ಚೋರ್ಲಾ ಘಾಟ್‌ನಲ್ಲಿ ಕಂಟೇನರ್ ದರೋಡೆ ಪ್ರಕರಣ; ಬೆಳಗಾವಿ ಜಿಲ್ಲಾ ಎಸ್‌ಪಿ ಹೇಳಿದ್ದೇನು?
ಬೆಳಗಾವಿ: ಕರ್ನಾಟಕ–ಗೋವಾ ಗಡಿಭಾಗದ ಚೋರ್ಲಾ ಘಾಟ್‌ನಲ್ಲಿ ₹400 ಕೋಟಿ ಮೊತ್ತದ ರಾಬರಿ ನಡೆದಿದೆ ಎಂಬ ಮಾಹಿತಿ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಜನವರಿ 6ರಂದು ಪತ್ರದ ಮೂಲಕ ಲಭಿಸಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ತಿಳಿಸಿದ್ದಾರೆ. ಆ ಪತ್ರದಲ್ಲಿ ಅಕ್ಟೋಬರ್ 16ರಂದು ಹಣ ಅಪಹರಣ ಹಾಗೂ ಅಕ್ಟೋಬರ್ 22ರಂದು ನಾಸಿಕ್‌ನಲ್ಲಿ ಸಂದೀಪ್ ಪಾಟೀಲ್ ಅವರ ಅಪಹರಣ ನಡೆದಿರುವುದಾಗಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದ ಸಂಬಂಧ ಖಾನಾಪುರ ಉಪನಿರೀಕ್ಷಕರ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಕೂಡ ರಚಿಸಲಾಗಿದೆ. ಮಹಾರಾಷ್ಟ್ರ ಪೊಲೀಸರು ಪ್ರಕರಣದ ಮುಖ್ಯ ತನಿಖೆ ನಡೆಸುತ್ತಿದ್ದು, ಕರ್ನಾಟಕ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಚೋರ್ಲಾ ಘಾಟ್ ಮೂರು ರಾಜ್ಯಗಳ ಗಡಿ ಪ್ರದೇಶವಾಗಿರುವುದರಿಂದ ಭದ್ರತೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.