Belagavi | ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ್ದ ಯುವಕ ಕಾಲುವೆಯಲ್ಲಿ ಮುಳುಗಿ ಸಾವು
ಬೆಳಗಾವಿ: ಸ್ನೇಹಿತರೊಂದಿಗೆ ಕಾಲುವೆಗೆ ಸ್ನಾನಕ್ಕೆ ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಆಜೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮೃತ ಯುವಕನನ್ನು ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಹತ್ತಗಾಂವ ಗ್ರಾಮದ ನಿವಾಸಿ ಕುಶಿಚೇಂದ್ರ ರಾಮಮನೋಹರ ಬಡಾಹ (23) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಅರಸಿ ಆಜೂರ ಗ್ರಾಮಕ್ಕೆ ಬಂದಿದ್ದ ಯುವಕ, ಸ್ನೇಹಿತರೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಕಾಲುವೆಗೆ ಸ್ನಾನಕ್ಕೆ ತೆರಳಿದ್ದನು.
ಸ್ನಾನದ ವೇಳೆ ನೀರಿಗಿಳಿದ ಕುಶಿಚೇಂದ್ರನಿಗೆ ಈಜು ಬಾರದ ಕಾರಣ ಆಕಸ್ಮಿಕವಾಗಿ ಕಾಲುವೆಯ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾನೆ. ಇದನ್ನು ಗಮನಿಸಿದ ಸ್ನೇಹಿತರು ತಕ್ಷಣವೇ ರಕ್ಷಿಸಲು ಯತ್ನಿಸಿದರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾಲುವೆಯಿಂದ ಯುವಕನ ಮೃತದೇಹವನ್ನು ಹೊರತೆಗೆದರು.
ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.