×
Ad

ಧಾರವಾಡ ಮಹಾನಗರ ಪಾಲಿಕೆ ಸ್ಥಾಪಿಸಲು ಕ್ರಮ : ಸಚಿವ ಬೈರತಿ ಸುರೇಶ್

Update: 2025-12-12 15:41 IST

ಬೈರತಿ ಸುರೇಶ್

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ. 12: ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸುವ ಪ್ರಸ್ತಾವನೆಯನ್ನು ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಿದೆ. ರಾಜ್ಯಪಾಲರ ಬಳಿ ಏಳು ತಿಂಗಳಿಂದ ಕಡತ ವಿಲೇಗೆ ಬಾಕಿ ಇದ್ದು, ಕೂಡಲೇ ಒಪ್ಪಿಗೆ ನೀಡಲು ನಿಯೋಗವನ್ನು ಕೊಂಡೊಯ್ಯಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಅಬ್ಬಯ್ಯ ಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಹೊಸದಾಗಿ ಧಾರವಾಡ ಮಹಾನಗರ ಪಾಲಿಕೆಯನ್ನು ರಚಿಸಲು ಮತ್ತು ಇನ್ನುಳಿದ ಪ್ರದೇಶವನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆ ಎಂಬುದಾಗಿ ಮುಂದುವರೆಸಲು 2025ರ ಜನವರಿ 21ರಂದು ಪ್ರಾಥಮಿಕ ಅಧಿಸೂಚನೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಲಾಗಿರುತ್ತದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಆಗಿರುವುದಿಲ್ಲ ಎಂದರು.

ಆಕ್ಷೇಪಣೆ/ಸಲಹೆಗಳ ಕುರಿತ ವರದಿಯನ್ನು ಪೌರಾಡಳಿತ ನಿರ್ದೇಶಕರಿಂದ ಧಾರವಾಡ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ವರದಿ ಸಿದ್ದಪಡಿಸಿ ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಲಾಗಿದೆ. ಆದರೆ ಇದೂವರೆಗೂ ರಾಜ್ಯಪಾಲರಿಂದ ಅನುಮೋದನೆ ಬಂದಿರುವುದಿಲ್ಲ. ರಾಜ್ಯಪಾಲರ ಕಚೇರಿಯೊಂದಿಗೆ ಈ ಕುರಿತು ಪತ್ರ ವ್ಯವಹಾರ ಮಾಡಲಾಗಿದೆ. ರಾಜ್ಯಪಾಲರ ಅನುಮೋದನೆಗೆ ಪಕ್ಷಾತೀತವಾಗಿ ಎಲ್ಲ ಶಾಸಕರ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಅನುಮೋದನೆ ನೀಡುವಂತೆ ಮನವಿ ಮಾಡಲಾಗುವುದು ಎಂದು ಅವರು ಉತ್ತರಿಸಿದರು.

ಆರಂಭಕ್ಕೆ ಮಾತನಾಡಿದ ಸದಸ್ಯ ಪ್ರಸಾದ್ ಅಬ್ಬಯ್ಯ, ಬೆಂಗಳೂರು ಭಾಗದಲ್ಲಿ ಪಾಲಿಕೆಗಳನ್ನು ಶೀಘ್ರದಲ್ಲೇ ಮಾಡಲಾಗುತ್ತದೆ, ಆದರೆ, ಪಾಲಿಕೆ ಘೋಷಣೆಯಾಗಿದ್ದರೂ ಏಕೆ ವಿಳಂಬ ಆಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜನಸಂಖ್ಯೆ ಹೆಚ್ಚಾಗಿದ್ದು, ಎರಡು ಮಹಾನಗರ ಪಾಲಿಕೆ ಮಾಡಬೇಕು. ಇದರಿಂದ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಅನುಕೂಲವಾಗಲಿದೆ. ಆ ನಿಟ್ಟಿನಲ್ಲಿ ಬಿಜೆಪಿ ಸದಸ್ಯರು ರಾಜ್ಯಪಾಲರಿಗೆ ತ್ವರಿತ ಕಡತ ವಿಲೇವಾರಿಗೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News