ಸಚಿವ ಸಂಪುಟ ವಿಸ್ತರಣೆ : ಬೆಳಗಾವಿಯ ಲಕ್ಷ್ಮಣ ಸವದಿಗೆ ಒಲಿದ ಸಚಿವ ಸ್ಥಾನ
ಲಕ್ಷ್ಮಣ ಸವದಿ
ಬೆಳಗಾವಿ : ಅಥಣಿ ಕ್ಷೇತ್ರದ ಹಿರಿಯ ರಾಜಕಾರಣಿ ಲಕ್ಷ್ಮಣ ಸವದಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
1960ರ ಫೆಬ್ರವರಿ 16ರಂದು ಜನಿಸಿದ ಲಕ್ಷ್ಮಣ ಸವದಿ ಅವರು 2004, 2008 ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿ ಶಾಸಕರಾದರು. 2023ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿದರು.
ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ 2019ರಿಂದ 2021ರವರೆಗೆ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಹಾಗೂ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಯಡಿಯೂರಪ್ಪ ಮತ್ತು ಸದಾನಂದ ಗೌಡ ಅವರ ಸಂಪುಟಗಳಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ. ವಿಧಾನ ಪರಿಷತ್‌ನ ಉಪನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ದೊರೆಯದೆ, ಮಹೇಶ್ ಕುಮಟಳ್ಳಿ ಅವರಿಗೆ ಅವಕಾಶ ನೀಡಲಾಗಿತ್ತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.