‘ಮೈಸೂರು ದಸರಾ’ | ಕೆಎಸ್ಸಾರ್ಟಿಸಿಯಿಂದ 3 ಸಾವಿರ ಹೆಚ್ಚುವರಿ ಬಸ್ ವ್ಯವಸ್ಥೆ
ಬೆಂಗಳೂರು : ಸಾಲು-ಸಾಲು ಸರಕಾರಿ ರಜೆಗಳ ಹಿನ್ನೆಲೆ, ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರಿಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅ.16ರಿಂದ ಅ.20ರ ವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ)ವು 3ಸಾವಿರ ಹೆಚ್ಚುವರಿ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಶನಿವಾರ ಮಾಧ್ಯಮ ಪ್ರಕಟನೆ ನೀಡಿರುವ ಕೆಎಸ್ಸಾರ್ಟಿಸಿ, ಪ್ರಸ್ತುತ ಕಾರ್ಯಾಚರಣೆ ಮಾಡುತ್ತಿರುವ ಕರ್ನಾಟಕ ಸಾರಿಗೆ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್‍ಕ್ಲಾಸ್ ಹಾಗೂ ಅಂಬಾರಿ ಕ್ಲಬ್‍ಕ್ಲಾಸ್, ಪಲ್ಲಕ್ಕಿ ಸ್ಲೀಪರ್, ಅಶ್ವಮೇಧ ಬಸ್ ಸೇವೆ ಜೊತೆಗೆ ಹೆಚ್ಚುವರಿಯಾಗಿ 3ಸಾವಿರ ಬಸ್‍ಗಳ ವಿಶೇಷ ಸಾರಿಗೆ ಸೇವೆಯನ್ನು ಒದಗಿಸಲಾಗುವುದು. ದಸರಾ ಹಿನ್ನೆಲೆಯಲ್ಲಿ ಅ.16ರಿಂದ ಅ.20ರ ವರೆಗೆ ಬೆಂಗಳೂರಿನಿಂದ ರಾಜ್ಯ, ಅಂತಾರಾಜ್ಯದ ವಿವಿಧ ಸ್ಥಳಗಳಿಗೆ ಈ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ(ಮೆಜಸ್ಟಿಕ್), ಮೈಸೂರು ರಸ್ತೆ ಬಸ್ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಶೇಷ ಬಸ್‍ಗಳ ಸೇವೆ ದೊರೆಯಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ವಿಜಯನಗರ, ಯಶವಂತಪುರ, ಜಯನಗರ, ಬಸವೇಶ್ವರನಗರ, ದೊಮ್ಮಲೂರು ಬನಶಂಕರಿ ಹಾಗೂ ಇತರ ಬಸ್ ನಿಲ್ದಾಣಗಳಿಂದ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.
ನಂತರ ರಾಜ್ಯದ ಮತ್ತು ಅಂತರ್ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಅ.20-21ರಂದು ಪ್ರಯಾಣಿಕರು ಮರಳಿ ಬರಲು ಅನುಕೂಲವಾಗುವಂತೆ ವಿಶೇಷ ಬಸ್ ಸೇವೆ ಕಲ್ಪಿಸಲಾಗುವುದು ಎಂದು ಕೆಎಸ್ಸಾರ್ಟಿಸಿ ಮಾಹಿತಿ ನೀಡಿದೆ.
ದಾವಣಗೆರೆ, ಗೋಕರ್ಣ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಮಂಗಳೂರು, ಉಡುಪಿ, ಕುಂದಾಪುರ, ಪುತ್ತೂರು, ಧರ್ಮಸ್ಥಳ, ಕುಕ್ಕೆಸುಬ್ರಹಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ನೆರೆ ರಾಜ್ಯಗಳಲ್ಲಿನ ಹೈದರಾಬಾದ್, ವಿಜಯವಾಡ, ನೆಲ್ಲೂರು, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಕುಂಭಕೋಣಂ, ಕೊಯಂಬತ್ತೂರು, ಮಧುರೈ, ಪಣಜಿ, ಮಂತ್ರಾಲಯ, ಪೂನಾ, ಎರ್ನಾಕುಲಂ ಹಾಗೂ ಇತರೆ ಸ್ಥಳಗಳಿಗೆ ವಿಶೇಷ ಬಸ್ ಸೇವೆ ಕಲ್ಪಿಸಲಾಗುತ್ತಿದೆ ಎಂದು ಕೆಎಸ್ಸಾರ್ಟಿಸಿ ವಿವರಿಸಿದೆ.
ದಸರಾಗೆ 700 ವಿಶೇಷ ಬಸ್ :
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 300 ಹೆಚ್ಚುವರಿ ಬಸ್‍ಗಳು, ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಕೆಆರ್ ಎಸ್ ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು ಮಡಿಕೇರಿ, ಮಂಡ್ಯ, ಮಳವಳ್ಳಿ, ಎಚ್.ಡಿ.ಕೋಟೆ, ಚಾಮರಾಜನಗರ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ ಇತ್ಯಾದಿ ಸ್ಥಳಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 400 ಹೆಚ್ಚುವರಿ ಬಸ್‍ಗಳನ್ನು ಒದಗಿಸಲಾಗುತ್ತದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಮೂಲಕ ನೇರ ಬಸ್ ಸೇವೆ ದೊರೆಯಲಿವೆ ಎಂದು ಕೆಎಸ್ಸಾರ್ಟಿಸಿ ಮಾಹಿತಿ ನೀಡಿದೆ.