Belagavi | ಕೌಟುಂಬಿಕ ಕಲಹ: ಇಬ್ಬರು ಸಹೋದರರ ಹತ್ಯೆ
ಮೃತ ಸಹೋದರರು
ಬೆಳಗಾವಿ: ಜಿಲ್ಲೆಯ ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದಲ್ಲಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದ ಕ್ಷುಲ್ಲಕ ಜಗಳ ಇಬ್ಬರು ಸಹೋದರರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತರನ್ನು ಲಗಮಪ್ಪ ರಾಮಣ್ಣವರ (32) ಹಾಗೂ ಬಸಪ್ಪ ರಾಮಣ್ಣವರ (38) ಎಂದು ಗುರುತಿಸಲಾಗಿದೆ.
ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರರು ಹಾಗೂ ಸಂಬಂಧಿಕರ ನಡುವೆ ಆರಂಭವಾದ ವಾಗ್ವಾದ ಕ್ಷಣಾರ್ಧದಲ್ಲೇ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಸುಮಾರು ಆರು ಮಂದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ನುಗ್ಗಾನಟ್ಟಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಮುರಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆ ಹಾಗೂ ಹತ್ಯೆಗೆ ಕಾರಣವಾದ ನಿಖರ ಹಿನ್ನೆಲೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸರಗಿ, ಮುರಗೋಡ ಸಿಪಿಐ ಐ.ಎಂ. ಮಠಪತಿ ಹಾಗೂ ಪಿಎಸ್‌ಐ ಎಲ್.ಬಿ. ಮಾಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಯ ಪ್ರಗತಿ ಕುರಿತು ಮಾಹಿತಿ ಪಡೆದಿದ್ದಾರೆ.
ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.