ಕಾಯಕವೇ ಕೈಲಾಸವೆಂದು ಸಾರಿದ ಶಿವಶರಣರು
ದುಡಿಯದೆ ತಿನ್ನುವ ಪ್ರವೃತ್ತಿಯನ್ನು ಉಚ್ಚಾಟಿಸಲು ಮತ್ತು ದುಡಿಮೆಯ ಬಗೆಗೆ ಪ್ರೀತಿ, ಗೌರವಗಳನ್ನು ಮೂಡಿಸುವಲ್ಲಿ ಶರಣರು ಕಾಯಕವೆಂಬ ಮಹಾನ್‌ತತ್ವವೊಂದನ್ನು ಸ್ಥಾಯಿಗೊಳಿಸಿ ಲೋಕದ ಎಲ್ಲ ಅನುಭವಗಳೇ ಅನುಭಾವದ ಮೆಟ್ಟಿಲು ಎಂದು ತೋರಿದರಲ್ಲದೆ ಋಷಿ ಸಂಸ್ಕೃತಿಯಲ್ಲಿರದ ಸ್ವಾನುಭಾವ ಕೃಷಿ ಕೃತ್ಯದಲ್ಲಿರುವುದನ್ನು ಸಾಕ್ಷಾತ್ಕರಿಸಿದರು. ನಾಡೊಂದು ಸಮೃದ್ಧವೂ ಸಂಪನ್ನತೆಯನ್ನು ಹೊಂದಬೇಕಾದರೆ ಪ್ರತಿಯೊಬ್ಬರು ಮೈ ಬಗ್ಗಿಸಿ ದುಡಿಯಬೇಕು. ಬಹುಸಂಖ್ಯಾತರು ದುಡಿದು ಇನ್ನು ಕೆಲವರು ಕುಳಿತು ತಿನ್ನುವುದು ಅಭಿವೃದ್ಧಿಗೆ ಮಾರಕ ಮಾತ್ರವಲ್ಲ, ಕಣ್ಣು ಮುಚ್ಚಿ ತಪಸ್ಸು ಮಾಡುವ ಸಾಧನೆಯು ಅಧ್ಯಾತ್ಮವೇ ಅಲ್ಲ ಎಂಬುದನ್ನು ಬದುಕಿ ತೋರಿಸಿದರು.
ಕಲ್ಯಾಣದ ಶಿವಶರಣರು ಜಗತ್ತಿಗೆ ನೀಡಿದ ಮಹತ್ವದ ತತ್ವಗಳೆಂದರೆ ಕಾಯಕ ಮತ್ತು ದಾಸೋಹ. ಶರಣರ ಈ ಕ್ರಾಂತಿಕಾರಿ ಸಮಗ್ರ ಅಭಿವೃದ್ಧಿಪರ ತತ್ವಗಳನ್ನು ಸಂಪ್ರದಾಯಶೀಲ ಮನಸ್ಸುಗಳು ಧಾರ್ಮಿಕೀಕರಣಗೊಳಿಸಿ ಅವುಗಳನ್ನು ಗತಾನುಗತಿಕ ಪೂಜೆ, ಆಚರಣೆಗಳ ಪರಿಧಿಗೆ ಸೇರಿಸುವ ವೃಥಾ ಸಾಹಸ ಮಾಡುತ್ತಲೇ ಬರುತ್ತಿವೆ. ಆದರೆ ಬಸವಾದಿ ಶರಣರೇ ರಚಿಸಿದ ಸಾವಿರಾರು ವಚನ ತತ್ವಗಳ ಸಾದರ ಸಂಪತ್ತಿನ ಕಾರಣವಾಗಿ ಕರ್ಮಠರ ಕಬಂಧಬಾಹುಗಳಿಗೂ ಅವು ಸಿಲುಕಿಕೊಂಡಿಲ್ಲ. ಕಾಯಕವೆಂಬುದು ಮನುಷ್ಯರ ಕರ್ತೃತ್ವ ಮಹಾನ್ ಶಕ್ತಿಯ ಮೂರ್ತರೂಪವಾಗಿದೆ. ಮನುಷ್ಯರು ಯಾವತ್ತೂ ಸುಮ್ಮನೆ ಕೂಡಲಾರರು. ಅದು ಮಾನವರ ಸ್ವಭಾವಜನ್ಯ ಸಹಜತೆ ಅಲ್ಲವೇ ಅಲ್ಲ. ಏನಾದರೂ ಮಾಡುತ್ತಲೇ ಇರುವುದು ಪ್ರಕೃತಿಜನ್ಯ ಜನ್ಮಜಾತ ಗುಣಧರ್ಮ, ಮನುಷ್ಯರ ಧೀಶಕ್ತ, ಅಸದಳ ಮತ್ತು ಅನೂಹ್ಯ. ಚರಿತ್ರೆ ನಡೆದು ಬಂದ ದಾರಿಯಲ್ಲಿ ಇದನ್ನು ಮನಗಂಡಿದ್ದೇವೆ.
ಯಂತ್ರ ತಂತ್ರಜ್ಞಾನಗಳಲ್ಲಿ ಕ್ಷಣಕ್ಷಣಕ್ಕೂ ಸಂಭವಿಸುತ್ತಿರುವ ಆವಿಷ್ಕಾರಗಳು ದೇದೀಪ್ಯಮಾನವಾಗಿ ಚಕಿತಗೊಳಿಸುತ್ತಲೇ ಇವೆ. ಭೌತವಿಜ್ಞಾನ, ಜೀವವಿಜ್ಞಾನಗಳಲ್ಲಿ ನಡೆಯುತ್ತಿರುವ ಅಣೋರಣಿಯಾನ, ಮಹತೋಮಹಿಯಾನ ಅನ್ವೇಷಣೆಗಳು ಅಂತ್ಯವಿಲ್ಲದ ಫಲಿತಗಳನ್ನು ನೀಡುತ್ತಲೇ ಬರುತ್ತಿವೆ. ಇಷ್ಟಾಯಿತು, ಮುಂದೇನು? ಎಂಬ ತಣಿಯದ ಕುತೂಹಲ ಮತ್ತು ಸದಾ ಕ್ರಿಯಾಶೀಲವಾದ ತುಡಿತ ಅವರನ್ನು ಮುಂಬೆಕಾರರನ್ನಾಗಿ ನಿರ್ಮಿಸುತ್ತಿವೆ. ಹೀಗಾಗಿ ಅವರು ಯಾವತ್ತೂ ಸುಮ್ಮನೆ ಕುಳಿತವರಲ್ಲ. ಏನಾದರೂ ಮಾಡುತ್ತಾರೆ. ಹೀಗೆ ಮಾಡುವ ಮೂಲಕ ಹೊಸದನ್ನು ಕಂಡು ಹಿಡಿಯುತ್ತ ಲೋಕಜ್ಞಾನದ ಪರಿಧಿಯನ್ನು ಹಿಗ್ಗಲಿಸುತ್ತಾರೆ. ಅಸಾಧ್ಯಸಾಧ್ಯತೆಗಳು ಕರಗತವಾಗುವ ಮೂಲಕ ಜೀವ ಜಗತ್ತುಗಳ ಬಗೆಗಿನ ಅಜ್ಞಾನ ತೊಲಗುತ್ತದೆ. ಬಾಹ್ಯಾಕಾಶ ವಿಜ್ಞಾನ ಕೈಗೆಟುಕದ ಕಾಲಘಟ್ಟದಲ್ಲಿ ಚಂದ್ರನನ್ನು ದೇವರೆಂದೇ ಪೂಜಿಸಿಕೊಂಡು ಬರುತ್ತಿರುವುದು ಅನಿವಾರ್ಯ ಅಸಹಾಯಕತೆಯೇ ಆಗಿತ್ತಲ್ಲವೆ? ಕಾಲಯಾನದ ಉತ್ಕರ್ಷ ಸಂಚಲನದಲ್ಲಿ ಕರವಶವಾದ ವಿಜ್ಞಾನ, ತಂತ್ರಜ್ಞಾನಗಳು ಚಂದ್ರನ ಪ್ರಾಂಗಣಕ್ಕೆ ಮುಂದುವರಿದು ಮಂಗಳನ ಅಂಗಳಕ್ಕೂ ನಡೆಸಿಕೊಂಡು ಬಂದಂತೆ ನಮ್ಮ ಮುಗ್ಧ ನಂಬಿಕೆಯ ಗಾಳಿಗೋಪುರಗಳು ಕುಸಿದು ಬಿದ್ದವು. ಇಂಥ ಮುಗ್ಧ ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡು ಹೊಟ್ಟೆ ಹೊರೆಯುವ ಗುಂಪು, ಪ್ರಾಯೋಗಿಕ ದರ್ಶನಗಳು ಮತ್ತು ವಿಜ್ಞಾನ, ತಂತ್ರಜ್ಞಾನಗಳ ಆವಿಷ್ಕಾರಗಳಿಂದ ಬೆಚ್ಚಿ ಬೀಳುತ್ತದೆ. ತಮ್ಮ ಆದಾಯದ ಮೂಲ ತಪ್ಪಿತ್ತೆಂದು ವಿಹಲ್ವಗೊಂಡು ಇವುಗಳ ವಿರುದ್ಧ ತಿರುಗಿ ನಿಲ್ಲುತ್ತದೆ. ಜನತೆ ಮತ್ತದೇ ಮೌಢ್ಯದ ಹಳವಂಡದಲ್ಲಿ ಬಿದ್ದು ಒದ್ದಾಡುತ್ತ ಸುಖಿಸುವಂತೆ ತನ್ನ ಕಾರ್ಯಾಚರಣೆ ರೂಪಿಸುತ್ತದೆ.
ಮನುಷ್ಯರ ಅಗಾಧ ಕರ್ತೃತ್ವ ಶಕ್ತಿಯು ತನ್ನ ವಿಶ್ವಚೇತನ ವಿರಾಡ್ರೂಪ ವ್ಯಕ್ತಿಸದಂತೆ ಭಯಮೂಲದ ನಿರ್ಬಂಧಗಳನ್ನು ಸೃಷ್ಟಿಸಿ ಅವುಗಳನ್ನು ಸ್ಥಾಯಿಗೊಳಿಸಲು ನಿತ್ಯ ನಿರಂತರ ಸೆಣಸುತ್ತದೆ. ಭಾವವಾದಿ ದಾರ್ಶನಿಕರು ಮೊದಲು ಮನುಷ್ಯರಿಗೆ ಲೌಕಿಕದಲ್ಲಿ ಹೇವರಿಕೆ ಹುಟ್ಟುವಂತೆ ಮಾಡುತ್ತಾರೆ. ಲೋಕದ ಬದುಕೆಲ್ಲವೂ ಮಾಯೆ. ಅದೊಂದು ತಾರ್ಕಿಕ ಅಂತ್ಯ ಕಾಣದ ಭ್ರಮೆ. ಕಣ್ಣಿಗೆ ಕಾಣುವುದೆಲ್ಲವೂ ಮಹಾಮೋಸ ಮತ್ತು ಅಪ್ಪಟ ಸುಳ್ಳು. ಆದ್ದರಿಂದ ಲೋಕ ದಂದುಗದಲ್ಲಿ ಬಿದ್ದು ಆತ್ಮಗ್ಲಾನಿಯನ್ನುಂಟು ಮಾಡಿಕೊಳ್ಳಲಾಗದು. ಮತ್ತೆ ಮತ್ತೆ ಈ ಮಾಯಾಬಂಧನದಲ್ಲಿ ಸಿಕ್ಕು ಒದ್ದಾಡಬಾರದು. ‘‘ಪುನರಪಿ ಜನನಂ ಪುನರಪಿ ಮರಣಂ| ಪುನರಪಿ ಜನನೀ ಜಠರೇ ಶಯನಮಂ| ಇಹ ಸಂಸಾರೇ ಬಹು ದುಸ್ತಾರೇ| ಕೃಪಾಯಾಪಾರೇ ಪಾಹಿ ಮುರಾರೇ॥’’ ಅಂದರೆ ಪುನಃ ಪುನಃ ಸತ್ತು ಹುಟ್ಟುವ ಈ ಬಾಧೆಯು ಸಹಿಸಲು ಸಾಧ್ಯವಿಲ್ಲದ್ದು. ತಾಯಿಯ ಗರ್ಭದಲ್ಲಿ ಮತ್ತೆ ಮತ್ತೆ ನೆಲೆಸುವುದು ಘನಘೋರವಾಗಿದೆ. ಹುಟ್ಟಿದ ನಂತರ ಈ ಸಂಸಾರ ಸಾಗರವು ಅತ್ಯಂತ ದುಸ್ತರವಾಗಿದೆ. ಈ ಭವಸಾಗರದಲ್ಲಿ ಬಿದ್ದು ಒದ್ದಾಡುವುದರಲ್ಲಿ ಸುಖವಿಲ್ಲ. ಇದರಿಂದ ಪಾರಾಗುವುದೇ ಶ್ರೇಯಸ್ಕರ. ಪಾರಾಗಬೇಕಾದರೆ ಮುರಾರಿ ಕೃಪೆಯಾಗಬೇಕು. ಒಟ್ಟಾರೆ ಈ ಲೋಕವು ಸ್ವಭಾವತಃ ದುಃಖಮಯವಾಗಿದೆ. ಇಲ್ಲಿನ ದುಃಖಕ್ಕೆ ಕಾರಣ ಇಲ್ಲಿನ ವ್ಯವಸ್ಥೆ ಅಥವಾ ಆಳುವ ವರ್ಗವಲ್ಲ. ಅಸಮಾನತೆ, ಶೋಷಣೆ, ಕೆಲವೊಬ್ಬರ ಸ್ವಾರ್ಥ ಇವ್ಯಾವೂ ಅಲ್ಲ. ಇದಕ್ಕೆ ಕಾರಣ ಅಜ್ಞಾನ, ಜನರ ಪೂರ್ವ ಜನ್ಮದ ಕರ್ಮಗಳು ಅಂದರೆ ಕಾಣದ ಜನ್ಮದಲ್ಲಿ ಮಾಡಿದ ಪಾಪಕಾರ್ಯಗಳೇ ಕಾರಣ. ಹೀಗಾಗಿ ಇಹದ ದುಃಖಾದಿಗಳಿಂದ ಮುಕ್ತರಾಗಬೇಕಾದರೆ ಭಗವಂತನ ನಾಮಸಂಕೀರ್ತನ, ಪೂಜೆ, ಪ್ರಾರ್ಥನೆ ಮಾಡಬೇಕು. ಶಾಶ್ವತವಾಗಿ ಈ ಭವದುಃಖದಿಂದ ಪಾರಾಗಬೇಕಾದರೆ ಅನವರತ ಜಪ-ತಪ, ಧ್ಯಾನ ನಿರತರಾಗಿ ಅಲೌಕಿಕ ಆನಂದ ಹೊಂದಬೇಕು. ಕಣ್ಣು ಮುಚ್ಚಿ ವರ್ಷಾನುಗಟ್ಟಲೆ ತಪಸ್ಸು ಮಾಡಿ ‘ಸಿದ್ಧಿ ಸಾಧಿಸಿದ’ ದೊಡ್ಡ ತಪಸ್ವಿಗಳ ಪಡೆಯೇ ನಮ್ಮಲ್ಲಿದೆ. ಕ್ರಿಯಾಶೀಲ ಮನುಷ್ಯರನ್ನು ಸುಮ್ಮನೆ ಕಣ್ಣುಮುಚ್ಚಿ ಕೂಡಿಸುವುದನ್ನೇ ಮಹಾಸಾಧನೆಯೆಂದು ಬಿಂಬಿಸಿದ ಆಧ್ಯಾತ್ಮಿಕತೆಯೇ ಈವರೆಗೂ ನಮ್ಮನ್ನು ಕಟ್ಟಿ ಆಳುತ್ತಿದೆ. ಮಾಡುವುದಕ್ಕಿಂತ ಮಾಡದಿರುವುದೇ ಶ್ರೇಷ್ಠ ಸಾಧನೆ ಎಂದು ನಂಬಿಸಿದ್ದಕ್ಕಾಗಿಯೇ ಭಾರತದಲ್ಲಿ ಜನರ ಕ್ರಿಯಾಶಕ್ತಿಗಿಂತ ಪೂಜೆ, ಜಪ, ತಪ, ಧ್ಯಾನ, ಯೋಗ ಮುಂತಾದವುಗಳು ಮುನ್ನೆಲೆಗೆ ಬಂದು ಸೋಮಾರಿತನವೇ ಮೌಲ್ಯಗಳಾಗಿವೆ. ಇದಕ್ಕೆ ವ್ಯತಿರಿಕ್ತವೆಂಬಂತೆ ಕನ್ನಡ ನಾಡಿನಲ್ಲಿ 12ನೇ ಶತಮಾನದಲ್ಲಿ ಬಸವಾದಿ ಶರಣರು ಮನುಷ್ಯರ ಕರ್ತೃತ್ವಶಕ್ತಿಯನ್ನು ಬಡಿದೆಬ್ಬಿಸಿ ಅವರ ಅಗಾಧ ಕ್ರಿಯಾಶೀಲತೆಯನ್ನು ಮಹತಿ, ಮಹಾನ್ನತೆಯನ್ನು ದಿಗ್ದರ್ಶಿಸಿದರು. ‘ಕಾಯಕ’ ಎಂಬ ತತ್ವವೇ ಲೋಕ-ಅಲೋಕಗಳ ಬೆಳಗುವ ಸೊಡರು ಅದುವೇ ಬದುಕಿನ ಸಾರ್ಥಕ್ಯ ಎಂಬುದನ್ನು ಆಚರಿಸಿ ತೋರಿಸಿದರು. ಕಾಯ ತಣಿಸದೆ ಮನ ಮಣಿಸದೆ ಮಾಡುವ ಪೂಜೆ ವ್ಯರ್ಥ ಅಷ್ಟೇ ಅಲ್ಲ, ಇದು ದುಡಿಯದೆ ಅನ್ಯರ ಸಂಪಾದನೆ ಕಬಳಿಸುವ ಮಹಾಮೋಸ, ಸಮಾಜಘಾತುಕ ಎಂದು ಎಚ್ಚರಿಸಿದರು. ‘ಕಾಯಕವೇ ಪೂಜೆ’. ಕಾಯಕದಲ್ಲಿಯೆ ಕೈಲಾಸ ಕಾಣಲು ಸಾಧ್ಯ. ದುಡಿಮೆ ಕೊಡುವ ಆನಂದ, ತೃಪ್ತಿಯು ಇನ್ನಾವ ಕುತಂತ್ರ ನೀಡದು. ಕಾಯ ಮಣಿಸುವ ಕ್ರಿಯೆಯಲ್ಲಿ ಆನಂದಾನುಭೂತಿ ಪಡೆಯುವ ಬಗೆಯನ್ನು ಎತ್ತಿ ತೋರಿಸಿದ್ದಲ್ಲದೆ ತನ್ನ ಕಾಯಕಕ್ಕೆ ತಕ್ಕ ಬೆಲೆ ಪಡೆಯುವುದು ಕೂಡ ಅದರ ಭಾಗವೆ ಆಗಿದೆ ಎಂಬ ಸ್ವಾಭಿಮಾನ ಮೂಡಿಸಿ ಮೊದಲ ಬಾರಿಗೆ ದುಡಿಮೆ ಬಗೆಗೆ ಅಪಾರ ಗೌರವ ಮತ್ತು ಮಹೋನ್ನತಿಯನ್ನು ಪ್ರಾಪ್ತವಾಗಿಸಿದರು. ದುಡಿಯದೆ ಅನ್ನ ತಿನ್ನುವ ಹಕ್ಕು ಯಾರಿಗೂ ಇಲ್ಲ. ಹೀಗೆ ತಿನ್ನುವುದೇ ಪರಮ ಪಾಪ. ಅದುವೇ ಸೋಮಾರಿತನದ ಮೆಟ್ಟಿಲು. ತನ್ಮೂಲಕ ಆತ್ಮಗ್ಲಾನಿಯತ್ತ ಅಭಿಮುಖ ಪಯಣ ಸುರುವಾಗುತ್ತದೆ ಎಂದು ಸಾರಿದರು. ಶಿವಾನುಭಾವಿಗಳು ತತ್ವ ಬೋಧಿಸಲಿಲ್ಲ. ಬದುಕಿದರು. ತನ್ಮೂಲಕವೇ ಸಾಫಲ್ಯದ ಸಾಯುಜ್ಯಕ್ಕೇರಿದರು.
ಕಲ್ಯಾಣ ಕರ್ನಾಟಕದ ಬಂಡಾಯಸಂತ, ಅಪ್ರತಿಮ ತತ್ವಪದಕಾರನೆಂದು ಖ್ಯಾತಿವೆತ್ತ ಕಡಕೋಳ ಮಡಿವಾಳಪ್ಪನವರ ಬದುಕಿನಲ್ಲಿ ಸಂಭವಿಸಿದ್ದ ಘಟನೆಯೊಂದನ್ನೇ ಉದಾಹರಣೆಯಾಗಿ ನೋಡಬಹುದು. ಮಡಿವಾಳಪ್ಪ ಸ್ವಭಾವತಃ ಸಂಚಾರಿ ಜಂಗಮ. ಆಧ್ಯಾತ್ಮಿಕತೆಯ ಹೆಸರಿನಲ್ಲಿ ಪುರೋಹಿತವರ್ಗ ನಡೆಸಿದ್ದ ಮರೆ-ಮೋಸಗಳನ್ನು ಬಯಲಿಗೆಳೆಯುವಲ್ಲಿ ನಿಸ್ಸೀಮ. ಊರೂರಿಗೆ ತಿರುಗುತ್ತಿರಲು. ಹಳ್ಳಿಯೊಂದರ ಬಡವಿಯೊಬ್ಬಳು ಮಡಿವಾಳಪ್ಪನವರನ್ನು ಕಂಡು ತನ್ನ ಮನೆಗೆ ಊಟಕ್ಕೆ ಬಿಜಂಗೈಯುವಂತೆ ಭಿನ್ನೈಸಿಕೊಳ್ಳುತ್ತಾಳೆ. ಬಡವಿಯ ಆಪ್ತ ಆಹ್ವಾನಕ್ಕೆ ಕರಗಿದ ಜನಾನುರಾಗಿ ಸಂತ ಮಧ್ಯಾಹ್ನದ ಊಟದ ಹೊತ್ತಿಗೆ ಅವಳ ಮನೆಗೆ ಹೋಗಿ ಬಡಿಸುವಂತೆ ಕೇಳುತ್ತಾನೆ. ಮಡಿವಾಳಪ್ಪನಂಥ ಬಂಡಾಯಗಾರ ತನ್ನ ಮನೆಗೆ ಬಂದುದನ್ನು ಸಂಭ್ರವಿಸುವ ಬಡಮುದುಕಿಯು ಆನಂದತುಂದುಲಿತಳಾಗಿ ಮುಖಮಾರ್ಜನೆ ಮಾಡಿಸಿ ಊಟಕ್ಕೆ ಬಡಿಸಲು ಮುಂದಾಗುತ್ತಾಳೆ. ಯಥಾಪ್ರಕಾರ ಬಯಲು ನಾಡಿನ ಮಾಮೂಲಿ ಆದರೆ ವಿಶಿಷ್ಟ ಭೋಜ್ಯವಾಗಿರುವ ಸೆಜ್ಜೆ ರೊಟ್ಟಿ, ಎಣಗಾಯಿ ಪಲ್ಯೆ ನೀಡುತ್ತಾಳೆ. ಬಿರುಬಿಸಲಿನ ಮಧ್ಯಾಹ್ನ. ಅಷ್ಟಕ್ಕೂ ಕಟ್ಟುಮಸ್ತಾದ ಆಳು ಮಡಿವಾಳಪ್ಪ ಹಸ್ತಹಗ್ಗವಾಗಿಯೇ ಬಂದಿದ್ದರು. ಅವಳೇನೊ ಬಡವಿ. ಊಟಕ್ಕೆ ಬರುವಾತ ಒಬ್ಬನೆಯಾದ್ದರಿಂದ ಪಾವ ಕೇಜಿ ಪಲ್ಯೆ, ನಾಲ್ಕೈದು ಬಿಸಿ ರೊಟ್ಟಿಯಾದರೆ ಮನಗಂಡ ಭರ್ತ ಆಗುತ್ತದೆ ಎಂದು ಭಾವಿಸಿದ್ದಳು. ಅವಳಿಗೇನು ಗೊತ್ತು ಮುತ್ಯಾ ಮಡಿವಾಳನ ಅರಿಭಯಂಕರ ತೊಗಲ ಚೀಲದ ಹಸಿವು. ಒಂದೊಂದೆ ರೊಟ್ಟಿ ಮತ್ತು ಎಣಗಾಯಿ ಬದನೆಪಲ್ಯೆ ಬಡಿಸುತ್ತ ಹೋಗುತ್ತಾಳೆ. ಮನ್ಯಾಗ ತಯಾರಿಸಿದ್ದ ಮಸಾಲಿ ಖಾರಾ, ಭರ್ತಿ ಉಳಾಗಡ್ಡಿ, ಜವಾರಿ ಬದನೆಗೆ ಕುಸುಬಿ ಎಣ್ಣಿ ಹಾಕಿ ಮಾಡಿದ ಪಲ್ಯಾ ಅಂದರೆ ಮಾಮೂಲಿಯಲ್ಲ. ಬಲ್ಲವರೆ ಬಲ್ಲರು ಎಣಗಾಯಿ ಸ್ವಾದ. ಮೊದಲೆ ಹಸಿದ ಬಂದಿದ್ದ ಮುತ್ಯಾ ಮಡಿವಾಳಪ್ಪನವರಿಗೆ ಪಲ್ಯೆ (ತರಕಾರಿ) ದ ರುಚಿ ಬ್ರಹ್ಮಾಂಡಕ್ಕೆ ಏರುತ್ತದೆ. ಅವರು ಉಣ್ಣುತ್ತಲೇ ಹೋಗುತ್ತಾರೆ. ಮುದುಕಿ ಬಡಿಸುತ್ತಲೇ ಹೋಗುತ್ತಾಳೆ. ಮಡಿವಾಳಪ್ಪ ಮತ್ತೆ ಮತ್ತೆ ಪಲ್ಯೆ ಬಡಿಸುವಂತೆ ಬೇಡಿಕೆ ಇಡುತ್ತಿರಲು ಮಾಡಿದ ಪಲ್ಯೆ ಮುಗಿಯುತ್ತದೆ. ವಾಸ್ತವವನ್ನು ಅರಿಯದ ಮಡಿವಾಳಪ್ಪ ಊಟದ ಭರದಲ್ಲಿ ಮುದುಕಿಯ ಪರಿಸ್ಥಿತಿಯ ಅಂದಾಜು ಮಾಡದೆ ಪಲ್ಯೆ ಬೇಡಿದ್ದು ಪ್ರಮಾದವಾಗುತ್ತದೆ. ಯಾರೆಲ್ಲ ಕರೆದರೂ ಹೋಗದ ಸಂತ ತನ್ನ ಮನೆಗೆ ಬಂದು ಊಟಕ್ಕೆ ಕುಳಿತಿರುವಾಗ ಆತನ ಹೊಟ್ಟೆ ತಣಿಯುವಷ್ಟು ಆಹಾರ ನೀಡದ ತನ್ನ ಬಡತನಕ್ಕೆ ಅವಳು ರೋಸಿ ಹೋಗಿ ಥಟ್ಟನೆ ಮಡಿವಾಳಪ್ಪನ ಪಾದ ಹಿಡಿದು ಅಳಲು ಸುರು ಮಾಡುತ್ತಾಳೆ. ಪಲ್ಯೆ ತೀರಿದ್ದು ತನ್ನನ್ನು ಕ್ಷಮಿಸಿಬೇಕೆಂದು ಅಂಗಲಾಚುತ್ತಾಳೆ. ತನ್ನ ಬಡತನಕ್ಕೆ ಹಿಡಿಶಾಪ ಹಾಕಿ ರೋಧಿಸುತ್ತಿರಲು ಮಡಿವಾಳಪ್ಪನವರಿಗೆ ಇದರಿಂದ ಆಘಾತವಾಗುತ್ತದೆ. ತಮ್ಮ ನಾಲಗೆ ಚಪಲದ ಬಗೆಗೆ ಅಸಹ್ಯವೆನಿಸುತ್ತದೆ. ಅದ್ಹೇಗೋ ಬಡವಿಯನ್ನು ಸಂತೈಸಿ ಜಿವ್ಹಾಚಪಲವನ್ನು ಶಪಿಸುತ್ತಲೇ ಕಡಕೋಳಕ್ಕೆ ಮರಳಿ ಬರುತ್ತಾರೆ.
ಹೀಗೆ ತಮ್ಮ ಮಠಕ್ಕೆ ಬಂದವರೇ ಹಿಂದಿನ ಬಯಲು ಮಡ್ಡಿ ಭೂಮಿಯಲ್ಲೊಂದು ಬಾವಿ ತೋಡುತ್ತಾರೆ. ಮೈಯಲ್ಲಿ ದೆವ್ವ ಹೊಕ್ಕವರಂತೆ ಭೂಮಿ ಹರಗಿ ಹದಮಾಡುತ್ತಾರೆ. ಎಕರೆಯಷ್ಟು ಜಾಗದಲ್ಲಿ ತೋಟ ಮಾಡಿ ಜವಾರಿ ಬದನೆ ಸಸಿ ನೆಡುತ್ತಾರೆ. ತಿಂಗಳಾನುಚಾರಿ ಹೊತ್ತು ಹೊತ್ತಿಗೆ ನೀರು, ತಿಪ್ಪೆ ಗೊಬ್ಬರ ಹಾಕಿ ಭರ್ತಿ ಬದನೆ ಬೆಳೆಯುತ್ತಾರೆ. ಒಂದು ದಿನ ಬುಟ್ಟಿಗಟ್ಟಲೆ ಬದನೆಗಳನ್ನು ಬಿಡಿಸಿ ತಂದು ಸ್ವತಃ ಅವುಗಳನ್ನು ಸ್ವಚ್ಛಗೊಳಿಸಿ ಮಸಾಲೆ ಅರೆದು ಎಣಗಾಯಿ ವ್ಯಂಜನ ತಯಾರಿಸುತ್ತಾರೆ. ಹಾಕಿದ ಒಗ್ಗರಣೆಗೆ ಇಡೀ ಮಠವೇ ಘ್ರಾಣಿಸುತ್ತದೆ. ಮಠದಲ್ಲಿನ ಶಿಷ್ಯ ಬಳಗ ಗುರುವಿನ ಈ ಧಾವಂತಕ್ಕೆ ಗಾಬರಿಯಾಗಿ ನಿಲ್ಲುತ್ತಾರೆ. ಹೀಗೆ ವ್ಯಂಜಯ ತಯಾರಿಸಿ ನಂತರ ತಟ್ಟೆ ಮುಂದಿಟ್ಟುಕೊಂಡು ಊಟಕ್ಕೆ ಕುಳಿತುಕೊಳ್ಳುತ್ತಾರೆ. ತಟ್ಟೆ ತುಂಬ ಕೇವಲ ಪಲ್ಯೆ ಬಡಿಸಿಕೊಂಡು ಉಣ್ಣಲು ಶುರು ಮಾಡುತ್ತಾರೆ. ಅದರೊಟ್ಟಿಗೆ ರೊಟ್ಟಿ, ಅನ್ನ ಹೀಗೆ ಯಾವುದೇ ಪ್ರಧಾನ ಪದಾರ್ಥವಿರದೆ ಕೇವಲ ಮೇಲೋಗರ ತಿನ್ನುವುದನ್ನು ನೋಡಿ ಅಲ್ಲಿದ್ದವರೆಲ್ಲ ಅವಾಕ್ಕಾಗುತ್ತಾರೆ. ಮಡಿವಾಳಪ್ಪ ಮಾತ್ರ ಇದ್ಯಾವುದನ್ನು ನೋಡದೆ ಒಂದೇ ಸವನೆ ಬಾಯಲ್ಲಿ ಪಲ್ಯೆ ತುರುಕುತ್ತ ತಿನ್ನು ತಿನ್ನು ಮನವೇ ತಿನ್ನು. ತುರುಕುತ್ತಲೇ ಹೋಗುತ್ತಾರೆ. ಹೊಟ್ಟೆಗೆ ಸಾಕಾದರೂ ಕೈ ಸಡಲಿಸುವುದಿಲ್ಲ. ತಿನ್ನು ತಿನ್ನು ಮನಸ್ಸೇ ಅಂದು ಬಡವಿ ಮನೆಯಲ್ಲಿ ಪಲ್ಯೆ ಮುಗಿದುದರ ಖಬರು ಇರದಂತೆ ಬೇಡಿ ಅವಳನ್ನು ದುಃಖಿತಳನ್ನಾಗಿ ಮಾಡಿದೆಯಲ್ಲ! ಇಂದೇಕೆ ನಿನಗೆ ವಾಕರಿಗೆ ತಿನ್ನು ಎಂದು ತಮ್ಮ ಮನಕ್ಕೆ ತನ್ಮೂಲಕ ನಾಲಿಗೆ, ಹೊಟ್ಟೆಗಳಿಗೆ ಶಿಕ್ಷೆ ನೀಡುತ್ತಲೇ ಹೋಗುತ್ತಾರೆ.
ಸುತ್ತಲೂ ಆವರಿಸಿಕೊಂಡಿದ್ದ ಶಿಷ್ಯರು ಗುರುವಿನ ಈ ನಡೆಯನ್ನು ಕುರಿತು ದಿಙ್ಮೂಢರಾಗಿರಲು ನಡೆದ ಪ್ರಸಂಗವನ್ನು ವಿವರಿಸಿ ಅಲ್ಲಿಯೆ ಪದವೊಂದನ್ನು ರಚಿಸಿ ಹಾಡಿದರಂತೆ. ಅದು ಹೀಗಿದೆ.
ಮಾಡಿ ಉಣ್ಣೋ ಬೇಕಾದಷ್ಟು | ನೀ
ಬೇಡಿ ಉಣ್ಣೋ ನೀಡಿದಷ್ಟು |
ಕೇಡಿಲ್ಲದರೊಳು ಎಳ್ಳಷ್ಟು |ನಾ
ತಿಳಿದು ಹೇಳಿದೆನು ಬಲ್ಲಷ್ಟು ॥ ಪ ॥
ಮಾಡಿ ಉಂಡವಗೆ ಕರ್ಮಿಲ್ಲ | ಬರಿ
ಬೇಡಿ ಉಂಡವಗೆ ಧರ್ಮಿಲ್ಲ|
ಮಾಡದೆ ಬೇಡದೆ ಮೂರು ಮಲವು
ಕಳವು ಮಾಡಿದವಗೆ ಸುಖದ್ಹಮ್ಮಿಲ್ಲ ॥ 1 ॥
ಹೀಗೆ ಮಡಿವಾಳಪ್ಪನವರು ನವುರಾಗಿಯೇ ಆದರೆ ಭದ್ರವಾಗಿ ತನ್ನ ಅನ್ನ ತಾನು ದುಡಿದು ತಿನ್ನಬೇಕು ಎಂದು ಶಿಷ್ಯರಿಗೆ ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟರು. ಕುಳಿತು ತಿನ್ನುವ ಪುರೋಹಿತ, ಪಂಡಿತ, ಆಳುವ ವರ್ಗದ ವರ್ತನೆಗಳನ್ನು ಅಲ್ಲಗಳೆದರು. ದುಡಿಯದೆ ತಿನ್ನುವ ಪ್ರವೃತ್ತಿಯನ್ನು ಉಚ್ಚಾಟಿಸಲು ಮತ್ತು ದುಡಿಮೆಯ ಬಗೆಗೆ ಪ್ರೀತಿ, ಗೌರವಗಳನ್ನು ಮೂಡಿಸುವಲ್ಲಿ ಶರಣರು ಕಾಯಕವೆಂಬ ಮಹಾನ್ ತತ್ವವೊಂದನ್ನು ಸ್ಥಾಯಿಗೊಳಿಸಿ ಲೋಕದ ಎಲ್ಲ ಅನುಭವಗಳೇ ಅನುಭಾವದ ಮೆಟ್ಟಿಲು ಎಂದು ತೋರಿದರಲ್ಲದೆ ಋಷಿ ಸಂಸ್ಕೃತಿಯಲ್ಲಿರದ ಸ್ವಾನುಭಾವ ಕೃಷಿ ಕೃತ್ಯದಲ್ಲಿರುವುದನ್ನು ಸಾಕ್ಷಾತ್ಕರಿಸಿದರು. ನಾಡೊಂದು ಸಮೃದ್ಧವೂ ಸಂಪನ್ನತೆಯನ್ನು ಹೊಂದಬೇಕಾದರೆ ಪ್ರತಿಯೊಬ್ಬರು ಮೈ ಬಗ್ಗಿಸಿ ದುಡಿಯಬೇಕು. ಬಹುಸಂಖ್ಯಾತರು ದುಡಿದು ಇನ್ನು ಕೆಲವರು ಕುಳಿತು ತಿನ್ನುವುದು ಅಭಿವೃದ್ಧಿಗೆ ಮಾರಕ ಮಾತ್ರವಲ್ಲ, ಕಣ್ಣು ಮುಚ್ಚಿ ತಪಸ್ಸು ಮಾಡುವ ಸಾಧನೆಯು ಅಧ್ಯಾತ್ಮವೇ ಅಲ್ಲ ಎಂಬುದನ್ನು ಬದುಕಿ ತೋರಿಸಿದರು.