ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರ ಪ್ರಾಮಾಣಿಕತೆಗೆ ಸಾಕ್ಷಿಯಾಗುವ ಘಟನೆಯೊಂದು ನಡೆದಿದೆ. ಬಿಸಿಎಂ ಹಾಸ್ಟೆಲ್ ಸಮೀಪ ವಿಬಿ ಜಿ ರಾಮ್ ಜಿ ಯೋಜನೆಯಡಿ ಕಾಮಗಾರಿ ನಡೆಯುತ್ತಿದ್ದ ವೇಳೆ ಮಣ್ಣು ಅಗೆಯುತ್ತಿದ್ದ ಕಾರ್ಮಿಕರಿಗೆ ಮಣ್ಣಿನಲ್ಲಿ ಹೂತುಹೋಗಿದ್ದ ಹಳೆಯ ಮಣ್ಣಿನ ಕುಡಿಕೆಯೊಂದು ಕಂಡುಬಂದಿದೆ. ಕುಡಿಕೆಯನ್ನು ತೆರೆದು ನೋಡಿದಾಗ ಅದರೊಳಗೆ ಹದಿನಾಲ್ಕು ಚಿನ್ನದ ನಾಣ್ಯಗಳು ಪತ್ತೆಯಾಗಿವೆ.

ಈ ನಾಣ್ಯಗಳ ಪ್ರಸ್ತುತ ಮಾರುಕಟ್ಟೆಯಲ್ಲಿ ಅಂದಾಜು ಮೌಲ್ಯ ಸುಮಾರು ಎಂಟು ಲಕ್ಷದ ಇಪ್ಪತ್ತು ಸಾವಿರದಿಂದ ಎಂಟು ಲಕ್ಷದ ಇಪ್ಪತ್ತೇಳು ಸಾವಿರ ರೂಪಾಯಿಗಳು ಎಂದು ಹೇಳಲಾಗಿದೆ. ಸವದತ್ತಿಯ ಆಭರಣ ಅಂಗಡಿಯೊಂದರಲ್ಲಿ ಪ್ರಾಥಮಿಕ ಮೌಲ್ಯಮಾಪನ ನಡೆಸಲಾಗಿದ್ದು, ನಾಣ್ಯಗಳ ನೈಜ ಕಾಲಘಟ್ಟ, ಐತಿಹಾಸಿಕ ಮಹತ್ವ ಮತ್ತು ಅಧಿಕೃತ ಮೌಲ್ಯದ ಕುರಿತು ಪುರಾತತ್ವ ಇಲಾಖೆಯ ಪರಿಶೀಲನೆಯ ಬಳಿಕವೇ ಸ್ಪಷ್ಟವಾಗಲಿದೆ.

ಚಿನ್ನದ ನಾಣ್ಯಗಳು ತಮ್ಮ ವಶಕ್ಕೆ ಸಿಕ್ಕಿದ್ದರೂ, ಕಾರ್ಮಿಕರು ಯಾವುದೇ ಆಸೆಗೆ  ಒಳಗಾಗದೆ ತಕ್ಷಣ ತಾಲೂಕು ಆಡಳಿತಕ್ಕೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪಿಡಿಒ ಮಲ್ಲಪ್ಪ ಹಾರೂಗೊಪ್ಪ ಅವರು, ಉಪ ತಹಶೀಲ್ದಾರ್, ಮುರಗೋಡ ಪೊಲೀಸರ ಸಮ್ಮುಖದಲ್ಲಿ ಕಾರ್ಮಿಕರು ನಾಣ್ಯಗಳನ್ನು ಇಂಚಲ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ  ಒಪ್ಪಿಸಿದ್ದಾರೆ. ಬಳಿಕ ಪಿಡಿಒ ಅವರು ನಾಣ್ಯಗಳನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿದ್ದಾರೆ. ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರು ಪತ್ತೆಯಾದ ಎಲ್ಲ ಹದಿನಾಲ್ಕು ಚಿನ್ನದ ನಾಣ್ಯಗಳನ್ನು ನಿಯಮಾನುಸಾರ ಸರಕಾರಿ ಖಜಾನೆಗೆ ಸಲ್ಲಿಸಿದ್ದಾರೆ. ಘಟನೆ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಲಾಗಿದ್ದು, ಅವರ ಸೂಚನೆ ಮೇರೆಗೆ ನಾಣ್ಯಗಳನ್ನು ಖಜಾನೆ ಇಲಾಖೆ ವಶಕ್ಕೆ ನೀಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಪತ್ತೆಯಾದ ಚಿನ್ನದ ನಾಣ್ಯಗಳ ಒಂದು ಬದಿಯಲ್ಲಿ ಆನೆಯ ಚಿತ್ರ ಸ್ಪಷ್ಟವಾಗಿ ಕೆತ್ತಲ್ಪಟ್ಟಿದ್ದು, ಮತ್ತೊಂದು ಬದಿಯಲ್ಲಿ ಹಳೆ ಕಾಲದ ವಿನ್ಯಾಸವಿದೆ. ಇತಿಹಾಸದ ಪ್ರಕಾರ ತಲಕಾಡಿನ ಗಂಗರ ರಾಜಲಾಂಛನವು ಮದಗಜ ಅಥವಾ ಆನೆಯಾಗಿತ್ತು. ಗಜಶಕ್ತಿಯಲ್ಲಿ ಅಪಾರ ನಂಬಿಕೆ ಹೊಂದಿದ್ದ ಗಂಗರು ನಾಣ್ಯಗಳಲ್ಲೂ ವಿವಿಧ ಭಂಗಿಯ ಗಜಗಳನ್ನೇ ಟಂಕಿಸಿಸುತ್ತಿದ್ದರು. ಹೀಗಾಗಿ ಈ ನಾಣ್ಯಗಳು ಕ್ರಿ.ಶ. ಹತ್ತನೇ ಶತಮಾನದಿಂದ ಹದಿನೈದನೇ ಶತಮಾನದ ಅವಧಿಗೆ ಸೇರಿದ ಪ್ರಾಚೀನ ನಾಣ್ಯಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ನಿಖರವಾದ ಕಾಲಮಾನ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ತಜ್ಞರ ಪರಿಶೀಲನೆಯ ಬಳಿಕವೇ ಖಚಿತಪಡಿಸಬೇಕಾಗಿದೆ.

ಅಪಾರ ಮೌಲ್ಯದ ಐತಿಹಾಸಿಕ ಸಂಪತ್ತು ದೊರೆತಿದ್ದರೂ ಅದನ್ನು ತಮ್ಮದಾಗಿಸಿಕೊಳ್ಳದೆ ಸರ್ಕಾರಕ್ಕೆ ಒಪ್ಪಿಸುವ ಮೂಲಕ ಕೂಲಿ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಕಾರ್ಯಕ್ಕೆ ಸವದತ್ತಿ ತಾಲೂಕು ಆಡಳಿತ ಹಾಗೂ ಗ್ರಾಮಸ್ಥರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor