ವಸತಿ ರಹಿತ ಮೀನುಗಾರರಿಗೆ 10 ಸಾವಿರ ಮನೆ: ಮಂಕಾಳ ವೈದ್ಯ
ಬೆಳಗಾವಿ : ಮೀನುಗಾರರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಸಾಲ ಸೌಲಭ್ಯ, ವಿದ್ಯಾನಿಧಿ ಯೋಜನೆ, ಗುಂಪು ವಿಮಾ ಯೋಜನೆ ಜಾರಿ ಸೇರಿದಂತೆ ರಾಜ್ಯ ಸರಕಾರವು ವಸತಿ ರಹಿತ ಮೀನುಗಾರರಿಗೆ ಮತ್ಸ್ಯಾಶ್ರಯ ಯೋಜನೆಯಡಿ ಇದುವರೆಗೆ 10 ಸಾವಿರ ಮನೆಗಳನ್ನು ನೀಡಿದೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು.
ಬುಧವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾಗರಾಜು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಾಂಪ್ರದಾಯಿಕ ಮೀನುಗಾರರಿಗೆ ಮೀನು ಹಿಡುವಳಿಯನ್ನು ಹೆಚ್ಚಿಸಲು ಸಮುದ್ರದಲ್ಲಿ ಮೀನುಮರಿಗಳ ಬಿತ್ತನೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕಾಗಿ 2025-26ನೇ ಸಾಲಿನಲ್ಲಿ 50 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಈ ಕಾರ್ಯಕ್ರಮದಡಿ 2024-25ನೇ ಸಾಲಿನಲ್ಲಿ 55 ಲಕ್ಷ ರೂ. ವೆಚ್ಚದಲ್ಲಿ 1.53 ಲಕ್ಷ ಸೀಬಾಸ್ ತಳಿಯ ಮೀನುಮರಿಗಳನ್ನು ಕರಾವಳಿಯ ಅಳಿವೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮೀನುಗಾರಿಕೆ ಇಲಾಖೆಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯವನ್ನು ಒಟ್ಟು 14,998 ಮೀನುಗಾರರು ಪಡೆದಿರುತ್ತಾರೆ. ಮೀನುಗಾರರ ಸಮುದಾಯದ ಕಲ್ಯಾಣವನ್ನು ಕಾಪಾಡಲು ಮಹಿಳಾ ಮೀನುಗಾರರಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ, ಆಕಸ್ಮಿಕ ಅವಘಡದಿಂದ ಮೃತಪಟ್ಟ ಮೀನುಗಾರರ ವಾರಸುದಾರರಿಗೆ ಸಂಕಷ್ಟ ಪರಿಹಾರ ನಿಧಿಯಿಂದ ಪರಿಹಾರ ವಿತರಣೆ, ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ವಿತರಣೆ, ಮೀನುಗಾರರ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ಮೀನುಗಾರಿಕೆ ನಿಷೇಧದ ಅವಧಿಯಲ್ಲಿ ಪರಿಹಾರ ವಿತರಣೆ, ಮೀನುಗಾರರಿಗೆ ಗುಂಪು ವಿಮಾ ಯೋಜನೆ, ವಸತಿ ಸೌಕರ್ಯ, ಸಾಂಪ್ರದಾಯಿಕ ಮೀನುಗಾರರರಿಗೆ ಮೀನು ಹಿಡುವಳಿಯನ್ನು ಹೆಚ್ಚಿಸಲು ಕೃತಕ ಬಂಡೆಗಳ ಸ್ಥಾಪನೆ ಹಾಗೂ ಸಮುದ್ರದಲ್ಲಿ ಮೀನುಮರಿ ಬಿತ್ತನೆ ಕಾರ್ಯಕ್ರಮ ಯೋಜನೆಗಳು ಜಾರಿಯಲ್ಲಿವೆ ಎಂದು ಮಂಕಾಳ ವೈದ್ಯ ಸದನಕ್ಕೆ ಮಾಹಿತಿ ನೀಡಿದರು.