ಬಳ್ಳಾರಿ/ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರದಿಂದ ರಾಮಸಾಗರ ಕ್ರಾಸ್‌ವರೆಗಿನ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಬೆಳೆದುನಿಂತಿರುವ ದೊಡ್ಡ ಗಿಡಗಳು ಹಾಗೂ ಮುಳ್ಳುಕಂಟಿಗಳಿಂದ ಬಸ್ ಮತ್ತು ಇತರ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ವಾಹನ ಸವಾರರು ಜೀವಭಯದಲ್ಲೇ ಸಂಚರಿಸುವಂತಾಗಿದೆ.

ಮುದ್ದಾಪುರ–ರಾಮಸಾಗರ ಹಾಗೂ ಕಂಪ್ಲಿ ಮಾರ್ಗವಾಗಿ ನಿತ್ಯ ನೂರಾರು ಸರ್ಕಾರಿ ಬಸ್‌ಗಳು, ಆಟೊಗಳು ಮತ್ತು ಶಾಲಾ-ಕಾಲೇಜು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಕಳೆದ ನಾಲ್ಕೈದು ತಿಂಗಳಿಂದ ರಸ್ತೆಗೆ ಚಾಚಿಕೊಂಡಿರುವ ಮರಗಿಡಗಳಿಂದ ಎದುರಿನಿಂದ ಬರುವ ವಾಹನಗಳು ಸರಿಯಾಗಿ ಕಾಣಿಸುತ್ತಿಲ್ಲ. ರಾತ್ರಿ ವೇಳೆಯಲ್ಲಿ ದಾರಿ ಕಾಣದೆ ಸವಾರರು ಪರದಾಡುವಂತಾಗಿದೆ. ರಸ್ತೆ ಬದಿಯ ಗಿಡಗಂಟಿಗಳಿಂದಾಗಿ ಬಸ್‌ಗಳು ಬೈಪಾಸ್ ಮೂಲಕ ಸುತ್ತಿ ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳು, ವೃದ್ಧರು ಮತ್ತು ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಯ ಇಕ್ಕೆಲಗಳಲ್ಲಿರುವ ಮುಳ್ಳುಕಂಟಿಗಳನ್ನು ತೆರವುಗೊಳಿಸುವಂತೆ ರೈತರಾದ ಮಮದೇವಪ್ಪ, ಎಚ್.ಕುಮಾರಸ್ವಾಮಿ, ವಿ.ಅನಿಲ, ಅವಲಕ್ಕಿ ರಾಘವೇಂದ್ರ, ಶಿವು ಮತ್ತು ಜಡೆ ಮಹದೇವಪ್ಪ ಅವರು ಒತ್ತಾಯಿಸಿದ್ದಾರೆ. ಇವರ ಮನವಿಯ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿ ವಿರೇಶ ಹಾಗೂ ಸಿಬ್ಬಂದಿ ನಾಗರಾಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರವೇ ಮುಳ್ಳುಕಂಟಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor