ಖಡ್ಗ ಸಮೇತ ಮುರಿದು ಬಿದ್ದ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಯ ಬಲಗೈ
ಬೆಳಗಾವಿ : ಇಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಐತಿಹಾಸಿಕ ರಾಣಿ ಚನ್ನಮ್ಮ ವೃತ್ತದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಅವರ ಬೃಹತ್ ಪ್ರತಿಮೆಯ ಬಲಗೈ ಖಡ್ಗ ಸಮೇತ ಸೋಮವಾರ ತುಂಡಾಗಿ ಬಿದ್ದಿದೆ.
ಅಕ್ಟೋಬರ್ 23, 24 ಹಾಗೂ 25ರಂದು ರಾಜ್ಯಮಟ್ಟದ ಕಿತ್ತೂರು ಉತ್ಸವ ನಡೆಯಲಿದ್ದು, ಉತ್ಸವದ ಸಿದ್ಧತೆಗಳ ನಡುವೆಯೇ ಪ್ರತಿಮೆ ಭಗ್ನಗೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಂಚಿನ ಪ್ರತಿಮೆ ಏಕಾಏಕಿ ಭಗ್ನಗೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಮಳೆನೀರಿನಿಂದ ತುಕ್ಕು ಹಿಡಿದು ಪ್ರತಿಮೆಯ ಬಲಗೈ ಮುರಿದು ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್, ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಸೋಮವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಪ್ರತಿಮೆಯ ಬಲಗೈ ಖಡ್ಗ ಸಮೇತ ತುಂಡರಿಸಿ ಬಿದ್ದಿದ್ದು, ಘಟನೆಯನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಸ್ಥಳದಲ್ಲಿ ಜಮಾಯಿಸಿದರು.
1997ರಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಬಳಿಕ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಸಂದರ್ಭದಲ್ಲಿ ಪ್ರತಿಮೆಯನ್ನು ಹಿಂದಕ್ಕೆ ಸ್ಥಳಾಂತರಿಸಲಾಗಿತ್ತು. ಪ್ರತಿಮೆಯ ಬಣ್ಣ ಮಾಸಿದ್ದ ಹಿನ್ನೆಲೆಯಲ್ಲಿ ಕಳೆದ ವರ್ಷ ಮರುಬಣ್ಣ ಬಳಿಯಲಾಗಿತ್ತು.
ನೆಲದಿಂದ ಪ್ರತಿಮೆಯ ಒಟ್ಟು ಎತ್ತರ 50 ಅಡಿಗಳಷ್ಟಿದೆ. ಇದರಲ್ಲಿ ಕುದುರೆಯ ಮೇಲೆ ಕುಳಿತಿರುವ ರಾಣಿ ಚನ್ನಮ್ಮ ಅವರ ಪ್ರತಿಮೆ 10 ಅಡಿ ಎತ್ತರವಿದ್ದು, ಅದರ ಕೆಳಗಿನ ಪೀಠ 18 ಅಡಿ ಎತ್ತರವಿದೆ. ಪ್ರತಿಮೆಯ ಒಟ್ಟು ತೂಕ ಒಂದು ಟನ್ ಎಂದು ತಿಳಿದುಬಂದಿದೆ.