ಫಾರಂ-7 ಸಲ್ಲಿಸಿದ ಮಾತ್ರಕ್ಕೆ ಮತದಾರರ ಹೆಸರು ಅಳಿಸುವಂತಿಲ್ಲ : ನ್ಯಾಯಾಲಯ
ಸಾಂದರ್ಭಿಕ ಚಿತ್ರ photo: magnific
ಬೆಳಗಾವಿ : ಮತದಾರರ ಹೆಸರು ಮತಪಟ್ಟಿಯಿಂದ ತೆಗೆದುಹಾಕುವಂತೆ ಫಾರಂ-7 ಸಲ್ಲಿಸಿದ ಮಾತ್ರಕ್ಕೆ ಚುನಾವಣಾಧಿಕಾರಿಗಳು ಸ್ವಯಂಚಾಲಿತವಾಗಿ ಕ್ರಮ ಕೈಗೊಳ್ಳುವುದಿಲ್ಲ. ಅರ್ಜಿಯ ಕುರಿತು ಸ್ವತಂತ್ರವಾಗಿ ವಿಚಾರಣೆ ಹಾಗೂ ಪರಿಶೀಲನೆ ನಡೆಸಿದ ಬಳಿಕವೇ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನಿರ್ದಿಷ್ಟ ಸಮುದಾಯಕ್ಕೆ ಸೇರಿದ 198 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ನಕಲಿ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಡಾ. ರವಿ ಪಾಟೀಲ ಅವರಿಗೆ ಷರತ್ತುಬದ್ಧ ಮಧ್ಯಂತರ ಬಂಧನಪೂರ್ವ ಜಾಮೀನು ಮಂಜೂರು ಮಾಡಲಾಗಿದೆ.
ಗೋಕಾಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗಂಗಾಧರ ಕೆ.ಎನ್. ಈ ಆದೇಶ ಹೊರಡಿಸಿದ್ದಾರೆ.
ಪ್ರಕರಣವು ದಾಖಲೆ ಆಧಾರಿತವಾಗಿದ್ದು, ಸಂಬಂಧಿತ ಅರ್ಜಿಗಳು ಈಗಾಗಲೇ ಚುನಾವಣಾ ವಿಭಾಗದ ಬಿಎಲ್‌ಒ ಅವರ ಬಳಿಯಿವೆ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ. ಅಲ್ಲದೆ, ಸಂಬಂಧಿತ ದಾಖಲೆಗಳ ಕುರಿತು ಆಕ್ಷೇಪಗಳನ್ನು ಸಲ್ಲಿಸಬೇಕಾದವರು ಚುನಾವಣಾಧಿಕಾರಿಗಳಾಗಿದ್ದು, ಅವರು ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಸೇರಿದ ವ್ಯಕ್ತಿಗಳಲ್ಲ ಎಂಬ ಅಭಿಪ್ರಾಯವನ್ನೂ ನ್ಯಾಯಾಲಯ ದಾಖಲಿಸಿದೆ.
ಬಂಧನದಿಂದ ಅರ್ಜಿದಾರರ ಹೆಸರು ಹಾಗೂ ಸಾಮಾಜಿಕ ಗೌರವಕ್ಕೆ ಹಾನಿಯಾಗುವ ಸಾಧ್ಯತೆಯನ್ನೂ ಪರಿಗಣಿಸಿದ ನ್ಯಾಯಾಲಯ, 50 ಸಾವಿರ ರೂ. ಬಾಂಡ್ ಹಾಗೂ ಅಷ್ಟೇ ಮೊತ್ತದ ಒಬ್ಬ ಜಾಮೀನುದಾರರೊಂದಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿದೆ. ಅರ್ಜಿದಾರರು ಸಾಕ್ಷಿಗಳಿಗೆ ಯಾವುದೇ ರೀತಿಯಲ್ಲಿ ಬೆದರಿಕೆ ಹಾಕಬಾರದು, ಇತರ ಅಪರಾಧ ಚಟುವಟಿಕೆಗಳಲ್ಲಿ ತೊಡಗಬಾರದು ಹಾಗೂ ತನಿಖಾಧಿಕಾರಿ ನೋಟಿಸ್ ನೀಡಿ ವಿಚಾರಣೆಗೆ ಕರೆದಾಗ ಕಡ್ಡಾಯವಾಗಿ ಹಾಜರಾಗಬೇಕು ಎಂದು ಸೂಚಿಸಲಾಗಿದೆ.