×
Ad

Belagavi | ಸಿಮೆಂಟ್ ಕಂಬ ಸಾಗಿಸುತ್ತಿದ್ದ ವಾಹನ ಪಲ್ಟಿ: ಮೂವರು ಮೃತ್ಯು

Update: 2026-06-24 19:21 IST

ಬೆಳಗಾವಿ : ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಸುಕಿನ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಿಮೆಂಟ್ ಕಂಬಗಳನ್ನು ಸಾಗಿಸುತ್ತಿದ್ದ ಗೂಡ್ಸ್ ಟೆಂಪೊ ಪಲ್ಟಿಯಾಗಿ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಕುರಸಟ್ ಗ್ರಾಮದ ನಿವಾಸಿಗಳಾದ ಆದಿಲ್ ಖಾನ್ (26), ಪವನ್ (26) ಹಾಗೂ ನಜೀರ್ ಖಾನ್ (25) ಎಂದು ಗುರುತಿಸಲಾಗಿದೆ. ಮೃತರು ಸಿಮೆಂಟ್ ಕಂಬ ಸಾಗಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರಾಗಿದ್ದರು ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ವಾಹನ ಚಾಲಕ ವಿಜಯಪುರ ಜಿಲ್ಲೆಯ ಚಡಚಣ ನಿವಾಸಿ ದುರ್ಗಪ್ಪ ಗಾಡಿವಡ್ಡರ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಚನ್ನಮ್ಮನ ಕಿತ್ತೂರು ಪಟ್ಟಣದ ರಾಣಿ ಚನ್ನಮ್ಮನ ಬೃಹತ್ ಪ್ರತಿಮೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಸೇತುವೆ ಮೇಲೆ ಈ ದುರ್ಘಟನೆ ಸಂಭವಿಸಿದೆ. ಸಿಮೆಂಟ್ ಕಂಬಗಳನ್ನು ತುಂಬಿಕೊಂಡು ವೇಗವಾಗಿ ಸಂಚರಿಸುತ್ತಿದ್ದ ಟೆಂಪೊ, ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಾಹನ ಪಲ್ಟಿಯಾಗಿ ಅದರಲ್ಲಿದ್ದ ಭಾರೀ ಸಿಮೆಂಟ್ ಕಂಬಗಳು ಕಾರ್ಮಿಕರ ಮೇಲೆ ಬಿದ್ದಿವೆ.

ಅತಿಯಾದ ಭಾರ ಹೊತ್ತಿದ್ದ ಕಾರಣ ಡಿಕ್ಕಿಯ ಹೊಡೆತಕ್ಕೆ ವಾಹನ ಸಮತೋಲನ ಕಳೆದುಕೊಂಡು ಉರುಳಿಬಿದ್ದಿದೆ ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಘಟನೆಯ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣಗಳ ಕುರಿತು ತನಿಖೆ ಮುಂದುವರಿದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಬಳಿಕ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News