Belagavi | ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ ಆರೋಪ: ಆರು ತಿಂಗಳ ಬಳಿಕ ಬಯಲಾದ ಪ್ರಕರಣ

Update: 2026-08-09 19:19 IST

ಸಾಂದರ್ಭಿಕ ಚಿತ್ರ

ಬೆಳಗಾವಿ : ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಸುಮಾರು ಆರು ತಿಂಗಳ ಹಿಂದೆ ನಡೆದಿದ್ದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತರನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪತ್ನಿ ಬಂಗಾರಿ ಗಾವಡೆ ಹಾಗೂ ಆಕೆಯ ಪ್ರಿಯಕರ ರಾಮಾ ರಾಣಗೆರನ್ನು ಆರೋಪಿಗಳೆಂದು ಗುರುತಿಸಲಾಗಿದೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ರಾಘು ಗಾವಡೆ ಅವರನ್ನು ಹೊಲಕ್ಕೆ ಕರೆಯಿಸಿಕೊಂಡು, ಬಳಿಕ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೊಲೆ ಮಾಡಿದ ನಂತರ ಪತಿ ಕುರಿ ಕಾಯಲು ಬೇರೆ ಜಿಲ್ಲೆಗೆ ತೆರಳಿದ್ದಾರೆ ಎಂದು ಪತ್ನಿ ಕುಟುಂಬಸ್ಥರನ್ನು ನಂಬಿಸಿದ್ದಳು ಎನ್ನಲಾಗಿದೆ.

ಆದರೆ ರಾಘು ಅವರ ಸಹೋದರ ಲಗಮಣ್ಣ ಅವರಿಗೆ ಈ ಬಗ್ಗೆ ಅನುಮಾನ ಮೂಡಿದ್ದು, ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ಹೊರಬಂದಿದೆ ಎನ್ನಲಾಗಿದೆ. ಬಳಿಕ ಅವರು ಖಡಕಲಾಟ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು, ಬಂಗಾರಿ ಗಾವಡೆ ಹಾಗೂ ರಾಮಾ ರಾಣಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮ ಸಂಬಂಧವೇ ಕೊಲೆಗೆ ಕಾರಣವಾಗಿರಬಹುದು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಬೆಳಗಾವಿ ಎಸ್‌ಪಿ ಕೆ. ರಾಮರಾಜನ್ ತಿಳಿಸಿದ್ದಾರೆ.

ಘಟನೆಯ ಹಿನ್ನೆಲೆಯಲ್ಲಿ ಖಡಕಲಾಟ ಪೊಲೀಸ್ ಠಾಣೆಗೆ ಭೇಟಿ ನೀಡಿದ ಎಸ್‌ಪಿ ಕೆ. ರಾಮರಾಜನ್ ಅವರು ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News