ಭೀಮಣ್ಣ ಖಂಡ್ರೆ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ
ಬೆಳಗಾವಿ: ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಸಂಪುಟ ಸಹೋದ್ಯೋಗಿಗಳಾದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರ ತಂದೆಯಾಗಿರುವ ಡಾ. ಭೀಮಣ್ಣ ಖಂಡ್ರೆ ಅವರು ಸಮಾಜದ ಹಿರಿಯ ಮುಖಂಡರಾಗಿದ್ದು, ಹಲವು ಸ್ಥಾನಗಳಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರು ನಮಗೆಲ್ಲ ಮಾರ್ಗದರ್ಶಕರಾಗಿದ್ದರು. ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ತಿಳಿಸಿದ್ದಾರೆ.
ಡಾ. ಭೀಮಣ್ಣ ಖಂಡ್ರೆ ಅವರು ಹೈದ್ರಾಬಾದ್ ಕರ್ನಾಟಕ ವಿಮೋಚನೆ, ಕರ್ನಾಟಕ ಏಕೀಕರಣ ಹಾಗೂ ದೇಶದ ಸ್ವಾತಂತ್ರ್ಯ ಸೇರಿದಂತೆ ಹಲವು ಮಹತ್ವದ ಚಳುವಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಶರಣ ಶ್ರೇಷ್ಠರಾಗಿ ಅಖಿಲ ಭಾರತ ವೀರಶೈವ–ಲಿಂಗಾಯತ ಮಹಾಸಭೆಗೆ ಮಹತ್ವದ ಕೊಡುಗೆ ನೀಡಿದ ಅವರು, ಶಾಸಕರಾಗಿ ಹಾಗೂ ಸಚಿವರಾಗಿ ನಾಡಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಸ್ಮರಿಸಿದರು.
ಈ ದುಃಖದ ಸಂದರ್ಭದಲ್ಲಿ ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಖಂಡ್ರೆ ಕುಟುಂಬದ ಸದಸ್ಯರಿಗೆ ಈ ಅಗಲಿಕೆಯ ನೋವು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಾರ್ಥಿಸಿದ್ದಾರೆ.