×
Ad

ಜ್ಞಾನಾಗ್ನಿಗೆ ಅನುಭಾವವೇ ಆದಿಮ

Update: 2025-12-02 15:11 IST

ಮಡಿವಾಳಪ್ಪ ಮತ್ತು ಅವರ ಶಿಷ್ಯರ ಬಹುತೇಕ ರಚನೆಗಳು ಪ್ರಸಂಗವೊಂದರ ಚುಂಗು ಹಿಡಿದು ಅಂದಂದಿನ ಕಾಣ್ಕೆಗಳಾಗಿಯೆ ಕಾಣಿಸಿಕೊಂಡಿವೆ. ಪ್ರಸಂಗವಿಲ್ಲದ ಪದಗಳು ಕಡಿಮೆ. ಪ್ರತಿಯೊಂದು ತತ್ವಪದದ ಹಿಂದೆ ಚಾರಿತ್ರಿಕ ಸಂಗತಿಗಳು, ಅವರ ಬದುಕಿನ ಜೀವ ಸಂವೇದಿ ಸಂಘರ್ಷಗಳಾಗಿಯೇ ಅವತರಿಸಿವೆ. ಹೀಗಾಗಿಯೇ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ದರ್ಶನವಾಗಬೇಕಾದರೆ ಅಲ್ಲಿ ಹರಿಗಡಿಯದಂತೆ ರಚನೆಯಾಗಿರುವ ಮತ್ತು ಈ ಕ್ಷಣಕ್ಕೂ ರಚನೆಯಾಗುತ್ತಿರುವ ತತ್ವಪದಗಳಿಗೆ ಕಿವಿಯಾಗಬೇಕು.

ಕಲ್ಯಾಣ ಕರ್ನಾಟಕವು ವಚನ, ಕೀರ್ತನೆಗಳಿಗೆ ನೆಲೆಯಾದಂತೆ ತತ್ವಪದಗಳ ಆಡುಂಬೊಲವೂ ಆಗಿದೆ. ಭೀಮೆ, ಕೃಷ್ಣೆಯರ ವಿಶಾಲ ಹರಹಿನಲ್ಲಿ ಸೃಷ್ಟಿಯಾದಷ್ಟು ಮೌಲಿಕ ಮತ್ತು ವೆಗ್ಗಳ ತತ್ವಪದಗಳು ಕರ್ನಾಟಕದ ಇನ್ನಿತರ ಭಾಗಗಳಲ್ಲಿ ರಚನೆಯಾದಂತಿಲ್ಲ. ಈ ಪದಗಳು ಸಾಹಿತ್ಯಕ್ಕೆ ಸಾಹಿತ್ಯ, ಅನುಭಾವಕ್ಕೆ ಅನುಭಾವ, ದರ್ಶನಕ್ಕೆ ದರ್ಶನಗಳಾಗಿ ಮೈದಾಳಿವೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕಿದ್ದ ತತ್ವಪದಕಾರರು ಜಡಗೊಂಡಿದ್ದ ಭಾರತೀಯ ಅಧ್ಯಾತ್ಮ ಲೋಕದಲ್ಲಿ ಸಂಚಲವನ್ನುಂಟು ಮಾಡಿದರಲ್ಲದೆ, ಪ್ರಾಯೋಗಿಕ ವೇದಾಂತಕ್ಕೂ ಅಸ್ತಿಭಾರ ಹಾಕಿದರು. ಅವರಿಗೆ ಲೋಕ-ಅಲೋಕವೆಂಬ ಭೇದವಾಗಲಿ, ಇಹ-ಪರವೆಂಬ ಭ್ರಮೆಗಳಾಗಲಿ ಇರಲಿಲ್ಲ. ಪಂಚೇಂದ್ರಿಯಗಳ ಮೂಲಕ ಅನುಭವಕ್ಕೆ ಬರುವುದೆಲ್ಲವೂ ಅಲೌಕಿಕ ಸಾಧನೆಗೆ ನಿಚ್ಚಣಿಕೆಯಾಗಿದ್ದವು. ಎಂತಲೆ ಅವರು ನಿತ್ಯ ಬದುಕಿನ ಆಗು-ಹೋಗುಗಳನ್ನು ಆತ್ಯಂತಿಕ ಅನುಭಾವದ ನಿಕಷಗಳೆಂದು ಬರಮಾಡಿಕೊಂಡಿದ್ದರು. ವಾಸ್ತವ ಬದುಕಿನಲ್ಲಿ ಎದುರಾದ ಎಡರು ತೊಡರುಗಳೊಂದಿಗೆ ಜೀವ, ಜಗತ್ತು, ಈಶ್ವರ, ಮಾಯೆ ಮುಂತಾದ ನಿಗೂಢ ತತ್ವಗಳು ಅಂತರಂಗವನ್ನು ಸತಾಯಿಸಿದಾಗ ತಮಗಾದ ಅನುಭೂತಿಗಳನ್ನೇ ಪದಪದರುಗಳಲ್ಲಿ ಎರಕ ಹೊಯ್ದರು. ಈ ಅನುಭಾವಿಗಳು ಕವಿಗಳಾಗಿ ಪದವಿ, ಪ್ರಶಸ್ತಿ ಪಡೆಯಬೇಕೆಂದು ಬರೆದವರಲ್ಲ. ಅಂದಂದಿನ ಅನುಭವಗಳಿಗೆ ಅಕ್ಷರದ ಅಂಗಿ ತೊಡಿಸಿದ್ದೆ ಕಾವ್ಯವಾಗಿ ಪರಿಣಮಿಸಿತು. ಹೀಗಾಗಿ ಬಹುತೇಕ ಪದಗಳು ಪ್ರಸಂಗಾನುಸಾರ ಛಕ್ಕನೆ ಮೂಡಿ ಬಂದಿವೆ. ಅಂಥದ್ದೊಂದು ಪ್ರಸಂಗ ಹೀಗಿದೆ.

‘‘ಜ್ಞಾನಪೂರ್ಣಂ ಜಗಂಜ್ಯೋತಿ| ನಿರ್ಮಲವಾದ ಮನವೇ ಕರ್ಪೂರದಾರತಿ॥’’ ಎಂಬ ಪದ ಕೇಳದ ಕನ್ನಡಿಗರೇ ಇಲ್ಲ. ಕನ್ನಡ ಮಾತು ಬಲ್ಲ ಎಲ್ಲೆಡೆ ಇದು ಅನೂಚಾನವಾಗಿ ಅನುರಣಿಸುತ್ತಿದೆ. ದೂರದ ದುಬೈನಲ್ಲಿ ಈ ಪದವನ್ನು ಕೇಳಿದ ಸಹೃದಯರೊಬ್ಬರು ತಾವು ರೋಮಾಂಚಿತರಾದದ್ದನ್ನು ಹೇಳಿಕೊಂಡಿದ್ದಾರೆ. ಪದವೇನೋ ಸಮುದ್ರದಾಚೆ ಪ್ರವಹಿಸಿದೆಯಾದರೂ ಇದನ್ನು ಬರೆದ ಅನುಭಾವಿಯು ಬಹುಜನರಿಗೆ ಗೊತ್ತಿರಲಿಕ್ಕಿಲ್ಲ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿರುವ ಕಡಕೋಳ ಮಡಿವಾಳಪ್ಪನವರು ಈ ಪದವನ್ನು ತಮ್ಮ ಶಿಷ್ಯನೊಬ್ಬನ ನೆನಪಿಗಾಗಿ ಬರೆದಿದ್ದಾರೆ. ಪದ ರಚನೆಯ ಪ್ರಸಂಗವೂ ಪದದ ಅರ್ಥಸಂಪತ್ತಿನಷ್ಟೆ ಶ್ರೀಮಂತವಾಗಿದೆ. 18ನೇ ಶತಮಾನದ ಆದಿಯಲ್ಲಿ ಕಾಣಿಸಿಕೊಂಡಿದ್ದ ಮಡಿವಾಳಪ್ಪ ಆಧ್ಯಾತ್ಮ ಲೋಕದ ಬಂಡಾಯಗಾರನೆಂದೇ ಪ್ರಸಿದ್ಧಿ ಪಡೆದಿರುವನಷ್ಟೇ. ಈತನ ಪದಗಳಲ್ಲಿನ ದಾರ್ಶನಿಕ ನಿಲುವುಗಳು, ಉಗ್ರವಾದ ಸಾಮಾಜಿಕ ವಿಮರ್ಶೆ, ಅಪ್ಪಟ ದೇಸಿ ಭಾಷೆ ಮತ್ತು ಮೊಗಲಾಯಿ ಬದುಕಿನ ವಿನ್ಯಾಸಗಳು ಪಂಡಿತ ಪಾಮರರಾದಿಯಾಗಿ ಸಮಸ್ತ ಕನ್ನಡಿಗರ ಗಮನ ಸೆಳೆದಿವೆ. ಮಡಿವಾಳಪ್ಪನವರ ಶಿಷ್ಯ ಸಮೂಹ ಅಪಾರ. ಅದರಲ್ಲಿ ಸಮಕಾಲೀನರಾದ ಖೈನೂರಿನ ಕೃಷ್ಣಪ್ಪ, ತೆಲಗಬಾಳದ ರೇವಪ್ಪ, ಕಡ್ಲೇವಾಡದ ಸಿದ್ದಪ್ಪ, ಚೆನ್ನೂರಿನ ಜಲಾಲಸಾಹೇಬ ಮತ್ತು ಅರಳಗುಂಡಿಗೆ ಭಾಗಮ್ಮ ಗೌಡ್ತಿ ಎಂಬುವರು ಪ್ರಮುಖರು. ಭಾಗಮ್ಮನನ್ನು ಹೊರತು ಪಡಿಸಿ ಉಳಿದವರೆಲ್ಲರೂ ಅಪರೂಪದ ತತ್ವಪದಗಳನ್ನು ರಚಿಸಿದ್ದಾರೆ. ಕಡಕೋಳ ಮಡಿವಾಳಪ್ಪನವರ ಮಠವೆಂದರೆ ತತ್ವಪದಗಳ ಟಂಕಶಾಲೆ. ಅದು ಅನುಭಾವಿಗಳ ಗರಡಿ ಮನೆಯಂತೆ ಇತ್ತು. ಬ್ರಾಹ್ಮಣ ಹಿನ್ನೆಲೆಯಿಂದ ಬಂದ ಖೈನೂರಿನ ಕೃಷ್ಣಪ್ಪ ಪದ ಬರೆಯುವಲ್ಲಿ ಎತ್ತಿದ ಕೈಯಾಗಿದ್ದ. ಅದರಂತೆ ಹೂಗಾರಿಕೆ ಮಾಡಿಕೊಂಡಿದ್ದ ರೇವಪ್ಪನು ಪದ ರಚಿಸುವಲ್ಲಿ ಸಿದ್ಧಹಸ್ತನೇ ಆಗಿದ್ದನು. ಚೆನ್ನೂರು ಜಲಾಲಸಾಹೇಬನಂತೂ ಪದಗಳ ಮೋಡಿಕಾರನೇ ಆಗಿದ್ದನು. ಆದರೆ ದನಗಾಹಿಯೂ ಅನಕ್ಷರಸ್ಥನಾಗಿದ್ದ ಕಡ್ಲೇವಾಡದ ಸಿದ್ದಪ್ಪನೂ ಪದ ಬರೆಯುತ್ತಾನೆ ಎಂಬ ವಿಷಯ ಯಾರಿಗೂ ತಿಳಿದಿರಲಿಲ್ಲ. ಸ್ವತಃ ಗುರುವಾಗಿದ್ದ ಮಡಿವಾಳಪ್ಪನವರಿಗೂ ಸಿದ್ದಪ್ಪ ಪದ ಬರೆಯುವ ಸಂಗತಿ ತಿಳಿದಿರಲಿಲ್ಲ. ಒಮ್ಮೆ ಶಿಷ್ಯರೊಂದಿಗೆ ಲೋಕಾಭಿರಾಮವಾಗಿ ಹರಟುವಾಗ ಕೃಷ್ಣಪ್ಪನು ತನ್ನ ಗುರುಬಂಧುವಾಗಿರುವ ಸಿದ್ದಪ್ಪನು ಪದ ರಚಿಸುತ್ತಾನೆ ಎಂದು ಮಡಿವಾಳಪ್ಪನವರಿಗೆ ಹೇಳುತ್ತಾನೆ. ಹರ್ಷಿತನಾದ ಮಡಿವಾಳಪ್ಪನವರು ಹೌದಾ! ‘‘ಅರೇ ಸಿದ್ದಪ್ಪಾ ಇಷ್ಟ್‌ದಿನಾ ನೀ ಭಜನಿಯಲ್ಲಿ ಸ್ವತಃ ಬರೆದ ಒಂದ್‌ಪದಾನೂ ಹಾಡಿಲ್ಲಲ್ಲ’’ ಅಂದರಂತೆ. ಎಲೆ ಮರೆಯ ಕಾಯಿಯಂತೆ ಅವಿತುಕೊಂಡಿದ್ದ ಸಿದ್ದಪ್ಪನು ಇದರಿಂದ ತೀರ ಮುಜುಗರಗೊಂಡು ‘‘ಛೇ ಛೇ ನಾ ಮಳ್ಳ ಮನಷ್ಯಾ! ನಾ ಎಲ್ಲಿ ಪದ ಬರೀಲಿ ಯಪ್ಪಾ! ಇವರೆಲ್ಲ ಸುಮ್‌ಹೇಳತಾರ’’ ಎಂದು ಗಪ್ಪಾದನಂತೆ. ಉಳಿದ ಶಿಷ್ಯರೆಲ್ಲ ಮತ್ತೂ ಜೋರಿನಿಂದ ಸಿದ್ದಪ್ಪ ತತ್ವಪದಗಳನ್ನು ರಚಿಸುವ ವಿಷಯವನ್ನು ಒತ್ತಿ ಹೇಳಲಾಗಿ ಮಡಿವಾಳಪ್ಪನವರಿಗೆ ಕುತೂಹಲ ಹೆಚ್ಚಾಗಿ ಹೀಗಾದರೆ ಈತ ತನ್ನ ಪ್ರತಿಭೆ ಬಿಟ್ಟುಕೊಡುವುದಿಲ್ಲ ಎಂದು ಮನಗಂಡು ತಮ್ಮ ಎಲ್ಲ ಶಿಷ್ಯರನ್ನು ಕರೆದು ಬರುವ ಅಮಾವಾಸ್ಯೆಯಂದು ಸಿದ್ದಪ್ಪ, ಕೃಷ್ಣಪ್ಪ ಎಲ್ಲರೂ ಭೃತ್ಯಾಚಾರ (ಸಮರ್ಪಣೆ ಭಾವ) ವಿಷಯ ಕುರಿತು ಹೊಸ ಪದವನ್ನು ರಚಿಸಿ ಹಾಡಬೇಕೆಂದು ಫರ್ಮಾನು ಹೊರಡಿಸುತ್ತಾರೆ.

ಸಿದ್ದಪ್ಪನಿಗೆ ಫಜೀತಿಗೆ ಇಟ್ಟುಕೊಳ್ಳುತ್ತದೆ. ಗುರುವಾಜ್ಞೆ ಮೀರುವಂತಿಲ್ಲ. ತಾನೊಬ್ಬ ಅನುಭಾವಿ ಕವಿ ಎಂಬ ಅಂಶವನ್ನು ಬಯಲಿಗೆ ತರಲು ಮನಸ್ಸಿಲ್ಲ. ತನ್ನ ಸ್ವಾನಂದಕ್ಕಾಗಿ ತನ್ನಲ್ಲೇ ಗುಣುಗುತ್ತ ಅಥವಾ ಅಂತರಂಗದಲ್ಲಿ ಅನುಭಾವಗಳು ಒತ್ತರಿಸಿ ಬಂದಾಗ ಪದಗಳು ತನ್ನಿಂದ ತಾನೆ ಹೊರಬಂದರಷ್ಟೆ ಸಾಕು. ಹೀಗಿರುತ್ತಿರಲು ಗುರುಬಂಧುಗಳೆಲ್ಲ ಇಕ್ಕಟ್ಟಿಗೆ ಸಿಲುಕಿಸಿ ಬಿಟ್ಟಿದ್ದಾರೆ. ಅಂತೂ ಅಮಾವಾಸ್ಯೆ ಬಂತು. ಶಿಷ್ಯರೆಲ್ಲರ ಪದಗಳ ಜುಗಲ್‌ಬಂದಿ ಕೇಳಲು ಮಠದ ಫೌಳಿಯಲ್ಲಿ ಜನರು ಕಿಕ್ಕಿರಿದು ನೆರೆದಿದ್ದಾರೆ. ಮಡಿವಾಳಪ್ಪನವರು ಅತ್ಯಂತ ಸಂತೋಷ ಭರಿತರಾಗಿ ಸಿದ್ದಪ್ಪ ಪದ ಹಾಡಲಾ! ಎಂದರಂತೆ. ನಾಚಿಕೆಯಿಂದ ತಲೆ ತಗ್ಗಿಸಿದ ಸಿದ್ದಪ್ಪನಾದರೂ ‘‘ಯಪ್ಪಾ ನಾ ಹುಂಬ ಹುಡದಿ, ಅಕ್ಷರಾಂಬಾದೆ ನನಗ್ ದುಷ್ಮಾನ್. ದನಾ ಕಾಯಾಂವ ನಾ ಏನ್‌ಪದಾ ಬರೀಲಿ ಯಪ್ಪಾ! ಕೃಷ್ಣಪ್ಪಣ್ಣ ಅಂದ್ರ್‌ಶಾಣ್ಯಾ, ಅಕ್ಷರ ಬಲ್ಲವರು. ಅವರ ಮುಂದ ನಾ ಎಲ್ಲಿ ಹತ್ತಬೇಕರಿ ಮುತ್ಯಾ’’ ಎಂದು ಮುದುಡಿ ಕುಳಿತನಂತೆ. ಅದಕ್ಕೆ ಮಡಿವಾಳಪ್ಪನವರು ‘‘ಹೌದ್ಹೌದು ಕೃಷ್ಣಪ್ಪ ನೀ ಎಷ್ಟೇಯಾದರೂ ಬ್ರಾಹ್ಮಣ ಮನಷ್ಯಾ, ಓದಿ ಬರದು ನಿನಗ್‌ರೂಢಿ ಅದಾ. ಇರ್ಲಿ ಬಿಡು ನೀನೇ ಮೊದಲ ಪದಾ ಅನು ನೋಡಮಿ’’ ಎನ್ನುತ್ತಾರೆ. ಗುರುವಾಜ್ಞೆಯಂತೆ ಕೃಷ್ಣಪ್ಪ ತಾನು ಗುರುಭಕ್ತಿ ಕುರಿತು ಹೊಸದಾಗಿ ರಚಿಸಿದ ಪದ ಹಾಡಲು ತೊಡಗುತ್ತಾನೆ.

ನಾ ಕಡಕೋಳದ ಗುಲಾಮ

ನನ್ನ ಹೆಸರ ತೆಗಿಬ್ಯಾಡ್ರಿ ಇನ್ನೊಮ್ಮ|

ಗುರು ಹಾಕಿ ಕೊಟ್ಟಾನ ಜಾಗೀರ ಇನಾಮಾ

ನನ್ಹೆಸರು ತೆಗಿಬ್ಯಾಡ್ರಿ ಮತ್ತೊಮ್ಮ ॥ ಪ॥

ಜನ ಮೆಚ್ಚಿದಲ್ಲಿ ನಾ ಇರಾಂವ

ಜನ ಅಖಿಳದೊಳು ನಾ ತಿರಗ್ಯಾಡಾಂವ

ಜನರೊಳಗೆ ಸಣ್ಣಾಗಿ ನಾ ನಡ್ಯಾಂವ

ನಾ ಗುರುವಿನ ಘೂಳ್ಯಾಗಿ ಮೆರ್ಯಾಂವ ॥ 1 ॥

ದಶೇಂದ್ರಿಯ ಗುಣಗಳ ಅಳ್ಯಾಂವ | ನಾ

ದಶರಥ ರಾಯನಂಗ ಮೆರ್ಯಾಂವ

ಕಸರತ್ತ ಕಮಾಯಿ ಮಾಡಾಂವ

ಕಬೀರ ಕಮಾಲನಂಗ ಕವಿ ಹೇಳಾಂವ ॥ 2 ॥

ಕೈಲಾಸದ ಮ್ಯಾಲ ಮನಸಿಡಾಂವ | ನಾ

ರಸರಾಯ ಹೋಳಿಗಿ ತುಪ್ಪ ಹೊಡ್ಯಾಂವ

ಗುಣನಿಧಿ ಗುರುವಿನ ಕೂಡಾಂವ

ಬಹದ್ದೂರ ಮಡಿವಾಳನ ನುಡಿ ನುಡ್ಯಾಂವ ॥

ಹೀಗೆ ಅತ್ಯಂತ ವಿನೀತ ಭಾವದಿಂದ ಪದ ಹಾಡುತ್ತಾನೆ. ತಾನು ಮಡಿವಾಳಪ್ಪನ ಗುಲಾಮ ಮಾತ್ರವಲ್ಲದೆ ಇಡೀ ಕಡಕೋಳದ ಪರಿಸರದ ಗುಲಾಮ ಎನ್ನುವಲ್ಲಿ ಆತನ ಗುರುಭಕ್ತಿ ಮಡುಗಟ್ಟಿ ನಿಂತಿದ್ದನ್ನು ನೋಡಿ ಸಭಿಕರು ತಲೆದೂಗುತ್ತಾರೆ. ತಮ್ಮೊಳಗೆ ಪಿಸು ಮಾತನಾಡುತ್ತ ಕೃಷ್ಣಪ್ಪನಿಗಿಂತ ವಿನೀತನಾಗಿ ಪದ ರಚಿಸಲು ಯಾರಿಂದಲೂ ಆಗದು. ಪಾಪ ! ನಿರಕ್ಷರಿ ಸಿದ್ದಪ್ಪ ಏನು ಬರೆಯಬಲ್ಲ ಬಿಡ್ರೋ! ಮುತ್ಯಾ ಮಡಿವಾಳಪ್ಪ ಸುಮ್ನೆ ಹುಂಬ ಶಿಷ್ಯನಿಗೆ ಫಜೀತಿಗಿ ಹಾಕದಲ್ಲ| ಎಂದು ಅಲವತ್ತುಕೊಳ್ಳುವಷ್ಟರಲ್ಲಿ ಮಡಿವಾಳಪ್ಪ ಸಿದ್ದಪ್ಪನೆಡೆ ಸನ್ನೆ ಮಾಡಿ ಹಾಡುವಂತೆ ಸೂಚಿಸುತ್ತಾರೆ. ಸಿದ್ದಪ್ಪನಾದರೂ ಅಳುಕುತ್ತಲೇ ಕಣ್ಣು ಮುಚ್ಚಿ ಭಾವತಂದುಲಿತನಾಗಿ

ನಾ ಏನು ಬಲ್ಲೆನಪ್ಪ ನಿಮ್ಮ ಕೂಸ

ಅಂದಿಗಿಂದಿಗಿ ನಿಮ್ಮ ದಾಸ

ಅಂಬಿಗರ ಚೌಡಯ್ಯನ ವಂಶ | ನಾ

ನಂಬಿಗಿಟ್ಟು ನಡದೇನವ್ವ ಒಂದೆ ಮನಸ ॥ ಪ ॥

ಶಿವ ಶಿವ ಎಂಬ ನುಡಿ ಲೇಸ

ನಮಗ ಉಂಡಗಾಯಿತು ಮನ ಉಲ್ಲಾಸ

ಹರಗುರುವಿನ ಮ್ಯಾಲ ಅದ ಮನಸ

ಮಹಾದೇವನ ಮ್ಯಾಲ ನಮ್ಮ ಧ್ಯಾಸ ॥ 1 ॥

ಹಮ್ಮನಳಿದು ಇರಬೇಕೊ ಖಾಸ

ಕಾಶಿ ಉಳವಿ ಗೋಕರ್ಣಕ್ಕ ಹೋಗೊದು ಏನ ಕೆಲಸ

ಬುದ್ಧಿ ಇಲ್ಲದೆ ಗುದ್ದಾಡುವುದು ಖಾಲಿ ನಾಸ

ಬಲ್ಲನುಭಾವಿಗೆ ಈ ನುಡಿ ಪಾಸ ॥ 2 ॥

ದೇಶಕಧಿಕವಾದ ಕಡಲೋಡ ವಾಸ

ಮಗ ಸಿದ್ಧನ ನುಡಿ ಕೇಳೊ ಕವಿಲೇಸ

ನಡೆ-ನುಡಿ ತಪ್ಪಿದರ ಬಹು ತರಾಸ

ತಂದಿ ಮಡಿವಾಳನ ಪಾದ ಹಿಡಿದರ ಕೈಲಾಸ ॥ 3 ॥

ಕಿವಿಗಡಚಿಕ್ಕುವ ಚಪ್ಪಾಳೆ ಕೇಳಿದಾಗಲೇ ಸಿದ್ದಪ್ಪ ಬಹಿರ್ಮುಖನಾಗಿ ಎಚ್ಚರಗೊಳ್ಳುತ್ತಾನೆ. ಮಡಿವಾಳಪ್ಪನವರ ಕಂಗಳಲ್ಲಿ ಆನಂದಬಾಷ್ಪ. ಕೃಷ್ಣಪ್ಪನ ರಚನೆಯಲ್ಲಿ ಅನನ್ಯ ಶರಣಾಗತಿ ಇದೆಯಾದರೂ ನಾ ಗುರುವಿನ ಘೂಳ್ಯಾಗಿ (ದೇವರಿಗಾಗಿ ಹರಕೆ ಬಿಟ್ಟ ಹೂಡದ ನಂದಿ) ಮೆರ್ಯಾಂವ ಎನ್ನುವಲ್ಲಿ ಅಂತರಂಗದ ಮದ ತುಸುವಾದರೂ ಇಣುಕಿದೆ. ಅಷ್ಟಕ್ಕೂ ತಲೆತಲಾಂತದಿಂದಲೂ ಓದು-ಬರಹಗಳ ಪರಿಸರದಿಂದ ಬಂದ ಬ್ರಾಹ್ಮಣ ಕೃಷ್ಣಪ್ಪ ಪದ ರಚಿಸಿದ್ದು ಮಹತ್‌ಸಾಧನೆಯಲ್ಲ. ಶತಮಾನಗಳಿಂದಲೂ ಅಕ್ಷರಗಳಿಂದ ವಂಚಿತ ತಳಸಮುದಾಯದಿಂದ ಬಂದ ಸಿದ್ದಪ್ಪ ಪದ ಬರೆದದ್ದು, ಪದದಲ್ಲಿಯೂ ‘‘ನಾ ಏನು ಬಲ್ಲೇನಪ್ಪ ನಿಮ್ಮ ಕೂಸು’’ ಎಂದು ಹೇಳುವಲ್ಲಿ ಸರ್ವ ಸಮರ್ಪಣೆ ಭಾವ ಕರಿಗೊಂಡದ್ದನ್ನು ಗಮನಿಸಿ ಮಡಿವಾಳಪ್ಪ ‘‘ಭಪ್ಪರೆ ಮಗನೇ ಸಿದ್ಧ! ನೀ ನನಗಿಂತ ದೊಡ್ಡಂವ ಇದ್ದಿ. ನಿನ್‌ಪದಾ ಜಗಾ ಬೆಳಗಿ ಹರಡತಾದ. ಈಗಾ ನಿನ್ನ ಪದಕ್ಕೊಂದು ಪದಾನೆ ಭಕ್ಷೀಸ ತಗೊ’’ ಎನ್ನುತ್ತ ನಿಂತಲ್ಲಿಯೇ ತಾವೊಂದು ಪದ ರಚಿಸಿ ಹಾಡುತ್ತಾರೆ.

ಜ್ಞಾನಪೂರ್ಣಂ ಜಗಂಜ್ಯೋತಿ

ನಿರ್ಮಲವಾದ ಮನವೆ ಕರ್ಪೂರದಾರತಿ॥

ಅನುದಿನ ಗುರುವಿನ ಅನುರಾಗ ಭಕ್ತೀಲಿ

ಜನನ ಮರಣ ರಹಿತ ಜಂಗಮಕ್ಕೆ ಬೆಳಗುವೆ ॥ ಪ ॥

ನಾನಾ ಜನ್ಮದ ಕತ್ತಲೆ ಕಳೆದುಳಿದು ಬೇಗ

ಮಾನವ ಜನ್ಮದ ಬೆಳಕೀಲಿ ॥

ಹೀನವಾಸನೆ ಜನ್ಮ ಹಿಂದುಳಿಸಿ ಗುರುವಿನ

ಜ್ಞಾನವೆ ಗತಿಯೆಂದು ಮನವೊಪ್ಪಿ ಬೆಳಗುವೆ ॥ 1 ॥

ನಾ ನೀನೆಂಬುದು ಬಿಡರಿ |

ನರಕವೇ ಪ್ರಾಪ್ತಿ ಜ್ಞಾನಿಗೊಳೊಡನಾಡಿರಿ ॥

ಸ್ವಾನುಭಾವದ ಸುಖ ತಾನೆ ಕೈ ಸಾರುವುದು

ಅನುಭಾವ ಮಂಟಪಕ್ಕೆ ಮನಮುಟ್ಟಿ ಬೆಳಗುವೆ ॥ 2 ॥

ಅಷ್ಟಾವರಣದ ಸ್ಥಲವು ಮಾನವ ಜನ್ಮ

ಹುಟ್ಟಿ ಬರುವುದು ದುರ್ಲಭವು ॥

ಇಟ್ಟಾನೊ ಗುರುಹಸ್ತ ಹುಟ್ಟಿದ ಮಗ ಸಿದ್ಧ

ಹೆಸರಿಟ್ಟು ಬೆಳಗುವೆ ಮಹಾಂತ ಮಹಾರಾಜಗೆ ॥ 3 ॥

ಇದು ಕೊನೆಗೆ ಹಾಡುವ ಮಂಗಳಾರುತಿ ಪದ. ಅಂದರೆ ಇಲ್ಲಿಗೆ ಕಲಾಪಗಳು ಮುಗಿದು ಸಭೆ ಬರ್ಖಾಸ್ತ್ತು. (ಇದು ಉರ್ದು ಪದ. ಇದರರ್ಥ ಸಂವಾದದಲ್ಲಿ ವಿಚಾರಗಳು ಪರಾಕಾಷ್ಠೆಗೇರಿ ಆತ್ಯಂತಿಕ ಸ್ತರಕ್ಕೇರಿದಾಗ ಮತ್ತೊಂದು ಮಾತಾಡದಂತೆ ಸ್ತಬ್ಧವಾಗುವ ಹಂತ)

ಮಡಿವಾಳಪ್ಪನವರು ಸದರಿ ಪದವನ್ನು ಹಾಡಿ ಅಂಕಿತದಲ್ಲಿ ಶಿಷ್ಯನ ಹೆಸರಿಸಿ ಆತನನ್ನು ಅಜರಾಮರಗೊಳಿಸಿದ್ದಾರೆ. ಕೃಷ್ಣಪ್ಪನ ಪಾಂಡಿತ್ಯಕ್ಕಿಂತ ಸಿದ್ಧಪ್ಪನ ಮುಗ್ಧ ಪ್ರೌಢಿಮೆ ಮನ ಸೆಳೆಯುತ್ತದೆ. ಬಹಿರಂಗದ ಪೂಜೆ ಡಂಭಾಚಾರವಾದರೆ ಅಂತರಂಗದ ಭಕ್ತಿ ಪಕ್ವತೆಯನ್ನು ನೀಡುತ್ತದೆ. ಶುದ್ಧವಾದ ಮನವೇ ಸೃಷ್ಟಿ ಸಮಸ್ತಕ್ಕೆ ಬೆಳಗುವ ಕರ್ಪೂರವಾಗಬೇಕು. ಜನನ ಮರಣದಿಂದ ಅತೀತವಾದ ಜಂಗಮ ಅಂದರೆ ನಿತ್ಯ ನೂತನವಾಗಿ ಪ್ರವಹಿಸುವ ಜ್ಞಾನ. ಇಂಥ ಜ್ಞಾನವು ಲೋಕಾನುಭಾವದಿಂದಲ್ಲದೆ ಶೂನ್ಯದಲ್ಲಿ ಸೃಷ್ಟಿಯಾಗದು. ಇಂಥ ಜ್ಞಾನರೂಪಿ ಜಂಗಮಕ್ಕೆ ಅರ್ಥಾತ್‌ಎಲ್ಲ ಜ್ಞಾನಕ್ಕೂ ಪಾತಳಿಯಾಗಿರುವ ಸಮಾಜಕ್ಕೆ ಮನವೊಪ್ಪಿ, ಮನವೊತ್ತಿ ಬೆಳಗಬೇಕು ಎನ್ನುತ್ತಾರೆ ಮಡಿವಾಳಪ್ಪ. ಜ್ಞಾನವೆಂಬ ಅಗ್ನಿ ಪ್ರಜ್ವಲಿಸಲು ಲೋಕ ಮೂಲದ ಅನುಭವಗಳು ಪುಷ್ಟಿ ನೀಡುತ್ತವೆ. ಆದ್ದರಿಂದ ಲೋಕ-ಅಲೋಕಗಳ ಅಭಿನ್ನತೆಯಲ್ಲಿ ಪ್ರಾಯೋಗಿಕ ಅಧ್ಯಾತ್ಮ ಅಸ್ತಿತ್ವಗೊಳ್ಳುತ್ತದೆ ಎನ್ನುತ್ತಾರೆ ತತ್ವಪದಕಾರರು.

ಗುರು ಪರಂಪರೆಯಲ್ಲಿ ಇಂಥ ಹತ್ತಾರು ಪ್ರಸಂಗಗಳು ಜೀವನಾನುಭವದ ಭಾಗವಾಗಿ ಅವರ ಸಮದರ್ಶಿತ್ವದ ಪ್ರತೀಕವಾಗಿ ಪದಗಳು ಅರಳಿ ನಿಂತಿವೆ. ಮಡಿವಾಳಪ್ಪ ಮತ್ತು ಅವರ ಶಿಷ್ಯರ ಬಹುತೇಕ ರಚನೆಗಳು ಪ್ರಸಂಗವೊಂದರ ಚುಂಗು ಹಿಡಿದು ಅಂದಂದಿನ ಕಾಣ್ಕೆಗಳಾಗಿಯೆ ಕಾಣಿಸಿಕೊಂಡಿವೆ. ಪ್ರಸಂಗವಿಲ್ಲದ ಪದಗಳು ಕಡಿಮೆ. ಪ್ರತಿಯೊಂದು ತತ್ವಪದದ ಹಿಂದೆ ಚಾರಿತ್ರಿಕ ಸಂಗತಿಗಳು, ಅವರ ಬದುಕಿನ ಜೀವ ಸಂವೇದಿ ಸಂಘರ್ಷಗಳಾಗಿಯೇ ಅವತರಿಸಿವೆ. ಹೀಗಾಗಿಯೇ ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ದರ್ಶನವಾಗಬೇಕಾದರೆ ಅಲ್ಲಿ ಹರಿಗಡಿಯದಂತೆ ರಚನೆಯಾಗಿರುವ ಮತ್ತು ಈ ಕ್ಷಣಕ್ಕೂ ರಚನೆಯಾಗುತ್ತಿರುವ ತತ್ವಪದಗಳಿಗೆ ಕಿವಿಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಡಾ. ಮೀನಾಕ್ಷಿ ಬಾಳಿ

contributor

Similar News