ಅಕ್ರಮ ಆಸ್ತಿ ಆರೋಪ: ಅಬಕಾರಿ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ ಮನೆ ಸೇರಿ 6 ಕಡೆ ಈಡಿ ದಾಳಿ
ಬೆಳಗಾವಿ: ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ಡಾ.ವೈ.ಮಂಜುನಾಥ ಅವರಿಗೆ ಸೇರಿದ ನಿವಾಸ ಸೇರಿದಂತೆ ಆರು ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಬೆಳಗಾವಿಯ ದೂರದರ್ಶನ ಕೇಂದ್ರದ ಸಮೀಪದಲ್ಲಿರುವ ಡಾ. ವೈ.ಮಂಜುನಾಥ ಅವರ ನಿವಾಸದ ಮೇಲೆ ಗೋವಾ ಹಾಗೂ ಬೆಂಗಳೂರು ಮೂಲದ ಈಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. 10ಕ್ಕೂ ಅಧಿಕ ಅರೆಸೇನಾ ಪಡೆ ಸಿಬ್ಬಂದಿಯ ಭದ್ರತೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಹಲವು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಜುನಾಥ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಕೇಳಿಬಂದಿದೆ.
ಬೆಳಗಾವಿ, ಮೈಸೂರು, ಬೆಂಗಳೂರು ಹಾಗೂ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮ ಸೇರಿದಂತೆ ಒಟ್ಟು ಆರು ಸ್ಥಳಗಳಲ್ಲಿ ಈಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬೆಳಗಾವಿಯ ನಿವಾಸದ ಜೊತೆಗೆ ಅರಸೀಕೆರೆ ಗ್ರಾಮದಲ್ಲಿರುವ ಎರಡು ಮನೆಗಳು, ಮೈಸೂರಿನಲ್ಲಿರುವ ಸ್ನೇಹಿತೆಯ ಮನೆ, ಬೆಂಗಳೂರಿನ ಅಪಾರ್ಟ್‌ಮೆಂಟ್ ಮತ್ತು ಅಥಣಿ ತಾಲೂಕಿನ ಐನಾಪುರ ಗ್ರಾಮದ ಸ್ನೇಹಿತನ ನಿವಾಸಗಳ ಮೇಲೂ ಶೋಧ ಕಾರ್ಯ ನಡೆದಿದೆ.
ಬೇನಾಮಿ ಹೆಸರಲ್ಲಿ ಜಮೀನು, ಬಾರ್ ಹಾಗೂ ರೆಸ್ಟೋರೆಂಟ್‌ಗಳ ಮೂಲಕ ಅಕ್ರಮ ಆಸ್ತಿ ಸಂಪಾದಿಸಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಸದ್ಯ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಇರುವ ಡಾ.ಮಂಜುನಾಥ ಅವರನ್ನು ಈಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.