Belagavi | ಬಿಡಿಸಿಸಿ ಬ್ಯಾಂಕ್ ನೌಕರರ ಆಕ್ರೋಶ : ಶಾಸಕ ಲಕ್ಷ್ಮಣ ಸವದಿ, ಪುತ್ರನ ಬಂಧನಕ್ಕೆ ಆಗ್ರಹ
ಬೆಳಗಾವಿ : ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗರಾಜ ಕರೆಣ್ಣವರ ಮೇಲೆ ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಎದುರು ಡಿಸಿಸಿ ಬ್ಯಾಂಕ್ ನೌಕರರು ಧರಣಿ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ನೌಕರರು ಶಾಸಕ ಸವದಿ ವಿರುದ್ಧ ಧಿಕ್ಕಾರ ಕೂಗಿ, ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ಶಾಸಕ ಲಕ್ಷ್ಮಣ ಸವದಿ ಹಾಗೂ ಅವರ ಪುತ್ರ ಈ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭ ಡಿಸಿಸಿ ಬ್ಯಾಂಕ್ ನೌಕರರು ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಮನವಿ ಸಲ್ಲಿಸಿ, ನೌಕರರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
► ‘ಸವದಿ ಸುಳ್ಳಿನ ಸರದಾರ’: ತೀವ್ರ ಟೀಕೆ
ಬಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗರಾಜ ಕರೆಣ್ಣವರ ಮೇಲೆ ನಡೆದ ಹಲ್ಲೆ ಸವದಿ ಅವರ ಮನೆಯಲ್ಲೇ ನಡೆದಿದ್ದು, ಈಗ ದಿನಕೊಂದು ಸುಳ್ಳು ಕಥೆಗಳನ್ನು ಜನರ ಮುಂದೆ ಹೇಳಲಾಗುತ್ತಿದೆ ಎಂದು ಧರಣಿನಿರತರು ಆರೋಪಿಸಿದರು. ಸವದಿ ಅವರು ಸತ್ಯ ಹೇಳಬೇಕಾದರೆ, ತಮ್ಮ ಮನೆಯ ಸಿಸಿಟಿವಿ ದೃಶ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.