×
Ad

ಬೆಳಗಾವಿಯಲ್ಲಿ ಧಾರಾಕಾರ ಮಳೆ-ಬಿರುಗಾಳಿ: ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು

Update: 2026-05-05 20:01 IST

ಬೆಳಗಾವಿ : ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಎಂಟು ಮರಗಳು ಮತ್ತು ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿದ ಘಟನೆ ಸಂಭವಿಸಿದೆ. 

ಜಿಲ್ಲಾಸ್ಪತ್ರೆ ರಸ್ತೆ, ಶಾಹೂ ನಗರದ ಮೊದಲನೇ ಕ್ರಾಸ್, ಜಿನಾ ಬಕುಲ್ ರಸ್ತೆ, ಹಳೆ ಆರ್‌ಟಿಒ ವೃತ್ತ, ಸದಾಶಿವನಗರ, ಕಾಕತಿ ಹಾಗೂ ಹಿಂಡಲಗಾ ಪ್ರದೇಶಗಳ ಮುಖ್ಯರಸ್ತೆಗಳಲ್ಲೇ ಮರಗಳು ಬುಡಸಮೇತ ಕಿತ್ತು ಬಿದ್ದಿವೆ. ಜಿನಾ ಬಕುಲ್ ಎದುರು ಭಾಗದಲ್ಲಿ ಬೃಹತ್ ಮರದ ಜೊತೆಗೆ ಅದಕ್ಕೆ ಅಂಟಿಕೊಂಡಿದ್ದ ವಿದ್ಯುತ್ ಕಂಬವೂ ಧರೆಗುರುಳಿದರೂ, ವಿದ್ಯುತ್ ಪ್ರವಹಿಸದ ಕಾರಣ ಅಪಾಯ ತಪ್ಪಿದೆ.

ಶಾಹೂನಗರದಲ್ಲಿ ಮರದ ಪಕ್ಕದಲ್ಲೇ ಆಟವಾಡುತ್ತಿದ್ದ ಮಕ್ಕಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಜಿಲ್ಲಾಸ್ಪತ್ರೆ ರಸ್ತೆಯಲ್ಲಿ ಜನರು ಮುನ್ನೆಚ್ಚರಿಕೆಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳಿದರು. ರಭಸದ ಮಳೆಯ ಪರಿಣಾಮವಾಗಿ ಕೆಲಕಾಲ ಜನ ಮತ್ತು ವಾಹನ ಸಂಚಾರ ಕಡಿಮೆಯಾಗಿತ್ತು.

ಅಗ್ನಿಶಾಮಕ ದಳ ಹಾಗೂ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿದರು. ಸುಮಾರು ಎರಡು ಗಂಟೆಗಳ ಕಾಲ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಇನ್ನೊಂದೆಡೆ, ಮಾರುಕಟ್ಟೆಯ ಕಿರಿದಾದ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ಎರಡು ಗಂಟೆಗಳ ಬಳಿಕ ಮಳೆ ನಿಂತಿದ್ದು, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News