×
Ad

ಜಗತ್ತಿಗೆ ಅಂಬೇಡ್ಕರ್, ಜಗಜೀವನ್‌ರಾಮ್ ಕೊಡುಗೆಗಳು ಅಪಾರ : ರಾಜೇಶ್‌ಸಿಂಗ್

Update: 2026-06-10 19:41 IST

ಬಳ್ಳಾರಿ/ಕಂಪ್ಲಿ: ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಮ್ ಅವರ ಕೊಡುಗೆಗಳು ಜಗತ್ತಿಗೆ ಅಪಾರವಾಗಿದ್ದು, ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರಾಜೇಶ್‌ಸಿಂಗ್ ಹೇಳಿದರು.

ಪಟ್ಟಣದ ಸಣಾಪುರ ರಸ್ತೆಯ ಅಂಬೇಡ್ಕರ್ ಕಾಲೋನಿ ಸಮೀಪ ನಿರ್ಮಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಮ್ ಅವರ ನೂತನ ಪುತ್ಥಳಿಗಳನ್ನು ಬುಧವಾರ ಅದ್ಧೂರಿಯಾಗಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇಂದಿನ ದಿನಮಾನದಲ್ಲಿ ನಾಗರಿಕರು ನೆಮ್ಮದಿಯ ಜೀವನ ನಡೆಸಲು ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಪ್ರಮುಖ ಆಧಾರವಾಗಿದೆ. ಜೊತೆಗೆ ಬಾಬು ಜಗಜೀವನ್‌ರಾಮ್ ಅವರೂ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಯುವಕರು ಈ ಮಹಾನ್ ನಾಯಕರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ದಲಿತ ಸಮಾಜದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಚಿಂತನೆಗಳನ್ನು ಪರಿಚಯಿಸುವ ಪುಸ್ತಕಗಳನ್ನು ಓದಲು ಪ್ರೋತ್ಸಾಹಿಸಬೇಕು. ಇದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ರುದ್ರಮುನಿ ಮಾತನಾಡಿ, ಸ್ವತಂತ್ರ ಹಾಗೂ ಸಮಾನತೆಯ ಜೀವನಕ್ಕೆ ಅಂಬೇಡ್ಕರ್ ಅವರು ದಾರಿ ತೋರಿದ್ದಾರೆ. ಅವರ ತತ್ವ, ವಿಚಾರಗಳನ್ನು ಅನುಸರಿಸಿಕೊಂಡು ಸಮಾಜದ ಅಭಿವೃದ್ಧಿ ಹಾಗೂ ಜನಪರ ಸೇವೆಗೆ ಶ್ರಮಿಸಲಾಗುವುದು ಎಂದರು.

ಭಾವಚಿತ್ರಗಳ ಭವ್ಯ ಮೆರವಣಿಗೆ :

ನೂತನ ಪುತ್ಥಳಿಗಳ ಅನಾವರಣದ ಬಳಿಕ ಅಂಬೇಡ್ಕರ್ ಹಾಗೂ ಜಗಜೀವನ್‌ರಾಮ್ ಅವರ ಭಾವಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಸಣಾಪುರ ರಸ್ತೆಯಿಂದ ಆರಂಭವಾದ ಮೆರವಣಿಗೆ ಸಂತೆ ಮಾರುಕಟ್ಟೆ, ನಡುವಲ ಮಸೀದಿ, ಡಾ. ರಾಜಕುಮಾರ್ ರಸ್ತೆ, ಮಾರೆಮ್ಮ ಗುಡಿ, ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ ಹಾಗೂ ಪುನೀತ್ ಸರ್ಕಲ್ ಮೂಲಕ ಸಂಚರಿಸಿ ಅಂಬೇಡ್ಕರ್ ಕಾಲೋನಿಯಲ್ಲಿ ಸಮಾಪ್ತಿಯಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಮುಖಂಡ ಮೌಲಾ ಹುಸೇನ್ ಸೇರಿದಂತೆ ಅಂಬೇಡ್ಕರ್ ಸಂಘದ ಸದಸ್ಯರು ಹಾಗೂ ಮಾದಿಗ ಸಮಾಜದ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News