×
Ad

ಎಂಇಎಸ್ ನಿಷೇಧಿಸುವ ಕುರಿತು ಚಿಂತನೆ: ಸಚಿವ ಸತೀಶ್ ಜಾರಕಿಹೊಳಿ

Update: 2025-11-01 17:51 IST

ಬೆಳಗಾವಿ : ಕರ್ನಾಟಕ ರಾಜ್ಯದಲ್ಲೇ ಇದ್ದು, ಕನ್ನಡ ನಾಡಿನ ವಿರುದ್ಧವೇ ಘೋಷಣೆ ಕೂಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ‘ಮಹಾರಾಷ್ಟ್ರ ಏಕೀಕರಣ ಸಮಿತಿ’ (ಎಂಇಎಸ್)ಯನ್ನು ನಿಷೇಧ ಮಾಡುವ ಬಗ್ಗೆ ಗಂಭೀರ ಸ್ವರೂಪದ ಚರ್ಚೆ ನಡೆಸಲಾಗುವುದು ಎಂದು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಂಇಎಸ್ ನಾಯಕರಿಗೆ ಕರಾಳ ದಿನಾಚರಣೆಗೆ ಅವಕಾಶ ನೀಡಿಲ್ಲ. ಆದರೆ, ಅವರು ಪ್ರತಿವರ್ಷ ಸಮಾವೇಶದ ಹೆಸರಿನಲ್ಲಿ ಅನುಮತಿ ಪಡೆಯುತ್ತಿದ್ದಾರೆ. ಕನ್ನಡ ವಿರೋಧಿ ಚಟುವಟಿಕೆ ನಡೆಸದಂತೆ ನಿಗಾ ವಹಿಸಲಾಗುವುದು ಎಂದರು.

ಎಂಇಎಸ್ ರೌಡಿ ಶೀಟರ್ ಜತೆಗೆ ಸಿಪಿಐ ಜಾಕೀರ್ ಪಾಷಾ ಕರಾಳ ದಿನಾಚರಣೆ ವೇಳೆಯೇ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದ ಅವರು, ರಾಜ್ಯೋತ್ಸವ ಕವಾಯತು ವೇಳೆ ತಾಂತ್ರಿಕ ದೋಷದಿಂದ ಜೀಪ್ ಕೆಟ್ಟು ಹೋಗಿದ್ದು, ಇದು ಸಹಜ ಎಂದರು.

ಹೈಕಮಾಂಡ್ ತೀರ್ಮಾನ: ಸಂಪುಟ ಪುನರ್ ರಚನೆ ರಚನೆ ಆಗಬೇಕೆಂಬುದು ಚರ್ಚೆಯಲ್ಲಿದೆ. ಆದರೆ, ಈ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷದಲ್ಲಿ ಸಚಿವರಾಗುವ ಅರ್ಹತೆ ಬಹಳಷ್ಟು ಜನರಿಗಿದೆ. ಆದರೆ, ಕೇವಲ 34 ಮಂದಿಗೆ ಮಾತ್ರ ಮಂತ್ರಿಯಾಗಲು ಅವಕಾಶವಿದೆ. ಯಾರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು, ಹೊಸದಾಗಿ ಯಾರಿಗೆ ಸಚಿವ ಸ್ಥಾನ ನೀಡಬೇಕೆಂದು ಹೈಕಮಾಂಡ್‍ಗೆ ಬಿಟ್ಟದ್ದು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News