ಬೆಳಗಾವಿ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.

ಕೇಂದ್ರ ಸರಕಾರದ ಗಮನ ಸೆಳೆಯಲು ಬೆಳಗಾವಿಯಿಂದ ಹುಬ್ಬಳ್ಳಿಯತ್ತ ಆರಂಭಿಸಿರುವ ರೈತರ ಪಾದಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕಬ್ಬಿನ ಬೆಲೆ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತರು ಪಟ್ಟು ಹಿಡಿದಿದ್ದಾರೆ.

ಹುಕ್ಕೇರಿ ತಾಲೂಕಿನ ಹತ್ತರಗಿಯಿಂದ ಆರಂಭವಾದ ಪಾದಯಾತ್ರೆ ಬೆಳಗಾವಿಯ ಸುವರ್ಣ ವಿಧಾನಸೌಧದ ಬಳಿ ವಾಸ್ತವ್ಯ ಹೂಡಿ, ಅಲ್ಲಿಂದ ಹುಬ್ಬಳ್ಳಿಯತ್ತ ಸಾಗುತ್ತಿದೆ. ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪಪೂಜಾರಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಗೆ ವಿವಿಧ ರೈತ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ತಾಲೂಕಿನ ಕೊಳಿಕೋಪ್ಪದ ಬಳಿ ಶಶಿಕಾಂತ ಗುರೂಜಿ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡು ರೈತರ ಹೋರಾಟಕ್ಕೆ ಸಾಥ್ ನೀಡಿದರು.

ಕಬ್ಬು ಬೆಳೆಗಾರರು ಸುಡುಬಿಸಿಲಿನಲ್ಲಿಯೇ ಉರುಳು ಸೇವೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರೆ, ಪಾದಯಾತ್ರೆಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿಯೂ ಹಣಕಾಸಿನ ನೆರವು ನೀಡಿ ಬೆಂಬಲ ಸೂಚಿಸಿರುವುದು ಗಮನ ಸೆಳೆಯಿತು. ನೂರಾರು ರೈತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಪಾದಯಾತ್ರೆ ನಡೆಸುತ್ತಿದ್ದು, ಕಬ್ಬಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿಬೆಲೆ ನಿಗದಿಪಡಿಸಬೇಕು ಹಾಗೂ ರೈತರ ಆದಾಯಕ್ಕೆ ನ್ಯಾಯ ದೊರೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ.

► ಕೇಂದ್ರ ಸಚಿವರ ಅಣಕು ಶವಯಾತ್ರೆ: ಪಾದಯಾತ್ರೆಯ ಮೂರನೇ ದಿನ ರೈತರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

► ಗುರ್ಲಾಪುರದಲ್ಲೂ ಮತ್ತೆ ಹೋರಾಟ: ಹುಬ್ಬಳ್ಳಿಯತ್ತ ಪಾದಯಾತ್ರೆ ಮುಂದುವರಿಯುತ್ತಿರುವ ನಡುವೆಯೇ ಗುರ್ಲಾಪುರದಲ್ಲಿ ಮತ್ತೊಮ್ಮೆ ರೈತ ಚಳವಳಿ ಆರಂಭಿಸಲು ಸಿದ್ಧತೆ ನಡೆದಿದೆ. ಶನಿವಾರದಿಂದ ಗುರ್ಲಾಪುರದ ಹೋರಾಟದ ವೇದಿಕೆಯಲ್ಲಿ ಪ್ರತಿಭಟನೆ ಮುಂದುವರಿಸುವುದಾಗಿ ಶಶಿಕಾಂತ ಗುರೂಜಿ ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor