ಬೆಳಗಾವಿ : ಕಬ್ಬಿಗೆ ಪ್ರತಿ ಟನ್‌ಗೆ 5,500 ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬುಧವಾರವೂ ಪ್ರತಿಭಟನೆ ಮುಂದುವರಿಸಿದರು. ಜಿಲ್ಲೆಯ ಮೂರು ಕಡೆ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಹೋರಾಟ ನಡೆಸಿದ ರೈತರು, ವಿವಿಧೆಡೆ ರಸ್ತೆ ಸಂಚಾರವನ್ನೂ ಸ್ಥಗಿತಗೊಳಿಸಿದರು.

ಮಂಗಳವಾರ ರಾತ್ರಿ 500ಕ್ಕೂ ಹೆಚ್ಚು ರೈತರು ಹಿರೇಬಾಗೇವಾಡಿ ಟೋಲ್‌ನಾಕಾದಲ್ಲೇ ರಾಷ್ಟ್ರೀಯ ಹೆದ್ದಾರಿ ಮೇಲೆ ಮಲಗಿ ರಾತ್ರಿ ಕಳೆದರು. ಅಲ್ಲಿಯೇ ಊಟವನ್ನೂ ಮಾಡಿಕೊಂಡು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು.

ಬುಧವಾರ ಬೆಳಿಗ್ಗೆ ಮತ್ತೆ ಸ್ಥಳದಲ್ಲಿ ಜಮಾಯಿಸಿದ ರೈತರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದನ-ಕರುಗಳನ್ನು ತಂದು ಹೆದ್ದಾರಿ ಮೇಲೆ ಕಟ್ಟಿದರು. ಟ್ರ್ಯಾಕ್ಟರ್‌ಗಳನ್ನು ಅಡ್ಡಲಾಗಿ ನಿಲ್ಲಿಸುವ ಮೂಲಕ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರು.

ಪ್ರತಿಭಟನೆಯ ನಡುವೆಯೂ ಆಂಬುಲೆನ್ಸ್‌ಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕೆ ರೈತರು ಒಂದು ಬದಿಯಲ್ಲಿ ರಸ್ತೆಯನ್ನು ಮುಕ್ತವಾಗಿಟ್ಟರು. ಉಳಿದ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ಇದೇ ವೇಳೆ ನಿಪ್ಪಾಣಿ ತಾಲ್ಲೂಕಿನ ಕೂಗನೊಳ್ಳಿ ಹಾಗೂ ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್‌ಗಳಲ್ಲಿಯೂ ಅಪಾರ ಸಂಖ್ಯೆಯ ರೈತರು ಜಮಾಯಿಸಿ ಧರಣಿ ಮುಂದುವರಿಸಿದರು.

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಜಿಲ್ಲೆಯಲ್ಲಿ ತೀವ್ರಗೊಂಡಿದ್ದು, ರೈತರ ಬೇಡಿಕೆಗಳಿಗೆ ಸರಕಾರಗಳು ಸ್ಪಂದಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor