Belagavi | ವಾಲ್ಮೀಕಿ ಭವನ ನಿರ್ಮಾಣ ವಿಚಾರಕ್ಕೆ ಗ್ರಾಮದಲ್ಲಿ ಘರ್ಷಣೆ: ಕಲ್ಲು ತೂರಾಟ, ಹಲ್ಲೆ
ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ. ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ, ಒಂದು ಸಮುದಾಯದ ಜನರು ಗುಂಪಾಗಿ ಬಂದು ಇನ್ನೊಂದು ಸಮುದಾಯದ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪ ಕೇಳಿ ಬಂದಿದೆ.
ಸದಾಶಿವ ಭಜಂತ್ರಿ ಎಂಬುವವರ ಮನೆಗೆ ಕಲ್ಲು ತೂರಾಟ ನಡೆಸಲಾಗಿದ್ದು, ಕಲ್ಲು, ಕಟ್ಟಿಗೆಗಳಿಂದ ಹೊಡೆದು ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮನೆ ಮಾಳಿಗೆ ಹಾಗೂ ವಸ್ತುಗಳು ಸಂಪೂರ್ಣವಾಗಿ ಧ್ವಂಸಗೊಂಡಿವೆ ಎನ್ನಲಾಗಿದೆ.
ಘಟನೆಯ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿವೆ. ಮಹಿಳೆಯರನ್ನು ಲೆಕ್ಕಿಸದೆ ಪುರುಷರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ.
ಘರ್ಷಣೆಯಲ್ಲಿ ಎರಡು ಸಮುದಾಯಗಳ ಕೆಲವರಿಗೆ ಗಾಯಗಳಾಗಿವೆ. ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕಾಗಿ ಜಾಗ ಸರ್ವೇಗೆ ಬಂದಿದ್ದ ವೇಳೆ, ಎಸ್ಸಿ ಸಮುದಾಯದ ಮನೆಯ ಬಳಿ ಭವನ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಗುಂಪು ಮನೆಯ ಮೇಲೆ ಕಲ್ಲು ತೂರಾಟ ನಡೆಸಿದೆ ಎಂಬ ಆರೋಪ ಇದೆ.
ಘಟನೆ ನೇಸರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ಈ ಸಂಬಂಧ ಶೋಭಾ ಭಜಂತ್ರಿ ಅವರು ಓರ್ವ ಮಹಿಳೆ ಸೇರಿದಂತೆ 17 ಜನರ ವಿರುದ್ಧ ದೂರು ದಾಖಲಿಸಿದ್ದು, ಆರೋಪಿಗಳು ಅಕ್ರಮವಾಗಿ ಮನೆ ಪ್ರವೇಶಿಸಿ ನಾಲ್ವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ವಾಲ್ಮೀಕಿ ಸಮುದಾಯದ ಲಕ್ಷ್ಮೀ ತಳವಾರ ಅವರು ಆರು ಜನರ ವಿರುದ್ಧ ದೂರು ನೀಡಿದ್ದು, ವಾಲ್ಮೀಕಿ ಮೂರ್ತಿ ಹಾಗೂ ಸುತ್ತಮುತ್ತಲಿನ ಜಾಗ ಸ್ವಚ್ಛಗೊಳಿಸುವ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.