ಗೃಹಲಕ್ಷ್ಮಿ ಯೋಜನೆ ಬಾಕಿ ಹಣ ಬಿಡುಗಡೆಗೆ ಕ್ರಮ: ಸಿದ್ದರಾಮಯ್ಯ
ಬೆಳಗಾವಿ, (ಸುವರ್ಣ ವಿಧಾನಸೌಧ), ಡಿ.12: ಬಾಕಿ ಉಳಿದಿರುವ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಲೇ ಬಿಡುಗಡೆ ಮಾಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ‘ಫೆಬ್ರವರಿ, ಮಾರ್ಚ್ ನಲ್ಲಿ ಗೃಹಲಕ್ಷ್ಮೀ ಹಣ ಸಂದಾಯ ಆಗಿಲ್ಲ ಎಂದು ಹೇಳಿದ್ದಾರೆ. ಗೃಹಲಕ್ಷ್ಮಿ ಹಣ ನೀಡಿದಿದ್ದರೆ ಅದನ್ನು ಕೂಡಲೇ ಕೊಡಿಸುವ ಕೆಲಸವನ್ನು ಸರಕಾರ ಮಾಡಲಿದೆ. ಆಗಸ್ಟ್ ತಿಂಗಳವರೆಗೆ ಹಣ ಪಾವತಿ ಮಾಡಲಾಗಿದೆ. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನಕ್ಕೆ ಕೊಟ್ಟ ಉತ್ತರ ಸರಿಯಾಗಿಲ್ಲವೆಂಬುದು ಹಕ್ಕುಚ್ಯುತಿ ಆಗುವುದಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಹಣ ಸಂದಾಯ ಮಾಡುತ್ತೇವೆ ಎಂದು ನುಡಿದರು.
ಈ ಹಿಂದೆ ‘ವಿರೋಧ ಪಕ್ಷ ಇರುವುದೇ ಸುಳ್ಳು ಹೇಳುವುದಕ್ಕೆ’ ಎಂದು ಅಶೋಕ್ ಹೇಳಿದ್ದರು. ಸುಳ್ಳು ಹೇಳಲು ವಿಪಕ್ಷ ಇರುವುದಲ್ಲ. ನೀವು ಆಡುವ ಮಾತು ಸುಳ್ಳು ಎಂದು ಆಯಿತು. ನಾವು ಸುಳ್ಳು ಹೇಳುವುದಿಲ್ಲ. ಏನಾದರೂ ಹೆಚ್ಚು ಕಮ್ಮಿ ಹೇಳಿದರೆ ಸರಿಪಡಿಸುತ್ತೇನೆ ಎಂದು ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್.ಅಶೋಕ್ ಗೆ ತಿರುಗೇಟು ನೀಡಿದರು.
ಔತನಕೂಟ ರಾಜಕೀಯ ಮುಂದೂಡಿ :
ವಿಧಾನ ಮಂಡಲ ಅಧಿವೇಶನ ಮುಕ್ತಾಯಗೊಳ್ಳುವವರೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ಔತನಕೂಟದ ರಾಜಕೀಯವನ್ನು ಮುಂದೂಡಿಕೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಔತಣಕೂಟ ರಾಜಕೀಯದ ಹಿನ್ನೆಲೆಯಲ್ಲಿ ಸಚಿವರು ಸಿದ್ದತೆ ಮಾಡಿಕೊಳ್ಳದೆ ಸದನಕ್ಕೆ ಬಂದು ತಪ್ಪು ಉತ್ತರ ನೀಡುತ್ತಿದ್ದು, ಆ ಮೂಲಕ ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ರಾತ್ರಿಯೆಲ್ಲಾ ಡಿನ್ನರ್ ಪಾಲಿಟಿಕ್ಸ್ ನಡೆಯುತ್ತದೆ. ಬೆಳಗ್ಗೆ ಮಾಹಿತಿ ಪಡೆದುಕೊಳ್ಳದೆ ಸದನಕ್ಕೆ ಬರುತ್ತಿದ್ದು, ಆಡಳಿತ ಪಕ್ಷದಲ್ಲಿ ಯಾರೂ ಹೇಳುವವರು ಕೇಳುವವರು ಇಲ್ಲದಂತೆ ಆಗಿದೆ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ‘ಗೃಹಲಕ್ಷ್ಮೀ ಯೋಜನೆ ಹಣ ಸಂದಾಯ ಆಗಿಲ್ಲ ಎಂಬುದು ವಿಚಾರ ಅಲ್ಲ. ಆದರೆ, ಸದನಕ್ಕೆ ಸುಳ್ಳು ಹೇಳಲಾಗಿದೆ. ಇದು ಸದನ ದಿಕ್ಕು ತಪ್ಪಿಸಿದ್ದಲ್ವಾ? ಅಥವಾ ಹಕ್ಕುಚ್ಯುತಿಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ, ಬಿಜೆಪಿಯವರು ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡುತ್ತಿದ್ದು, ಇದೀಗ ಯೋಜನೆಯ ಹಣ ಬಂದಿಲ್ಲ ಎಂದು ಮಾತನಾಡುವುದು ಇವರೇ’ ಎಂದು ತಿರುಗೇಟು ನೀಡಿದರು. ಅನಂತರ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ‘ನಾನು ಎರಡು ಬಾರಿ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ನಾನು ಎಂದು ಸುಳ್ಳು ಹೇಳಿಲ್ಲ, ಬದಲಿಗೆ ವಾಸ್ತವ ಸಂಗತಿಗಳನ್ನು ತಿಳಿಸಿದ್ದೇನೆ ಎಂದರು.
‘ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಸಂಬಂಧ ಸಚಿವರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸದಸ್ಯರು ಆರೋಪ ಮಾಡಿದ್ದಾರೆ. ಈ ಕುರಿತು ತಾನು ಸಚಿವರೊಂದಿಗೆ ಚರ್ಚಿಸಿ, ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಲಾಗುವುದು’
-ಯು.ಟಿ.ಖಾದರ್ ಸ್ಪೀಕರ್