×
Ad

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕ್ರಿಮಿನಲ್ ಗಳನ್ನು ಸೃಷ್ಟಿಸುತ್ತಾರೆ. ಹೆಣ ಬಿದ್ದ ಕೂಡಲೇ ಕ್ರಿಮಿನಲ್ ಗಳನ್ನು ಮಹಾತ್ಮರಂತೆ ಬಿಂಬಿಸುತ್ತಾರೆ: ದಿನೇಶ್ ಗುಂಡೂರಾವ್

Update: 2025-05-06 11:03 IST

ದಿನೇಶ್‌ ಗುಂಡೂರಾವ್‌

ಬೆಂಗಳೂರು: ಕರಾವಳಿಯನ್ನು ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್ಗಳ ನಿಜವಾದ ಸೃಷ್ಟಿಕರ್ತರು. ಇವರು ಅಧಿಕಾರದಲ್ಲಿದ್ದಾಗ ಕ್ರಿಮಿನಲ್ ಗಳನ್ನು ಸೃಷ್ಟಿಸುತ್ತಾರೆ. ಅವರ ಮೇಲೆ ರೌಡಿ ಶೀಟರ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೆ ಅದೇ ಕ್ರಿಮಿನಲ್ ಗಳನ್ನು ಮಹಾತ್ಮರಂತೆ ಬಿಂಬಿಸಿ ಹುತಾತ್ಮರನ್ನಾಗಿ ಮಾಡುತ್ತಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಆರೋಗ್ಯ ಸಚಿವರ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯನ್ನು ಬಿಜೆಪಿ ರಾಜಕಾರಣಕ್ಕೆ ಬಳಸುತ್ತಿದೆ ಎಂದು ಆರೋಪಿಸಿರುವ ಸಚಿವರು, 2020ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಸುಹಾಶ್ ಶೆಟ್ಟಿ ವಿರುದ್ದ ರೌಡಿ ಶೀಟರ್ ತೆರೆಯಲು ಪೊಲೀಸ್ ಇಲಾಖೆ ನೀಡಿದ್ದ ಆದೇಶದ ಪ್ರತಿಯನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

"ಅಮಾಯಕರ ತಲೆಯಲ್ಲಿ ಮತಾಂಧತೆಯ ಅಮಲು ತುಂಬಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿರುವ ಬಿಜೆಪಿ ನಾಯಕರ ಗಮನಕ್ಕೆ. ಇದು ಇತ್ತೀಚೆಗೆ ಹತ್ಯೆಯಾದ ಸುಹಾಶ್ ಶೆಟ್ಟಿ ವಿರುದ್ದ ರೌಡಿ ಶೀಟರ್ ತೆರೆಯಲು ಪೊಲೀಸ್ ಇಲಾಖೆ ನೀಡಿದ್ದ ಆದೇಶದ ಪ್ರತಿ" ಎಂದು ಸಚಿವರು ಬಿಜೆಪಿಯನ್ನು ಕುಟುಕಿದ್ದಾರೆ.

ಸುಹಾಸ್ ಶೆಟ್ಟಿ ವಿರುದ್ಧ ರೌಡಿ ಶೀಟರ್ ಓಪನ್ ಆಗಿದ್ದು 2020ರಲ್ಲಿ. ಆಗ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರಕಾರ. ಗೃಹ ಸಚಿವರಾಗಿದ್ದ ಪುಣ್ಯಾತ್ಮ ಬಸವರಾಜ ಬೊಮ್ಮಾಯಿ. ಇಂದು ಸುಹಾಸ್ ನನ್ನು ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆಗ ಯಾಕೆ ಸುಹಾಸ್ ನನ್ನು ರೌಡಿ ಪಟ್ಟಿಗೆ ಸೇರಿಸಿದ್ದರು.? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಕರಾವಳಿಯನ್ನು ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್ಗಳ ನಿಜವಾದ ಸೃಷ್ಟಿಕರ್ತರು. ಇವರು ಅಧಿಕಾರದಲ್ಲಿದ್ದಾಗ ಕ್ರಿಮಿನಲ್ಗಳನ್ನು ಸೃಷ್ಟಿಸುತ್ತಾರೆ. ಅವರ ಮೇಲೆ ರೌಡಿ ಶೀಟರ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೆ ಅದೇ ಕ್ರಿಮಿನಲ್ ಗಳನ್ನು ಮಹಾತ್ಮರಂತೆ ಬಿಂಬಿಸಿ ಹುತಾತ್ಮರನ್ನಾಗಿ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಹಾಸ್ ಹತ್ಯೆ ನಂತರ ಕೂಗುಮಾರಿಗಳಂತೆ ಅರಚುತ್ತಿರುವ ರಾಜ್ಯ ಬಿಜೆಪಿ ನಾಯಕರ ಯಾರ ಮಕ್ಕಳಾದರೂ ಧರ್ಮದ ಅಮಲಿನಲ್ಲಿ ಬೀದಿ ಕಾಳಗ ಮಾಡುತ್ತಿದ್ದಾರೆಯೆ.? ಅಥವಾ ಧರ್ಮಕ್ಕಾಗಿ ಬಡಿದಾಡುತ್ತಿದ್ದಾರೆಯೆ.? ಬಿಜೆಪಿ ನಾಯಕರ ಧರ್ಮಾಂಧತೆಗೆ ಬೀದಿ ಹೆಣವಾಗುತ್ತಿರುವುದು ಬಡವರ ಮಕ್ಕಳು. ಇದು ಸತ್ಯವಲ್ಲವೆ.? ಎಂದವರು ಪ್ರಶ್ನಿಸಿದ್ದಾರೆ.

ಬಿಜೆಪಿಯವರ ಕೆಟ್ಟ ರಾಜಕೀಯಕ್ಕೆ ಕರಾವಳಿಯಲ್ಲಿ ಎಷ್ಟೋ ಜನರ ಬಲಿಯಾಗಿದೆ. ಎಷ್ಟೋ ಮನೆಗಳ ದೀಪ ಆರಿ ಹೋಗಿದೆ. ಇಷ್ಟಾದರೂ ಇವರ ರಕ್ತದಾಹ ನಿಂತಿಲ್ಲ. ಕರಾವಳಿಯಲ್ಲಿ ಇನ್ನಷ್ಟು ಹೆಣ ಬೀಳಬೇಕು ಎನ್ನುವ ಉದ್ದೇಶದಿಂದ ದುಷ್ಟ ರಾಜಕಾರಣ ಮಾಡುತ್ತಿದ್ದಾರೆ.

ದ.ಕನ್ನಡದ ಜನ ಪ್ರಜ್ಞಾವಂತಿಕೆಯ ಜೊತೆಗೆ ಸೂಕ್ಷ್ಮತೆಯನ್ನು ಅರಿತುಕೊಂಡವರು. ಇನ್ನಾದರೂ ಕರಾವಳಿಯ ಜನ ಬಿಜೆಪಿಯ ಹುನ್ನಾರ ಅರಿಯಬೇಕಿದೆ. ಇಲ್ಲದಿದ್ದರೆ ಬಿಜೆಪಿಯವರ ಕೆಟ್ಟ ರಾಜಕಾರಣಕ್ಕೆ ಜಿಲ್ಲೆಯ ನೆಮ್ಮದಿಯೇ ಹಾಳಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಎಚ್ಚರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News