ಸಂಡೂರು / ಬಳ್ಳಾರಿ : ಜೀವನದಲ್ಲಿ ಸೋಲುಗಳನ್ನು ಕಂಡಾಗ ಎದೆಗುಂದಬಾರದು. ಸೋಲುಗಳೇ ಜೀವನದ ಪಾಠವಾಗಿದ್ದು, ಸೋಲೇ ಗೆಲುವಿನ ಮೆಟ್ಟಿಲಾಗಿದೆ. ಸೋಲನ್ನು ಅನುಭವವಾಗಿ ಸ್ವೀಕರಿಸಿ, ಮುಂದಿನ ಗೆಲುವಿಗಾಗಿ ಶ್ರಮಿಸಬೇಕು ಎಂದು ಬಿ.ಕೆ.ಜಿ. ಗ್ಲೋಬಲ್ ಶಾಲೆಯ ಅಧ್ಯಕ್ಷ ಬಿ. ರುದ್ರಗೌಡ ಹೇಳಿದರು.

ಸಂಡೂರಿನಲ್ಲಿ ಬಿ.ಕೆ.ಜಿ. ಸಂಸ್ಥೆಗಳ ಸಮೂಹದ ಸಹಯೋಗದಲ್ಲಿ ಸಂಡೂರು ರೋಟರಿ ಕ್ಲಬ್ ಮತ್ತು ಬೀದರ್ ನ್ಯೂ ಸೆಂಚುರಿ ರೋಟರಿ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಅಖಿಲ ಭಾರತ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಮಾತನಾಡಿದರು.

ಕ್ರೀಡೆಗೆ ದೇಶದಲ್ಲಿ ಇನ್ನಷ್ಟು ಪ್ರಾಮುಖ್ಯತೆ ದೊರೆಯಬೇಕು. ಚೆಸ್‌ನಂತಹ ಬೌದ್ಧಿಕ ಕ್ರೀಡೆಗಳು ಏಕಾಗ್ರತೆ, ತಾರ್ಕಿಕ ಚಿಂತನೆ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತವೆ. ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹಿಸಬೇಕು. ಸೋಲಿನಿಂದ ನಿರಾಶರಾಗದೆ ಅನುಭವ ಪಡೆದು, ಭವಿಷ್ಯದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಗುರಿ ಹೊಂದಬೇಕು ಎಂದರು.

ಪಂದ್ಯಾವಳಿಯನ್ನು ಬಳ್ಳಾರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್, ಹಾಗೂ ಬಿಕೆಜಿ ಸಂಸ್ಥೆಯ ಸಂಸ್ಥಾಪಕರಾದ ನಾಗನಗೌಡ ಅವರು ಉದ್ಘಾಟಿಸಿದ್ದರು. ಮುಖ್ಯ ಅತಿಥಿ ತ್ರಿವಿಕ್ರಮ್ ಜೋಶಿ ಮಾತನಾಡಿ, ಚೆಸ್ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ, ತಾಳ್ಮೆ, ಶಿಸ್ತು ಮತ್ತು ತಾರ್ಕಿಕ ಸಾಮರ್ಥ್ಯ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕರ್ನಾಟಕ, ಮಹಾರಾಷ್ಟ್ರ, ದಿಲ್ಲಿ, ಉತ್ತರಾಖಂಡ, ಛತ್ತೀಸ್‌ಗಢ, ಮಧ್ಯಪ್ರದೇಶ, ಒಡಿಶಾ ಸೇರಿದಂತೆ 10ಕ್ಕೂ ಹೆಚ್ಚು ರಾಜ್ಯಗಳಿಂದ 320ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

ಪಂದ್ಯಾವಳಿಯ ಸಮಗ್ರ ವಿಭಾಗದಲ್ಲಿ ಗೋವಾದ ಸೌರಭ್ ರಿಷಿ ಪ್ರಥಮ, ಮಹಾರಾಷ್ಟ್ರದ ಶ್ರೀನಾಥ್ ದ್ವಿತೀಯ ಹಾಗೂ ಪ್ರಜ್ವಲ್ ತೃತೀಯ ಸ್ಥಾನ ಪಡೆದರು. ವಿಶೇಷವಾಗಿ 11 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಸಂಡೂರಿನ ಪೊಲೀಸ್ ಇನ್ಸ್‌ಪೆಕ್ಟರ್ ಮಹಮ್ಮದ್ ರಫೀಕ್ ಅವರ ಪುತ್ರಿ ಮೆಹವೀಶ್ ಫಾತಿಮಾ ನಾಲ್ಕನೇ ಸ್ಥಾನ ಪಡೆದರು.

ಈ ಸಂದರ್ಭದಲ್ಲಿ ತ್ರಿವಿಕ್ರಮ್ ಜೋಶಿ, ನಿತಿನ್ ಕರ್ಪೂರ್ ಹಾಗೂ ತೀರ್ಪುಗಾರರಾದ ಪ್ರಮೋದ್ ಮೊರೆ, ಜೆ. ಸುರೇಶ್, ಪ್ರಾಣೇಶ್ ಯಾದವ್ ಮತ್ತು ಅನಿಲ್ ಎಂ.ಜೆ. ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಪ್ರಾಚಾರ್ಯ ಮೋಹನ್ ರಾವ್, ಸಿಬ್ಬಂದಿ ವರ್ಗ, ರೋಟರಿ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು, ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor