ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಕಾಯ್ದೆ ರೂಪ | ಕರ್ನಾಟಕ ಅನುಸೂಚಿತ ಜಾತಿಗಳ(ಉಪವರ್ಗೀಕರಣ) ವಿಧೇಯಕ ಮಂಡನೆ
ಪ್ರವರ್ಗ-‘ಎ, ಬಿ, ಸಿ’ ಕ್ರಮವಾಗಿ ಶೇ. 6, 6, 5ರಷ್ಟು ಮೀಸಲಾತಿ ಹಂಚಿಕೆ
ಬೆಳಗಾವಿ : ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದ ಮಹತ್ವದ ‘ಕರ್ನಾಟಕ ಅನುಸೂಚಿತ ಜಾತಿಗಳ(ಉಪವರ್ಗೀಕರಣ) ವಿಧೇಯಕ-2025’ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಬುಧವಾರ ವಿಧಾನಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು, ಶಾಸನ ರಚನಾ ಕಲಾಪದಲ್ಲಿ ವಿಧೇಯಕವನ್ನು ಮಂಡನೆ ಮಾಡಿದರು. ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗ ವರದಿಯನ್ನು ನೀಡಿತ್ತು. ಸದರಿ ಆಯೋಗದ ಶಿಫಾರಸು ಗಳನ್ನು ಕೆಲ ಮಾರ್ಪಾಡಿನೊಂದಿಗೆ ಸರಕಾರವು ಅನುಮೋದಿಸಿದೆ ಹಾಗೂ ಪರಿಶಿಷ್ಟ ಜಾತಿಗಳಿಗೆ ಶೇ.17ರಷ್ಟು ಮೀಸಲಾತಿಯ ಪಾಲಿನೊಂದಿಗೆ 101 ಜಾತಿಗಳಿಗೆ ಮೀಸಲಾತಿ ವರ್ಗೀಕರಣ ಮಾಡಲಾಗಿದೆ.
ಪ್ರವರ್ಗ-‘ಎ’ (16 ಜಾತಿಗಳು) ಶೇ.6, ಪ್ರವರ್ಗ-‘ಬಿ’(19 ಜಾತಿಗಳು) ಶೇ.6 ಹಾಗೂ ಪ್ರವರ್ಗ-‘ಸಿ’(63 ಜಾತಿಗಳು) ಶೇ.5ರಷ್ಟು ಒಟ್ಟು (98 ಜಾತಿಗಳು) ಶೇ.17ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ. ಇದೇ ವೇಳೆ ಆದಿ ಆಂಧ್ರ ಜಾತಿಯ ಸಂಕೇತ 1, ಆದಿ ಆಂಧ್ರ-2 ಹಾಗೂ ಆದಿಕರ್ನಾಟಕ-3 ಹಾಗೂ ‘ಎ’ ಮತ್ತು ‘ಬಿ’ ಪ್ರವರ್ಗಗಳಲ್ಲಿ ಉಲ್ಲೇಖಿಸದಿರುವ ಆದರೆ, ಸಂವಿಧಾನ (ಅನುಸೂಚಿತ ಜಾತಿಗಳ) ಆದೇಶ, 1950ರಡಿ ಪಟ್ಟಿ ಮಾಡಲಾದ ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾದವುಗಳೂ, ಸರಕಾರದ ಸುತ್ತೋಲೆ ಸಂಖ್ಯೆ. ಎಸ್‍ಡಬ್ಲ್ಯೂಡಿ 8 ಎಸ್‍ಎಲ್‍ಪಿ 2024 (ಪಿ-5) 2025ರ ಅಕ್ಟೋಬರ್ 8ರ ಮತ್ತು 2025ರ ಅಕ್ಟೋಬರ್ 9ರಲ್ಲಿ ನಿರ್ದಿಷ್ಟಪಡಿಸಲಾದ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಪ್ರವರ್ಗ-ಎ ಅಥವಾ ಪ್ರವರ್ಗ-ಬಿ ಇವುಗಳಡಿ ಮೀಸಲಾತಿಗಾಗಿ ಆಯ್ಕೆ (opt) ಮಾಡಿಕೊಳ್ಳಲು ಅರ್ಹರಾಗಿರತಕ್ಕದ್ದು.
ಆದುದರಿಂದ ರಾಜ್ಯ ಸರಕಾರವು ಪರಿಶಿಷ್ಟ ಜಾತಿಗಳ ಒಳಮೀಸಲಾತಿ (ಉಪ-ವರ್ಗೀಕರಣ) ಸದರಿ ಸರಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನು ಬದ್ಧತೆಯನ್ನು ನೀಡಲು ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ ಉದ್ದೇಶಿತ ವಿಧೇಯಕವನ್ನು ಮಂಡನೆ ಮಾಡಲಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹಿಂದುಳಿದ ಭಂಬಿ, ಭಾಂಬಿ, ಅಸದಾರು, ಅಸೋಡಿ, ಚಮಡಿಯಾ, ಚಮ್ಮಾರ, ಚಂಬಾರ, ಚಮಗಾರ, ಮೋಚಿಗಾರ, ಮಾದಿಗ, ಮಾದರ, ಮೋಚಿ, ತೆಲುಗು, ಚಂಡಾಲ. ಮಾತಂಗ ಸೇರಿದಂತೆ ಮಾದಿಗ ಸಂಬಂಧಿತ ಜಾತಿಗಳಿಗೆ ಪ್ರವರ್ಗ-‘ಎ’ ಅಡಿಯಲ್ಲಿ ಶೇ.6ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಛಲವಾದಿ, ಹೊಲೆಯ, ಬಲಗೈ, ಚನ್ನಯ್ಯ, ಮಾಲ, ವಳ್ಳುವನ್, ಮುಂಡಾಲ, ಪರೈಯನ್, ಪರಾಯ ಸೇರಿದಂತೆ ಪ್ರವರ್ಗ-‘ಬಿ’ ಅಡಿಯಲ್ಲಿ ಹೊಲೆಯ-ಛಲವಾದಿ ಸಂಬಂಧಿತ ಜಾತಿಗಳಿಗೆ ಶೇ.6ರಷ್ಟು ಮೀಸಲಾತಿ ನೀಡಲಾಗಿದೆ.
ಆದಿಯಾ(ಕೊಡಗು ಜಿಲ್ಲೆ), ಅರುಂತತಿಯಾರ್, ಬಂಜಾರ, ಲಂಬಾಣಿ, ಲಮಾಣಿ, ಬುಡ್ಗಜಂಗಮ, ಬೇಡಜಂಗಮ, ಭೋವಿ, ವಡ್ಡರ್, ಚಕ್ಕಲಿಯಾನ್, ದಕ್ಕಲಿಗ, ಹಂಚಿಜೋಗಿ, ಕೊರಚ, ಕೊರಮ, ಮಾಸ್ತಿ, ಸಿಳ್ಳೆಕ್ಯಾತ, ತೋಟಿ, ಗೋಸಂಗಿ, ಡೊಂಬರ ಸೇರಿದಂತೆ ಪ್ರವರ್ಗ ‘ಸಿ’ ಅಡಿಯಲ್ಲಿನ ಜಾತಿಗಳಿಗೆ ಶೇ.5ರಷ್ಟು ಒಳಮೀಸಲಾತಿಗೆ ಅವಕಾಶ ಕಲ್ಪಿಸುವ ವಿಧೇಯಕವನ್ನು ಮಂಡನೆ ಮಾಡಲಾಗಿದೆ.