×
Ad

Belagavi | ವಿವಾಹಿತೆಯೊಂದಿಗೆ ಪರಾರಿಯಾದ ಯುವಕನ ಮನೆ ಮೇಲೆ ದಾಳಿ; ಮನೆ ಧ್ವಂಸ, ದರೋಡೆ ಆರೋಪ

Update: 2026-06-30 13:37 IST

ಬೆಳಗಾವಿ : ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವಿವಾಹಿತೆಯೊಂದಿಗೆ ಪರಾರಿಯಾದ ಯುವಕನ ಮನೆ ಮೇಲೆ 50ಕ್ಕೂ ಹೆಚ್ಚು ಜನರು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿ ಮನೆ ಧ್ವಂಸಗೊಳಿಸಿರುವ ಘಟನೆ ನಡೆದಿರುವುದು ವರದಿಯಾಗಿದೆ.

ಎರಡು ದಿನಗಳ ಹಿಂದೆ ನಾಗವ್ವ ಎಂಬ ವಿವಾಹಿತೆಯೊಂದಿಗೆ ಯಲ್ಲಪ್ಪ ನಾಯಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ನಾಗವ್ವ ಕಳೆದ ವರ್ಷ ಬಸಪ್ಪ ನಾಯಕ ಅವರನ್ನು ವಿವಾಹವಾಗಿದ್ದರು. ಬಸಪ್ಪ ನಾಯಕ ಹಾಗೂ ಯಲ್ಲಪ್ಪ ನಾಯಕ ಆತ್ಮೀಯ ಸ್ನೇಹಿತರಾಗಿದ್ದು, ಬೆಳಗಾವಿಯ ಖಾಸಗಿ ಕಂಪನಿಯೊಂದರಲ್ಲಿ ಮೂವರೂ ಕೆಲಸ ಮಾಡುತ್ತಿದ್ದರು. ಈ ವೇಳೆ ಯಲ್ಲಪ್ಪ ಹಾಗೂ ನಾಗವ್ವ ನಡುವೆ ಸಲುಗೆ ಬೆಳೆದು ಇಬ್ಬರೂ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಈ ಘಟನೆಗೆ ಆಕ್ರೋಶಗೊಂಡ ನಾಗವ್ವ ಹಾಗೂ ಬಸಪ್ಪ ಅವರ ಕುಟುಂಬಸ್ಥರು ಸೇರಿದಂತೆ 50ಕ್ಕೂ ಹೆಚ್ಚು ಜನರು ಮಾರಕಾಸ್ತ್ರಗಳೊಂದಿಗೆ ಯಲ್ಲಪ್ಪ ನಾಯಕನ ಮನೆ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ದಾಳಿಯಲ್ಲಿ ಮನೆಯ ಹಂಚುಗಳು, ಟಿವಿ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಲಾಗಿದೆ. ದಾಳಿ ಬಳಿಕ ಮನೆಯಿಂದ ಚಿನ್ನಾಭರಣ, ನಗದು ಹಾಗೂ 25 ಕುರಿಗಳನ್ನು ಕೊಂಡೊಯ್ದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಘಟನೆ ಸಂಬಂಧ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂತ್ರಸ್ತ ಕುಟುಂಬವು ಬೆಳಗಾವಿ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News