Belagavi | ಕಬ್ಬಿಗೆ 5,500 ರೂ. ಬೆಂಬಲ ಬೆಲೆಗೆ ಆಗ್ರಹ: 9ನೇ ದಿನಕ್ಕೆ ಕಾಲಿಟ್ಟ ಗುರ್ಲಾಪುರ ರೈತರ ಹೋರಾಟ
ಬೆಳಗಾವಿ: ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಗುರ್ಲಾಪುರದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ 9ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ರೈತ ಮುಖಂಡರು ಗುರ್ಲಾಪುರದಿಂದ ಬೆಳಗಾವಿಯ ಹಿಂಡಲಗಾ ಜೈಲಿನವರೆಗೆ ‘ಜೈಲ್ ಚಲೋ’ ಹಾಗೂ ‘ಜೈಲ್ ಭರೋ’ ಚಳವಳಿಗೆ ಕರೆ ನೀಡಿದ್ದಾರೆ. ಹೋರಾಟದ ವೇದಿಕೆಯಲ್ಲಿ ಸಾವಿರಾರು ರೈತರು ಜಮಾಯಿಸಿದ್ದು, ವಿವಿಧ ಜಿಲ್ಲೆಗಳಿಂದಲೂ ರೈತರು ಆಗಮಿಸುತ್ತಿದ್ದಾರೆ.
ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂಡಿದ್ದರೂ ಬೇಡಿಕೆಗಳಿಗೆ ಸ್ಪಂದಿಸಿಲ್ಲ. ಸರ್ಕಾರ ರೈತರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಅವರ ಭಾವಚಿತ್ರಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಾಂಕೇತಿಕ ಶವಸಂಸ್ಕಾರ ಪೂಜೆಯನ್ನೂ ನೆರವೇರಿಸಿದರು.
‘ಜೈಲಿಗೆ ಹೋಗಲು ರೈತರು ಆರೋಪಿಗಳಲ್ಲ’ :
ಗುರ್ಲಾಪುರ ಹೋರಾಟದ ವೇದಿಕೆಯಲ್ಲಿ ಮಾತನಾಡಿದ ರೈತ ಮುಖಂಡ ಚೂನಪ್ಪ ಪೂಜಾರಿ, ಕರ್ನಾಟಕದ 31 ಜಿಲ್ಲೆಗಳಿಂದಲೂ ರೈತರು ಬೆಳಗಾವಿಗೆ ಆಗಮಿಸಲಿದ್ದಾರೆ. ರೈತರು ಜೈಲಿನಲ್ಲಿ ಇರಬೇಕಾದ ಆರೋಪಿಗಳಲ್ಲ. ರೈತರ ಬೇಡಿಕೆಗಳಿಗೆ ಸ್ಪಂದಿಸದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲಕರೇ ಆರೋಪಿಗಳು ಎಂದು ಕಿಡಿಕಾರಿದರು.
ಸರ್ಕಾರ ಯಾವುದೇ ಸೆಕ್ಷನ್ ಹಾಕಲಿ, ಲಾಠಿಚಾರ್ಜ್ ಮಾಡಲಿ ಅಥವಾ ಗುಂಡು ಹಾರಿಸಲಿ, ಜೈಲಿಗೆ ಹೋಗಲು ರೈತರು ಸಿದ್ಧರಾಗಿದ್ದಾರೆ ಎಂದು ಎಚ್ಚರಿಸಿದರು. ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಂಬಲ ಬೆಲೆ ಘೋಷಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಇಂದೇ ಹೋರಾಟ ಮುಕ್ತಾಯಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು. ಒಂದೇ ಗಂಟೆಯಲ್ಲಿ ಪ್ರತಿಭಟನೆ ಅಂತ್ಯಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
‘5,500’ ಕೈದಿ ಸಂಖ್ಯೆ ಅಂಗಿ ಧರಿಸಿ ವಿನೂತನ ಪ್ರತಿಭಟನೆ :
ಗುರ್ಲಾಪುರದಲ್ಲಿ ರೈತರು ತಮ್ಮ ಅಂಗಿಗಳ ಮೇಲೆ ‘ಕೈದಿ ಸಂಖ್ಯೆ 5500’ ಎಂದು ಬರೆದುಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.