ಅಕ್ಕನ ಬಳಗಗಳೆಂಬ ಮಹಿಳಾ ಅಸ್ಮಿತೆ
ಆ ಸಮೂಹ ಗಾನದಲ್ಲಿ ಯಾರೂ ಮುಖ್ಯರಲ್ಲ. ಅಮುಖ್ಯರೂ ಅಲ್ಲ. ಎಲ್ಲರಿಗೂ ಸಮಾನ ಸ್ಥಾನಮಾನ. ಕಂಠದಲ್ಲಿ ಸುಮಧುರ, ಅಮಧುರ ಎಂಬ ತಾರತಮ್ಯವಿಲ್ಲ. ಎಲ್ಲರೂ ಹಾಡಬೇಕು, ಹಾಡುತ್ತಾರೆ. ಸ್ವಂತ ಪದ ರಚಿಸಿಯೂ ಹಾಡುತ್ತಾರೆ. ಅವರ ಗ್ರಹಿಕೆಯ ಶರಣರ ಜೀವನ ಚರಿತ್ರೆಗಳಿಗೆ ಬೇರೆಯದೆ ಆಯಾಮಗಳಿರುತ್ತವೆ. ಶರಣರ ಕುರಿತ ಜನಪದ ಕಥಾನಕಗಳೇ ಹಾಡುಗಳಾಗಿವೆ. ಔಪಚಾರಿಕ ಗ್ರಂಥಗಳಲ್ಲಿ ಸಿಗದ ಅನೇಕ ಹೊಳಹುಗಳು ಈ ಬಗೆಯ ಮೌಖಿಕ ಕಥನಗಳಲ್ಲಿ ಸಿಗುತ್ತವೆ. ನಮ್ಮ ಶಿಷ್ಟಲೋಕ ಈವರೆಗೂ ಅನೌಪಚಾರಿಕ ಕಥನ ಕಾವ್ಯಗಳನ್ನು ಚಾರಿತ್ರಿಕ ನಿಕಷಕ್ಕೊಡ್ಡಿ ಅವುಗಳನ್ನು ಇತಿಹಾಸದ ಮೂಲಾಧಾರಗಳೆಂದು ಗುರುತಿಸದೆ ಇರುವುದು ಕೂಡ ಮಿತಿಯೇ ಆಗಿದೆ ಎಂಬುದು ಉತ್ಪ್ರೇಕ್ಷೆಯೇನಲ್ಲ.
ಕಳೆದ ವಾರ ಮನೆಯ ವಯೋವೃದ್ಧ ಮಹಿಳೆ 97 ವಯಸ್ಸಿನವರೊಬ್ಬರು ಲಿಂಗೈಕ್ಯರಾದರು. ವಯೋಸಹಜ ಅಶಕ್ತತೆಯಿಂದ ಬಳಲುತ್ತಿದ್ದ ಅವರು ಒಂದೇ ದಿನದ ಆರೈಕೆಯಲ್ಲಿಯೇ ಕಣ್ಮುಚ್ಚಿದರು. ಹೀಗೆ ಸಾವನ್ನಪ್ಪುವುದು ಸಹಜ. ಇದರಲ್ಲಿ ಹೇಳಬೇಕಾದ ವಿಶೇಷ ಅಂಶವೇನಿಲ್ಲ. ಆದರೆ ಅವರು ಸಾವಿನ ಐದಾರು ಗಂಟೆ ಮೊದಲು ನಡೆಸಿದ ಸಂವಾದ, ವಚನ ಪಠಣ, ಭಜನೆ ಪದಗಳ ಹಾಡುಗಾರಿಕೆ ಇತ್ತಲ್ಲ! ಅದು ಎಂಥವರನ್ನಾದರೂ ಕ್ಷಣ ಯೋಚಿಸುವಂತೆ ಮಾಡಿತ್ತು. ದೂರದಲ್ಲಿದ್ದ ಮಕ್ಕಳು, ಮೊಮ್ಮಕ್ಕಳನ್ನು ಕರೆಸಿಕೊಂಡ ಆಕೆ ಅವರೊಂದಿಗೆ ಕೊನೆಯ ಘಳಿಗೆಯಲ್ಲಿಯೂ ಮನ ಬಿಚ್ಚಿ ಹೇಳಿದ್ದು ಬಸವಾದಿ ಶರಣರ ವಚನಗಳು ಮತ್ತು ಭಜನೆ ಪದಗಳು ಮಾತ್ರ. ಎಲ್ಲಿಯೂ ಸಾವಿನ ಭಯವಾಗಲಿ, ಬದುಕಿನಲ್ಲಿ ಇನ್ನೇನೋ ಬಯಕೆಗಳಿವೆ ಎಂಬುದನ್ನಾಗಲಿ ಹೇಳಲಿಲ್ಲ. ಕೊನೆಯ ಒಂದೆರಡು ತಿಂಗಳಂತೂ ಆಕೆ ವಚನ-ಪದಗಳಲ್ಲಿಯೇ ಕಾಲ ಕಳೆದಿದ್ದರು. ಅದಕ್ಕೆ ಕಾರಣ ಇಲ್ಲದಿಲ್ಲ. ಮಧ್ಯಮ ವರ್ಗದ ಸಾಮಾನ್ಯ ಕುಟುಂಬದಿಂದ ಬಂದಿದ್ದ ಆಕೆ ಹುಟ್ಟಿದ್ದು ಬಸವಕಲ್ಯಾಣ.
ಬಸವಕಲ್ಯಾಣ ಎಂದರೇನೆ ಅದು ವಚನ, ತತ್ವಪದಗಳ ಝೇಂಕಾರದ ಗೂಡು. ಅದರಲ್ಲಿಯೂ ಮಧ್ಯಮ ವರ್ಗದ ಕುಟುಂಬದ ಹೆಣ್ಣುಮಕ್ಕಳು ಅಕ್ಕನ ಬಳಗಗಳೆಂಬ ಅಸ್ಮಿತೆಗಳಲ್ಲಿಯೇ ತಮ್ಮನ್ನು ಭದ್ರಪಡಿಸಿಕೊಂಡದ್ದು ಇದೆ. ಹೇಳಿ ಕೇಳಿ ಕಲ್ಯಾಣ ಕರ್ನಾಟಕ ಪ್ರದೇಶ ಮೊಗಲಾಯಿ ಏರಿಯಾ. ಇಲ್ಲಿನ ಬದುಕೆಲ್ಲವೂ ಶಾಹಿ ಅಂದಾಜಿನಲ್ಲಿಯೇ ಸಂಪನ್ನಗೊಳ್ಳುತ್ತಿತ್ತು. ಮಹಿಳೆಯರ ಮಟ್ಟಿಗಂತೂ ಅದು ಹುಸಿ ಮರ್ಯಾದೆಯ ಬಂದಿಖಾನೆಗಳ ಬದುಕು. ಭಾರತವು ಗಣರಾಜ್ಯೋತ್ಸವ ಎಂದು ಘೋಷಿಸಿಕೊಂಡು ಸ್ವತಂತ್ರ ಸಂವಿಧಾನವೊಂದನ್ನು ಸಿದ್ಧಪಡಿಸಿ ಅಂಗೀಕಾರಗೊಂಡು, ತನ್ಮೂಲಕ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳು ಜಾರಿಗೊಂಡು ಅನುಷ್ಠಾನಕ್ಕೆ ಬರುವವರೆಗೂ ಇಲ್ಲಿ ಪಕ್ಕಾ ಫ್ಯೂಡಲ್ ತತ್ವಗಳೇ ಜಾರಿಯಾಗುತ್ತಿದ್ದವು. ಹೀಗಾಗಿ ಮಹಿಳೆಯರು ಮನೆ ಬಿಟ್ಟು ಹೊರಗೆ ಬರುವುದು, ಶಾಲೆಗಳಿಗೆ ಹೋಗುವುದು ಅಥವಾ ಮಾರ್ಕೆಟ್‌ಗೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವುದು ಇತ್ಯಾದಿ ಇರಲೇ ಇಲ್ಲ. ಎಷ್ಟೋ ಸಲ ಮಹಿಳೆಯರು ತಮ್ಮ ಮನೆಯ ಅಂಗಳಕ್ಕೆ ಬಂದು ಖುಲ್ಲಾ ಆಟ ಆಡುವುದು ದುಸ್ತರವಾಗಿತ್ತು. ಋತುಮತಿಯಾಗುವವರೆಗೂ ತವರು ಮನೆಯ ನಾಲ್ಕು ಗೋಡೆಗಳು; ಅಲ್ಲಿಯೂ ಅಡುಗೆ ಮನೆ, ದೇವರ ಮನೆ, ನಡುಮನೆ ಬಹಳವಾದರೆ ಪಡಸಾಲೆಯವರೆಗೆ ಮಾತ್ರ ಅವರ ಸರಹದ್ದು. ಅದರಾಚೆ ಹೋಗುವುದು ಎಂದರೆ ಬಡವರಾದರೆ ಬಹಿರ್ದೆಸೆಗೆಂದು ತಿಪ್ಪೆಗೆ ಹೋಗುವುದು. ಶ್ರೀಮಂತ ಮನೆಯ ಹೆಣ್ಣುಮಕ್ಕಳಿಗೆ ತಿಪ್ಪೆಗೆ ಹೋಗುವ ಅವಕಾಶವೂ ಇರಲಿಲ್ಲ. ಅವರು ಮನೆ ಹಿಂದಿನ ಹಿತ್ತಲಿಗೆ ಹೋಗಬೇಕು. ತಿಪ್ಪೆಗೆ ಹೋದಾಗ ಮಾತ್ರ ಗೆಳತಿಯರೊಂದಿಗೆ ಒಂದಷ್ಟು ಹರಟೆ, ಮಾತು, ಸಲ್ಲಾಪ ಇರುತ್ತಿತ್ತು. ಅದು ಬಿಟ್ಟರೆ ಗಂಡನ ಮನೆಗೆ ಹೋಗವಾಗಲೇ ಅವರು ಹೊರ ಬರುವುದಿತ್ತು. ಒಮ್ಮೆ ಗಂಡನ ಮನೆಗೆ ಹೋದರೆ ಮುಗಿಯಿತು. ಅಡುಗೆ ಕೋಣೆ, ಶಯ್ಯಾಗಾರ, ಬಾಣಂತಿ ಖೋಲಿ ಬಿಟ್ಟರೆ ಅಂಗಳಕ್ಕೂ ಪ್ರವೇಶ ಅಷ್ಟಕ್ಕಷ್ಟೇ. ಹೊರಗೆ ಹೋಗಲೇಬೇಕಾದ ಪ್ರಸಂಗ ಬಂದರೆ ಪರದೆ ಹಾಕಿದ ಬಂಡಿಗಳಲ್ಲಿ ಪಯಣ. ನಮ್ಮ ಭಾಗದ ಮಧ್ಯಮ ವರ್ಗದ ಮಹಿಳೆಯರಿಗೆ ಚಪ್ಪಲಿಗಳು ಇರುತ್ತಿರಲಿಲ್ಲ. ಕಾರಣ ಅವರು ಮನೆ ಬಿಟ್ಟು ಹೊರ ಹೋಗುವ ಪ್ರಸಂಗವೇ ಇರುತ್ತಿರಲಿಲ್ಲವಾಗಿ ಚಪ್ಪಲಿಗಳ ಅವಶ್ಯಕತೆಯೂ ಇರಲಿಲ್ಲ. ಸಂಬಂಧಿಕರೊಳಗೆ ಮದುವೆಗಳು ಜರುಗುತ್ತಿದ್ದರಿಂದ ಅನೇಕ ಮಹಿಳೆಯರು ತಮ್ಮ ಊರನ್ನು ಬಿಟ್ಟು ಇನ್ನೊಂದು ಊರನ್ನು ನೋಡಿರದಿದ್ದರೆ ಅದೇನು ಆಶ್ಚರ್ಯದ ವಿಷಯವಾಗಿರಲಿಲ್ಲ. ಇಂಥ ಅನೌಪಚಾರಿಕ ಅರಿ ಭಯಂಕರ ಬಂಧನದಲ್ಲಿ ಬಿದ್ದು ಒದ್ದಾಡುತ್ತಿದ್ದವರಿಗೆ ಅಕ್ಕನ ಬಳಗಗಳೆಂಬ ಹೊರ ಚಾಚುಗಳು ನಭೋಸ್ಪರ್ಶಿ ಅವಕಾಶಗಳಾಗಿ ಒದಗಿ ಬಂದವು.
ಉತ್ತರ ಕರ್ನಾಟಕ ಒಳಗೊಂಡಂತೆ ಕಲ್ಯಾಣ ಕರ್ನಾಟಕದಲ್ಲಿ ಹೆಣ್ಣುಮಕ್ಕಳು ಒಂದೆಡೆ ಸೇರಿ ಶಿವಶರಣರ ಕುರಿತು ಸ್ತುತಿ ಗೀತೆಗಳು, ವಚನಗಳು ಮತ್ತು ತತ್ವಪದಗಳನ್ನು ಸಮೂಹದಲ್ಲಿ ಹಾಡುವ ಈ ಮೇಳಗಳಿಗೆ ಅಕ್ಕನ ಬಳಗವೆಂದು ಕರೆದುಕೊಂಡರು. ಭಾರತದ ಮೊದಲ ಸ್ತ್ರೀವಾದಿ ಹೊಳಹು ಎಂದು ಕರೆಸಿಕೊಳ್ಳುತ್ತಿರುವ; 12ನೇ ಶತಮಾನದ ಶರಣಸಂದೋಹದಲ್ಲಿ ಕಾಣಿಸಿ ಕೊಂಡಿದ್ದ ಅಕ್ಕಮಹಾದೇವಿಯ ನಾಮಧೇಯದಿಂದ ಇವು ಬೆಳೆದು ಬಂದದ್ದು ಸೂಕ್ತವೆ ಆಗಿತ್ತು. ‘‘ನಾಮದಲ್ಲಿ ಹೆಂಗೂಸಾದಡೇನು ಭಾವಿಸಲು ಗಂಡುರೂಪು ನೋಡಾ’’ ಎಂದು ಘೋಷಿಸಿಕೊಂಡಿದ್ದ ಅಕ್ಕಮಹಾದೇವಿ ಮನಕ್ಕೊಪ್ಪದ ಗಂಡನನ್ನು ಧಿಕ್ಕರಿಸಿ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ದಂಗೆ ಎದ್ದದ್ದು ಇವತ್ತಿಗೂ ಸ್ತ್ರೀ ಅಸ್ಮಿತೆಗೆ ಹಿಡಿದ ಪತಾಕೆಯೆ ಹೌದು. ಪುರುಷರಷ್ಟೇ ಮಹಿಳೆಯರಿಗೂ ಸಮಗ್ರ ಅಧಿಕಾರ ಮತ್ತು ಹಕ್ಕುಗಳಿರಬೇಕು ಎಂಬುದನ್ನು ಬದುಕಿ ತೋರಿದ ಅಕ್ಕಮಹಾದೇವಿ, ಆ ಕಾಲದವರಿಗೆ ಭಂಡುಗಾರ್ತಿಯಾಗಿ ಕಂಡಿದ್ದರೆ, ನಂತರದ ಕಾಲಘಟ್ಟದಲ್ಲಿ ಅವಳು ಸ್ತ್ರೀ ಕುಲದ ಅಸ್ಮಿತೆಯಾಗಿ ಕಾಣಿಸಿಕೊಂಡದ್ದು ಉಚಿತವೆ ಆಗಿದೆಯಷ್ಟೆ.
ಇಂಥ ಅಕ್ಕನ ಹೆಸರಿನಿಂದ ಹುಟ್ಟಿಕೊಂಡ ಈ ಬಳಗಗಳು ಧಾರ್ಮಿಕ ಆವರಣವನ್ನು ಹೊಂದಿದ್ದರೂ ಹಿಂದುಳಿದ ಪ್ರದೇಶದ ಮಹಿಳೆಯರಿಗೆ ಸಾಮಾಜಿಕ ಸಂಬಂಧ ಏರ್ಪಡಿಸಿಕೊಳ್ಳುವ ಸಣ್ಣ ಕಿಟಕಿಗಳಾಗಿ ಪರಿಣಮಿಸಿದ್ದವು. ತಮ್ಮ ಓಣಿಯ ಸಮೀಪವಿರುವ ಮಠ, ಗುಡಿ, ಆಶ್ರಮ ಅಥವಾ ಯಾವುದೋ ಗಿಡದ ಕೆಳಗೆ ಬಯಲಾದರೂ ನಡೆದೀತು, ಅಂಥಲ್ಲಿ ವಾರದಲ್ಲಿ ಒಂದು ದಿನ, ಎಲ್ಲರಿಗೂ ಅನುಕೂಲವಾದ ದಿನದಂದು ನಿಗದಿತ ಸಮಯಕ್ಕೆ ಸಾಮಾನ್ಯವಾಗಿ ಸಾಯಂಕಾಲ ಆಗಬೇಕಿತ್ತು. ಮನೆ ಕೆಲಸವೆಲ್ಲ ಮುಗಿದು ಒಂದಷ್ಟು ಬಿಡುವಿನ ಹೊತ್ತು ಅದಾಗುವುದು ಅನಿವಾರ್ಯವಲ್ಲವೆ? ಪುರುಷರಂತೆ ಮಹಿಳೆಯರಿಗೆ ಮನೆ ಕೆಲಸ ಬಿಟ್ಟು ಹೊರ ಹೋಗುವ ಸ್ವಾತಂತ್ರ್ಯವಾದರೂ ಎಲ್ಲಿದೆ? ಬಿಡುವಿನ ಸಮಯದಲ್ಲಿ ನೆರೆಹೊರೆ ಮಹಿಳೆಯರೆಲ್ಲ ಒಂದೆಡೆ ಸೇರಿ ಮನಸೋಇಚ್ಛೆ ಸಾಮೂಹಿಕವಾಗಿ ವಚನ-ಪದಗಳನ್ನು ಹಾಡುವುದು ಇಲ್ಲಿರುತ್ತದೆ. ಇದೊಂದು ಭಕ್ತಿಯ ಸೇವೆ, ಸಾತ್ವಿಕ ಕಾಲಯಾಪನೆ ಎಂಬ ನಂಬಿಕೆ ಇತ್ತು. ಈ ಹಾಡುಗಾರಿಕೆಗೆ ಧಾರ್ಮಿಕ ಪರಿವೇಷ ಇದ್ದುದರಿಂದ ಇಂಥ ಬಳಗಗಳಲ್ಲಿ ಭಾಗವಹಿಸಲು ಮನೆಯವರಿಂದ ಕ್ಯಾತೆ ಇರುತ್ತಿರಲಿಲ್ಲ. ಏನೋ ಮಹಿಳೆಯರು ಒಂದಷ್ಟು ಶಿವನಾಮಸ್ಮರಣೆ ಮಾಡಿ ಪುಣ್ಯ ಪಡೆಯುತ್ತಾರಾದರೆ ಪಡಲಿ ಬಿಡಿ ಎಂಬ ಔದಾಸೀನ್ಯ ಗಂಡಸರಿಗೆ.
ಇಂಥ ನಿರ್ದಿಷ್ಟ ಗೋಷ್ಠಿಗಳಲ್ಲಿಯೇ ನಮ್ಮ ಮಹಿಳೆಯರು ತಮ್ಮ ಹುಡುಕಾಟ ನಡೆಸಿದರು. ಅಕ್ಕನ ಬಳಗದ ಭಜನೆಗಳಲ್ಲಿ ಇರುವಷ್ಟು ಹೊತ್ತು ಅವರನ್ನು ಯಾರೂ ಕೆಣಕುತ್ತಿರಲಿಲ್ಲ. ಅಲ್ಲಿ ಗಂಡಸರ ಸುಳಿವು ಇರುತ್ತಿರಲಿಲ್ಲ. ಹೆಣ್ಣುಮಕ್ಕಳು ತಮ್ಮದೇ ತಾಳ, ದಮಡಿ ಬಳಸಿ ಅದೂ ಇಲ್ಲದಿದ್ದರೆ ಕೈ ತಾಳ ಹಾಕುತ್ತ ಭಕ್ತಿಗೀತೆಗಳು, ತತ್ವಪದಗಳನ್ನು ಹಾಡುತ್ತಾರೆ. ಅವರ್ಯಾರೂ ಶಾಸ್ತ್ರೋಕ್ತವಾಗಿ ಸಂಗೀತ ಕಲಿತವರಲ್ಲ. ಯಾರಲ್ಲಿ ತರಬೇತಿಯೂ ಪಡೆದವರಲ್ಲ. ಒಬ್ಬರ ನೋಡಿ ಇನ್ನೊಬ್ಬರು ತಮಗೆ ತಾವೇ ಸವ್ಯಸಾಚಿಗಳು. ಅಬ್ಬರದ ವಾದ್ಯಗಳಿಲ್ಲ, ದೊಡ್ಡವರ ಶಹಾಭಾಷ್‌ಗಿರಿಯ ಹಂಗಿಲ್ಲ.
ಉಡುತಡಿಯ ಅಕ್ಕಮಹಾದೇವಿಯೆ ಶರಣು ಶರಣಾರ್ಥ
ಅಕ್ಕ ಶರಣು ಶರಣಾರ್ಥಿ॥
ಸೃಷ್ಠಿಯೊಳಗೆ ಮಹಾಶ್ರೇಷ್ಠವೆನಿಸಿತ್ತರಿ ಕಲ್ಯಾಣದ ನಗರ
ಅಲ್ಲಿ ಬಸವಣ್ಣನವರ |
ಅವರ ಭಾವಕ ಭಕ್ತಿಯ ಪರೀಕ್ಷೆಗಾಗಿ ಬಂದಾನ ಶಂಕರ|
ಅಲ್ಲಿ ಬಂದಾನ ಈಶ್ವರ ॥
ಎಂದು ಹಾಡು ಸುರು ಹಚ್ಚಿಕೊಂಡು ಮುನ್ನೆಲೆಯಲ್ಲಿ ಒಬ್ಬರು ಹಾಡಿದರೆ ಹಿನ್ನೆಲೆಯಲ್ಲಿ ಅಲ್ಲಿ ನೆರೆದಿದ್ದವರೆಲ್ಲ ಧ್ವನಿಗೂಡಿಸುತ್ತಾರೆ. ಆ ಸಮೂಹ ಗಾನದಲ್ಲಿ ಯಾರೂ ಮುಖ್ಯರಲ್ಲ. ಅಮುಖ್ಯರೂ ಅಲ್ಲ. ಎಲ್ಲರಿಗೂ ಸಮಾನ ಸ್ಥಾನಮಾನ. ಕಂಠದಲ್ಲಿ ಸುಮಧುರ, ಅಮಧುರ ಎಂಬ ತಾರತಮ್ಯವಿಲ್ಲ. ಎಲ್ಲರೂ ಹಾಡಬೇಕು, ಹಾಡುತ್ತಾರೆ. ಸ್ವಂತ ಪದ ರಚಿಸಿಯೂ ಹಾಡುತ್ತಾರೆ. ಅವರ ಗ್ರಹಿಕೆಯ ಶರಣರ ಜೀವನ ಚರಿತ್ರೆಗಳಿಗೆ ಬೇರೆಯದೆ ಆಯಾಮಗಳಿರುತ್ತವೆ. ಶರಣರ ಕುರಿತ ಜನಪದ ಕಥಾನಕಗಳೇ ಹಾಡುಗಳಾಗಿವೆ. ಔಪಚಾರಿಕ ಗ್ರಂಥಗಳಲ್ಲಿ ಸಿಗದ ಅನೇಕ ಹೊಳಹುಗಳು ಈ ಬಗೆಯ ಮೌಖಿಕ ಕಥನಗಳಲ್ಲಿ ಸಿಗುತ್ತವೆ. ನಮ್ಮ ಶಿಷ್ಟಲೋಕ ಈವರೆಗೂ ಅನೌಪಚಾರಿಕ ಕಥನ ಕಾವ್ಯಗಳನ್ನು ಚಾರಿತ್ರಿಕ ನಿಕಷಕ್ಕೊಡ್ಡಿ ಅವುಗಳನ್ನು ಇತಿಹಾಸದ ಮೂಲಾಧಾರಗಳೆಂದು ಗುರುತಿಸದೆ ಇರುವುದು ಕೂಡ ಮಿತಿಯೇ ಆಗಿದೆ ಎಂಬುದು ಉತ್ಪ್ರೇಕ್ಷೆಯೇನಲ್ಲ.
ಪದ ಮುಗಿದೊಡನೆ ‘‘ಜಗನ್ಮಾತಾ ಅಕ್ಕಮಹಾದೇವಿ ಮಹಾರಾಜಕೀ ಜೈ’’ ಅಥವಾ ಅವರವರ ದೇವರುಗಳ ಜಯಕಾರ ಹಾಕುವುದಲ್ಲದೆ ಗಮಕದಲ್ಲಿ ವಚನಗಳನ್ನು ಹೇಳಿ ಕೊನೆಗೊಂದಿಷ್ಟು ಸಕ್ಕರಿ, ಪುಠಾಣಿ ಪ್ರಸಾದ ಹಂಚಿ ತಮ್ಮ ಮನೆಗಳಿಗೆ ತೆರಳುತ್ತಾರೆ. ಈ ಹಾಡುಗಾರಿಕೆ ಅವರಿಗೆ ಒಂದಷ್ಟು ಉಪಶಮನ ನೀಡಲು ಸಾಕಾಗುತ್ತಿತ್ತು.
ಫ್ಯೂಡಲ್ ಕುಟುಂಬಗಳ ಗಂಡಸರ ದಬ್ಬಾಳಿಕೆ, ಅತ್ತೆ, ನೆಗೆಣ್ಣಿ, ನಾದಿನಿಯರ ಕಿರುಕುಳ, ಮಕ್ಕಳ ಹಟಮಾರಿತನ, ಮೇಲಾಗಿ ಅಪರಂಪಾರ ಮನೆ ಕೆಲಸದ ಒತ್ತಡ, ಉಪವಾಸ, ವನವಾಸ, ದೇವರು ದಿಂಡರ ಚಾಕರಿ, ಬೀಗರ ಬಿಜ್ಜರ ಮೇಹರಬಾನಕಿ ಇವುಗಳಿಂದ ಬಸವಳಿದು ಸೋತು ಸುಣ್ಣವಾಗಿದ್ದ ಜೀವಕ್ಕೆ ತಾಸೊತ್ತಿನ ಈ ಭಜನೆ ತುಸುವೇ ನೆಮ್ಮದಿ ಕೊಡುವ ತಾಣವಾಗಿತ್ತು. ಅಲ್ಲಿ ಶರಣ, ಶರಣೆಯರ ಜೀವನ ಚರಿತ್ರೆಗಳು, ಹೇಮರಡ್ಡಿ ಮಲ್ಲಮ್ಮ, ಕೊಳ್ಳೂರು ಕೊಡಗೂಸು ಮುಂತಾಗಿ ಚರಿತ್ರೆ ಪುರುಷರು ಕಥೆಗಳನ್ನು ಹಾಡಿನ ರೂಪದಲ್ಲಿ ಕೇಳಿಸಿಕೊಳ್ಳುವುದು ಅವರಿಗೆ ತಮ್ಮದೇ ಬದುಕಿನ ಗಾಥೆ ಕೇಳಿದಂತೆ ಭಾವವೀರೇಚನಕ್ಕೆ ದಾರಿ ಮಾಡುತ್ತಿತ್ತು. ಇವು ಒಂದು ರೀತಿಯಲ್ಲಿ ಅನುಭಾವದ ಗರಡಿ ಮನೆಗಳು ಆಗುವುದಿತ್ತು. ಸಾಮಾನ್ಯರಂತೆ ಕಾಣುತ್ತಿದ್ದ ಈ ಮಹಿಳೆಯರು ಅನೇಕ ಸಲ ಜೀವನಾನುಭಾವದ ಮೂಸೆಯಲ್ಲಿ ಮಿಂದೆದ್ದ ಮಿಸುನಿಗಳಂತೆ ಥಳಥಳಿಸುವುದಿತ್ತು. ಮನೆಯವರ ಮೇಲೆ ತೀರಿಸಿಕೊಳ್ಳಲಾಗದ ಕೋಪ, ತಾಪ, ಅಸಹಾಯಕತೆಗಳ ಓಘ, ಓಹಟಿಗಳನ್ನು ಅವರು ಕೈ ತಾಳಗಳ ರಭಸದಲ್ಲಿ, ಉಚ್ಚಕಂಠದ ಪರಾಕಾಷ್ಠೆಯಲ್ಲಿ, ಉಡತಿ ಪದಗಳ ತೀವ್ರತೆಯಲ್ಲಿ ಹೊರ ಹಾಕಿ ನಿರುಮ್ಮಳವಾಗುತ್ತಿದ್ದರು. ಔಪಚಾರಿಕ ವಿದ್ವತ್‌ಲೋಕಕ್ಕಾಗಲಿ, ತಥಾಕಥಿತ ಧರ್ಮದುರಂಧರರ ಗಮನಕ್ಕಾಗಲಿ ಬರದ ಈ ಗೋಷ್ಠಿಗಳು ಸಾಮಾನ್ಯ ಮಹಿಳೆಯರಿಗೆ ಅನುಭಾವದ ಗರಡಿ ಮನೆಗಳಾಗಿ ಒದಗಿ ಬಂದವು.
ಕಲ್ಯಾಣ ಕರ್ನಾಟಕ ಭಾಗದ ಮಹಿಳೆಯರಿಗಂತೂ ಅಕ್ಕನ ಬಳಗಗಳು ಬಹು ದೊಡ್ಡ ಅವಕಾಶವಾಗಿ ಒದಗಿ ಬಂದಿವೆ. ಈ ಭಾಗದ ಪ್ರತಿಯೊಂದು ಗ್ರಾಮಗಳಲ್ಲಿ ಓಣಿಗೊಂದರಂತೆ ಕೂಲಿ ಕಾರ್ಮಿಕರಾದಿ ಮಧ್ಯಮ ವರ್ಗದ ಮಹಿಳೆಯರ ನಡುವೆ ಇವು ಅಸ್ತಿತ್ವದಲ್ಲಿವೆ. ಸಾಂಸ್ಕೃತಿಕವಾಗಿ ಸಂಪೂರ್ಣ ಮೂಲೆಗೆ ಒತ್ತಲ್ಪಟ್ಟಿದ್ದ ಮಹಿಳೆಯರಿಗೆ ಹಾಡು, ನೃತ್ಯ, ಕುಣಿತ, ಮಾತು, ಭಾಷಣ ಇತ್ಯಾದಿಗಳ ಅವಕಾಶವೂ ಈ ಅಕ್ಕನ ಬಳಗದಲ್ಲಿ ದೊರೆಯುವ ಸಾಧ್ಯತೆ ಇತ್ತು. ಇಂಥ ಅಕ್ಕನ ಬಳಗಗಳಲ್ಲಿ ಪಳಗಿದ ನೂರಾರು ಮಹಿಳೆಯರು ಅಂತ್ಯ ಕಾಲದಲ್ಲಿ ಮನೆಗೆ ಭಾರವಾಗದಂತೆ ಬದುಕಲು ಸಾಧ್ಯವಾದದ್ದು ಕೂಡ ದೊಡ್ಡ ಉಪಲಬ್ಧಿಯೆ ಸರಿ. ಇಲ್ಲಿ ಹಲವು ಮಹಿಳೆಯರು ಅಕ್ಷರಗಳನ್ನು ಕಲಿತದ್ದೂ ಇದೆ. ವಚನಗಳ ನಿರಂತರ ಪಠಣ ಅವರಲ್ಲಿ ಸಣ್ಣ ಮಟ್ಟದ ವೈಚಾರಿಕತೆಯನ್ನು ಬೆಳಸಿದೆ. ಮಹಿಳೆಯರು ಒಂದೆಡೆ ಸೇರಿದರೆ ಕೇವಲ ಜಾಡಿ-ಚುಗಲಿ ಮಾತಾಡುತ್ತಾರೆ ಅಥವಾ ಸೀರೆ, ಬಂಗಾರ, ಶೃಂಗಾರ ಕುರಿತು ಮಾತಾಡುತ್ತಾರೆ ಎಂಬ ಅಪಪ್ರಚಾರವನ್ನು ಈ ಅಕ್ಕನ ಬಳಗಗಳು ಸುಳ್ಳೆಂದು ಎತ್ತಿ ತೋರಿಸಿವೆ. ಈ ಮೇಲೆ ದಾಖಲಿದ ವಯೋವೃದ್ಧೆ ಪಾರ್ವತಿ ನಿಗ್ಗಡಗಿ ಎಂಬವರು ಸಾಮಾನ್ಯ ಕುಟುಂಬದಿಂದ ಬಂದಿದ್ದರೂ ಕಲ್ಯಾಣದ ಶರಣರ ಬದುಕನ್ನು ತಮ್ಮದೇ ಮಿತಿಯಲ್ಲಿ ಗ್ರಹಿಸಿಕೊಂಡು ಏಳು ಮಕ್ಕಳ ತುಂಬ ಸಂಸಾರವನ್ನು ನಿರ್ವಹಿಸುತ್ತಲೇ ಕಲಬುರಗಿ ನಗರದಲ್ಲಿ ಅಕ್ಕನ ಬಳಗಗಳನ್ನು ಕಟ್ಟಿದ್ದರು. ನೂರಾರು ಕೂಲಿ ಕಾರ್ಮಿಕ ಮಹಿಳೆಯರಿಗೆ ವಚನಗಳನ್ನು ಕಂಠ ಪಾಠ ಮಾಡಿಸಿದ್ದರು. ಶರಣರ ಬದುಕನ್ನು ತಿಳಿಸಿ ಹೇಳಿದರಲ್ಲದೆ ಬಳಗದಲ್ಲಿ ಬಂದು ಕುಳಿತಾಗ ಯಾರೂ ಮನೆ.ಸಂಸಾರದ ಮಾತುಗಳನ್ನು ಆಡಬಾರದೆಂದು ನಿಯಮ ಮಾಡಿದ್ದರು. ಸ್ವಂತ ಪದಗಳನ್ನು ಕಟ್ಟಿ ರಾಗ ಸಂಯೋಜನೆ ಮಾಡಿ ಪ್ರಸಾರ, ಪ್ರಚಾರ ಮಾಡುವುದು ಇತ್ತು. ನೂರಾರು ವಚನಗಳನ್ನು ಕಂಠ ಪಾಠ ಮಾಡಿದ್ದ ಅವರು ವಚನ ಸಂಸ್ಕೃತಿಯನ್ನು ಬದುಕಿದ್ದರು. ಹೀಗಾಗಿಯೇ ಅವರ ಒಳ ಹೊರಗು ಪಕ್ವವಾಗಿ ಸಾವಿನ ಸಮ್ಮುಖದಲ್ಲಿ ಅಂಥ ಧೀಮಂತಿಕೆ ಪಡೆಯಲು ಸಾಧ್ಯವಾಗಿತ್ತು. ಪಾರ್ವತಿ ನಿಗ್ಗುಡಗಿ ಒಂದು ಉದಾಹರಣೆ ಮಾತ್ರ. ಅಂಥ ನೂರಾರು ಪ್ರಾಯೋಗಿಕ ಧೀಮಂತೆಯರು ಈ ನಾಡಿನಲ್ಲಿ ಬದುಕು ಕಟ್ಟಿಕೊಂಡು ನಡೆಯುತ್ತಿದ್ದಾರೆ. ಅವರು ತಮ್ಮಲ್ಲಿಯೆ ಮುಚ್ಚಿದ ಖೇದಿಗೆಯಾಗಿ ಪರಿಮಳಿಸುತ್ತಿರುವುದರಿಂದ ಹೊರ ಜಗತ್ತಿಗಾಗಲಿ, ಇತಿಹಾಸದ ತೆಕ್ಕೆಗಾಗಲಿ ಒದಗಿ ಬಂದಿಲ್ಲ. ಈ ಭಾಗದ ಜನಮಾನಸವನ್ನು ಇನ್ನಿಲ್ಲದಂತೆ ಪ್ರಭಾವಿಸಿದ ವಚನ ಸಂಸ್ಕೃತಿಯ ಸಂಕೀರ್ಣ ಆಯಾಮಗಳನ್ನು, ನಾಡವರ ಸಹಜ ಬದುಕ ಭಿತ್ತಿಯಲ್ಲಿ ಹುಡುಕುವ ಕೆಲಸ ಮಾಡಬೇಕಿದೆ. ನೈಜ ಇತಿಹಾಸ ರಾಜ-ಮಹಾರಾಜರ ಕುರಿತ ಕೃತಿಗಳು, ಕೈಫಿಯತ್ತುಗಳು, ಶಾಸನ, ಆಸ್ಥಾನ ಪಂಡಿತರ ಕಾವ್ಯ ಹಾಗೂ ಔಪಚಾರಿಕ ಮೂಲಾಧಾರಗಳಲ್ಲಿ ದೊರೆಯುವುದಿಲ್ಲ. ಅಲ್ಲಿ ಸಿಗುವುದು ಹಣ್ಣಿನ ಮೇಲಿನ ಸಿಪ್ಪೆ ಮಾತ್ರ. ನಿಜವಾದ ಹೂರಣ ಅರಿಯಲು ಅನೌಪಚಾರಿಕ ಮೌಖಿಕ ಪರಿಕರಗಳಿಗೆ ಮುಖಾಮುಖಿಯಾಗಬೇಕು.