×
Ad

ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ನಿರ್ಣಯ ಅಂಗೀಕರಿಸಬೇಕು : ಎ.ಎಸ್.ಪೊನ್ನಣ್ಣ

ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ಸದನ ಮುಂದೂಡಿಕೆ

Update: 2025-12-17 19:25 IST

ಬೆಳಗಾವಿ : ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿರುವ ಕೇಂದ್ರದ ತನಿಖಾ ಸಂಸ್ಥೆಗಳಾದ ಈ.ಡಿ, ಐಟಿ, ಸಿಬಿಐ ವಿರುದ್ಧ ಸದನದಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಕಾಂಗ್ರೆಸ್ ಸದಸ್ಯ ಎ.ಎಸ್.ಪೊನ್ನಣ್ಣ ಬುಧವಾರ ಶೂನ್ಯವೇಳೆಯಲ್ಲಿ ಪ್ರಸ್ತಾವಿಸಿದ ವಿಷಯವು, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದಕ್ಕೆ ಎಡೆ ಮಾಡಿಕೊಟ್ಟಿತು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕರಣದಲ್ಲಿ ಈ ಕೇಂದ್ರ ತನಿಖಾ ಸಂಸ್ಥೆಗಳು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ದಾಖಲಿಸಿದ್ದ ಆರೋಪ ಪಟ್ಟಿಯನ್ನು ದಿಲ್ಲಿ ನ್ಯಾಯಾಲಯ ತಿರಸ್ಕರಿಸಿದೆ. ಇದೇ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿಗೂ ಈ.ಡಿ ನೋಟಿಸ್ ನೀಡಿತ್ತು. ನ್ಯಾಯಾಲಯವು ಆ ತನಿಖಾ ಸಂಸ್ಥೆಗೆ ಛೀಮಾರಿ ಹಾಕಿದೆ. ಇಂತಹ ಘಟನೆಗಳನ್ನು ತಡೆಯಲು ಒಂದು ಖಂಡನಾ ನಿರ್ಣಯ ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಲೇಬೇಕು ಎಂದು ಅವರು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್, ಇದು ಶೂನ್ಯವೇಳೆಯಲ್ಲಿ ಪ್ರಸ್ತಾವಿಸುವ ವಿಷಯವೇ? ಯಾವ ಆಧಾರದಲ್ಲಿ ಈ ವಿಷಯವನ್ನು ಪ್ರಸ್ತಾವಿಸಲು ಅವಕಾಶ ನೀಡಲಾಗಿದೆ. ಎಂದು ಪ್ರಶ್ನಿಸಿದರು.

ಇದಕ್ಕೆ ದನಿಗೂಡಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧದ ವಿಷಯಕ್ಕೆ ಉತ್ತರ ನೀಡುವವರು ಯಾರು?, ಯಾವ ಇಲಾಖೆಯ ಸಚಿವರು ಇದಕ್ಕೆ ಪ್ರತಿಕ್ರಿಯಿಸಬೇಕು ಎಂದು ಹೇಳಿದರು.

ಬಳಿಕ ಮಾತನಾಡಿದ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ, ಕೇಂದ್ರ ಸರಕಾರ ಈ.ಡಿ, ಐಟಿ, ಸಿಬಿಐ ಬಳಸಿಕೊಂಡು ವಿರೋಧ ಪಕ್ಷಗಳನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ ತನಿಖೆ ಮಾಡುತ್ತಿರೋದು ಎಂದು ಅಶೋಕ್ ತಿರುಗೇಟು ನೀಡಿದರು.

ಎ.ಎಸ್.ಪೊನ್ನಣ್ಣ ಪ್ರಸ್ತಾವಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಪೊನ್ನಣ್ಣ ಗಂಭೀರವಾದ ವಿಚಾರ ಎತ್ತಿದ್ದಾರೆ. ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.ಕಾನೂನು ಚೌಕಟ್ಟಿನಡಿಯಲ್ಲಿ ಏನು ಮಾಡಬಹುದು ಎಂದು ನೋಡೋಣ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯೂ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ, ನಮಗೆ ಸ್ವಾತಂತ್ರ್ಯ ಕೊಡಿಸಿದ ಪತ್ರಿಕೆ. ಈ ಪತ್ರಿಕೆಯ ಮೇಲೆ ರಾಜಕೀಯ ಕಾರಣಗಳಿಗಾಗಿ ಗೂಬೆ ಕೂರಿಸುವ ಕೆಲಸ ಮಾಡಲಾಯಿತು. ಆದರೆ, ನ್ಯಾಯಾಲಯವು ಅವರಿಗೆ ಕಪಾಳ ಮೋಕ್ಷ ಮಾಡಿದೆ ಎಂದು ಹೇಳಿದರು.

ಎಚ್.ಕೆ.ಪಾಟೀಲ್ ಮಾತಿಗೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗದ್ದಲ ಎಬ್ಬಿಸಿದರು. ಅಲ್ಲದೇ, ಒಂದು ವೇಳೆ ಶೂನ್ಯ ವೇಳೆಯಲ್ಲಿ ಪ್ರಸ್ತಾವಿಸಿದರೆ ನಮಗೂ ಚರ್ಚೆಗೆ ಅವಕಾಶ ನೀಡಬೇಕು. ಸಾರ್ವಜನಿಕ ಟ್ರಸ್ಟ್ ಆಗಿದ್ದು, ಹೇಗೆ ಒಂದು ಕುಟುಂಬದ ಖಾಸಗಿ ಟ್ರಸ್ಟ್ ಆಯ್ತು ಎಂದು ನಾವು ಚರ್ಚೆ ಮಾಡುತ್ತೇವೆ ಎಂದು ಸುರೇಶ್ ಕುಮಾರ್ ಪಟ್ಟು ಹಿಡಿದರು. ಸದನದಲ್ಲಿ ಗದ್ದಲ ಹೆಚ್ಚಾಗುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್ ಸದನವನ್ನು 10 ನಿಮಿಷ ಮುಂದೂಡಿದರು.

ʼನಿಮ್ಮ ಖುಷಿಗಾಗಿ ಪೀಠವನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಸದನವನ್ನು ನಿಮ್ಮ ಮನೆ ಎಂದು ತಿಳಿದುಕೊಂಡಿದ್ದೀರಾ. ನಿಮ್ಮ ಮನಸೋಇಚ್ಛೆ ನಡೆಸಲು. ಬೆಳಗ್ಗೆ 9 ಗಂಟೆಗೆ ಸದನ ಕರೆದು, 11 ಗಂಟೆಗೆ ಕಲಾಪ ಆರಂಭಿಸುತ್ತೀರಾ. ನಾವೆಲ್ಲ 9 ಗಂಟೆಗೆ ಬಂದು ಕೂರಬೇಕು. ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಈ ಸದನದಲ್ಲಿ ಚರ್ಚೆಗೆ ಅವಕಾಶ ಕೊಡಲು ಸಾಧ್ಯವೆ ಇಲ್ಲʼ ಎಂದು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ಹೇಳಿದರು.

ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಶಿವಲಿಂಗೇಗೌಡ

ಐಟಿ, ಈ.ಡಿ ಬಗ್ಗೆ ನಿಮಗೆ ಗೊತ್ತಾಗುವುದಿಲ್ಲ ಸುಮ್ಮನೆ ಕೂರಿ ಎಂದು ಶಿವಲಿಂಗೇಗೌಡ ಮಾತಿಗೆ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಅಡ್ಡಿಪಡಿಸಿದರು. ಈ ಕುರಿತು ತೀವ್ರ ಅಸಮಾಧಾನ ಹೊರ ಹಾಕಿದ ಶಿವಲಿಂಗೇಗೌಡ, ಈ ಮನುಷ್ಯ ನಾನು ಮಾತನಾಡುವಾಗಲ್ಲೆಲ್ಲ ಎದ್ದು ನಿಂತು ಅಡ್ಡಿಪಡಿಸುತ್ತಾನೆ. ಈತನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News