ಬಳ್ಳಾರಿ / ಕಂಪ್ಲಿ: ದೇಶವನ್ನು ಎಚ್‌ಐವಿ ಏಡ್ಸ್ ಮುಕ್ತ ಭಾರತವನ್ನಾಗಿ ಮಾಡುವ ಮಹದೋದ್ದೇಶದಿಂದ ಸಾರ್ವಜನಿಕರಲ್ಲಿ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಎನ್.ಕರಿಬಸವ ಹೇಳಿದರು.

ಜಿಲ್ಲಾ ಎಚ್‌ಐವಿ ಏಡ್ಸ್ ನಿಯಂತ್ರಣ ಘಟಕ ಬಳ್ಳಾರಿ ಹಾಗೂ ಕುರುಗೋಡು ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ಹತ್ತಿರದ ಪುನೀತ್ ರಾಜಕುಮಾರ್ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಎಚ್‌ಐವಿ/ಎಸ್‌ಟಿಐ ಪರೀಕ್ಷೆ, ಆಪ್ತಸಮಾಲೋಚನೆ, ಚಿಕಿತ್ಸೆ ಸೇವಾ ಸೌಲಭ್ಯಗಳ ಮಾಹಿತಿ ಹಾಗೂ ಮೊಬೈಲ್ ಸ್ಟೇಷನ್ ಫೋರಂ ಏಡ್ಸ್ ಸುರಕ್ಷಾ ಅಭಿಯಾನದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ಆಧುನಿಕ ದಿನಗಳಲ್ಲಿ ನಾನಾ ಕಾರಣಗಳಿಂದಾಗಿ ಜನರ ಆರೋಗ್ಯ ಕ್ಷೀಣಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇಂದಿನ ವೈದ್ಯಕೀಯ ಯುಗದಲ್ಲಿ ಪ್ರತಿಯೊಂದು ರೋಗಕ್ಕೂ ಸೂಕ್ತ ಔಷಧಿ ಹಾಗೂ ಚಿಕಿತ್ಸೆಗಳು ಲಭ್ಯವಿವೆ. ಆದ್ದರಿಂದ ಸಾರ್ವಜನಿಕರು ಯಾವುದೇ ಕಾಯಿಲೆಗಳನ್ನು ನಿರ್ಲಕ್ಷಿಸದೆ, ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ  ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣದ ಹೊಸ ಬಸ್ ನಿಲ್ದಾಣ, ಸಂತೆ ಮಾರುಕಟ್ಟೆ ಸೇರಿದಂತೆ ಪ್ರಮುಖ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ವಾಹನದ ಮೂಲಕ ಸಾರ್ವಜನಿಕರಿಗೆ ಏಡ್ಸ್ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಗ್ರೆಂಟ್ ಎನ್‌ಜಿಒ ಸಂಸ್ಥೆಯ ಆನಂದ್, ರೇಖಾ, ಪ್ರಮುಖರಾದ ಈಶಪ್ಪ, ಇಸ್ಮಾಯಿಲ್, ತಿಪ್ಪೇಸ್ವಾಮಿ, ಗೌಸ್, ವಿರುಪಾಕ್ಷಿ, ಚಾಂದಬಾಷಾ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor