ನಾವು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ, ಸಂವಿಧಾನದಾನದ ಆಶಯಗಳನ್ನು ಪ್ರತಿಪಾದನೆ ಮಾಡುತ್ತಿದ್ದೇವೆ: ಸಚಿವ ಎಚ್.ಸಿ ಮಹದೇವಪ್ಪ
Photo : X/@CMofKarnataka
ಬೆಂಗಳೂರು : ನಾವು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ.ಸಂವಿಧಾನದಾನದ ಆಶಯಗಳನ್ನು ಪ್ರತಿಪಾದನೆ ಮಾಡುತ್ತಾ ಇದ್ದೇವೆ. ಜೊತೆಗೆ ಅದನ್ನು ನಿರ್ದೇಶನ ಮಾಡುವ ಕಾರ್ಯವನ್ನು ನಾವು ಮಾಡಿ ತೋರಿಸಿದ್ದೇವೆ ಸಚಿವ ಡಾ.ಎಚ್.ಮಹದೇವಪ್ಪ ಹೇಳಿದ್ದಾರೆ.
ಶನಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿದ್ದ ‘ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ’ವನ್ನು ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂವಿಧಾನ ಉಳಿಸುವ ಜೊತೆಗೆ, ಈ ಗ್ರಂಥವೇ ನಮ್ಮ ಜೀವನ ಎಂಬ ಅಂಶವನ್ನಿಟ್ಟುಕೊಂಡು ರಾಷ್ಟ್ರೀಯ ಚಳವಳಿಯೊಂದು ಆಗಲಿ. ಕೆಲವರು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ಸರ್ವಾಧಿಕಾರಿ ಧೋರಣೆ, ಧಾರ್ಮಿಕ ಒಲುವುಗಳನ್ನು ತಂದು ಸಂವಿಧಾನ, ಸ್ವಾತಂತ್ರ್ಯದ ಆಶಯಕ್ಕೆ ಭಂಗ ತರುವಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ, ನಮ್ಮ ಸರಕಾರ ಯಾವುದೇ ರಾಜಕೀಯ ಲಾಭ ಇಲ್ಲದೆ. ಓಟಿನ ಲೆಕ್ಕಾಚಾರ ಇಲ್ಲದೆ. ಜನಕ್ಕೆ ಸಂವಿಧಾನದ ಆಶಯ ಹಾಗೂ ಸಮೃದ್ಧ ಭಾರತ ಕಟ್ಟಲು ಅನುವಾಗುವ ಕಾರ್ಯಕ್ಕೆ ಅನುವು ಮಾಡುತ್ತಿದೆ ಎಂದು ನುಡಿದರು.
ಈ ಬಾರಿ ಅಧಿಕಾರಕ್ಕೆ ಬಂದ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರಕಾರ ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯ ಮಾಡಿ, ಎಲ್ಲರಿಗೂ ಸಂವಿಧಾನದ ಆಶಯ ಅರ್ಥವಾಗುವಂತೆ ಮಾಡಿದ್ದಾರೆ ಎಂದರು.
ರಾಜ್ಯದ 5,600 ಪಂಚಾಯಿತಿಗಳಲ್ಲಿ ಸಂವಿಧಾನ ಜಾಥಾ ಜನಜಾಗೃತಿ ಮಾಡಿದೆ. ಇದರ ಜೊತೆಗೆ ಎರಡು ದಿನಗಳ ಈ ಬೃಹತ್ ಸಮಾವೇಶದಲ್ಲಿ ¸ಸಂವಿಧಾನದ ಮೂಲ ಆಶಯವನ್ನು ಜನರಿಗೆ ತಿಳಿಸಿಕೊಡುವ ಸಲುವಾಗಿ ವಿವಿಧ ತಜ್ಞರ ನೇತೃತ್ವದಲ್ಲಿ ಸಮಾವೇಶ, ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ ಎಂದು ಸಚಿವರು ಹೇಳಿದರು.