್ಥಿತಿಗಳ ಹಿಂದೆ ಸಂಘ ಪರಿವಾರ ಇರುವುದು ಸ್ಪಷ್ಟ ಎಂದು ಆರೋಪಿಸಿದ್ದಾರೆ.

ನೆಹರೂ ಅವರು ಸಂವಿಧಾನವನ್ನು ರಚಿಸಲು ಬಾಬಾ ಸಾಹೇಬರಿಗೆ ಅವಕಾಶ ನೀಡಿದ ಕ್ಷಣದಿಂದ ಹಿಡಿದು ಈ ಕ್ಷಣದವರೆಗೂ ಸಂವಿಧಾನವನ್ನು ಸಂಘ ಪರಿವಾರ ಎಂದೂ ಒಪ್ಪಿಕೊಳ್ಳಲೇ ಇಲ್ಲ. ಅದಕ್ಕೆ ಇತಿಹಾಸವೇ ಸಾಕ್ಷಿ. ಸ್ವಾತಂತ್ರ್ಯ ಚಳವಳಿಯಲ್ಲಿ ಎಂದೂ ಭಾಗವಹಿಸದೆ, ಸ್ವಾತಂತ್ರ್ಯ ಸಂಗ್ರಾಮದ ವಿರುದ್ಧ ಪಿತೂರಿ ನಡೆಸುತ್ತಿದ್ದ ಸಂಘ ಪರಿವಾರ ದೇಶದ ಜನರೆದುರು ಕ್ಷಮೆ ಕೇಳುವ ನೈತಿಕತೆಯನ್ನು ಕಳೆದುಕೊಂಡಿದೆ. ನಮ್ಮ ಪೂರ್ವಜರ ತ್ಯಾಗ ಬಲಿದಾನದಿಂದ ಈ ದೇಶಕ್ಕೆ ನೀಡಿದ ಸ್ವಾತಂತ್ರ್ಯ ಹಾಗೂ ಸಂವಿಧಾನದ ಬಗ್ಗೆ ಮಾತನಾಡುವ ಯಾವ ಹಕ್ಕು ಸಂಘ ಪರಿವಾರಕ್ಕಿಲ್ಲ ಎಂದು ಹೇಳಿದ್ದಾರೆ.

ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುವ ಈ ಸಂವಿಧಾನ ವಿರೋಧಿಗಳು ಸಂವಿಧಾನಕ್ಕೆ ಪರ್ಯಾಯವಾಗಿ ಯಾವ ಸಿದ್ಧಾಂತ ಅಳವಡಿಸಿಕೊಳ್ಳುತ್ತೇವೆ ಎಂದು ಹೇಳುವ ಧೈರ್ಯವಿಲ್ಲ. ಕನಿಷ್ಠ ಪಕ್ಷ ಸಂವಿಧಾನಕ್ಕೆ ಬದಲಾಗಿ ತಮ್ಮ ಮೂಲ ಸಿದ್ಧಾಂತವಾದ ಮನುಸ್ಮೃತಿಯನ್ನು ಜಾರಿಗೆ ತರುತ್ತೇವೆ ಎಂದು ಹೇಳುವ ಧೈರ್ಯವೂ ಇಲ್ಲದ ಹೇಡಿಗಳು. ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರ ಈ ಬದಲಾವಣೆ ಹೇಳಿಕೆಗೂ ನನ್ನ ಸವಾಲಿದೆ. ಜಾತ್ಯತೀತ ಹಾಗೂ ಸಮಾಜವಾದಿ ಪದಗಳನ್ನು ಬದಲಾಯಿಸಿದರೆ ಅದರ ಜಾಗದಲ್ಲಿ ಯಾವುದನ್ನು ಸೇರಿಸುತ್ತೀರಿ ಎಂದು ಬಹಿರಂಗವಾಗಿ ಹೇಳುವ ಧೈರ್ಯ ಇದೆಯಾ? ಸಮಾಜವಾದಿ ಜಾಗದಲ್ಲಿ ಬಂಡವಾಳವಾದವನ್ನು, ಜಾತ್ಯತೀತ ಜಾಗದಲ್ಲಿ ಜಾತಿಶ್ರೆಷ್ಠವಾದವನ್ನು ಸೇರಿಸುತ್ತೇವೆ ಎಂದು ಹೇಳುವ ಧೈರ್ಯ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಸಂಘ ಪರಿವಾರದ ಗುರುಗಳಾದ ಗೋಳ್ವಾಲ್ಕರ್, ಹೆಡ್ಗೆವಾರ್, ಸಾವರ್ಕರ್ ನಿಂದ ಹಿಡಿದು ಈಗಿನ ಹೊಸಬಾಳೆ, ರಸಬಾಳೆವರೆಗೂ ಸಂವಿಧಾನವನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಸಂವಿಧಾನವನ್ನು ಮುಟ್ಟಿದರೆ ರಕ್ತಕ್ರಾಂತಿಗೂ ಸರಿ, ಸಂವಿಧಾನವನ್ನು ಉಳಿಸುವ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಕಾಂಗ್ರೆಸ್ ಪಕ್ಷ ಅಂತಹ ಯಾವ ಬೆಲೆ ತೆತ್ತಾದರೂ ಸರಿ ಸಂವಿಧಾನದ ಪೀಠಿಕೆಯನ್ನು ಬದಲಾಯಿಸಲು ಬಿಡುವುದಿಲ್ಲ ಎಂದು ಬಿ.ಕೆ.ಹರಿಪ್ರಸಾದ್ ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News