×
Ad

Ballari | ವಿಶ್ವ ಪರಿಸರ ದಿನಾಚರಣೆ

Update: 2026-06-10 17:36 IST

ಸಂಡೂರು/ಬಳ್ಳಾರಿ: ವಿಶ್ವ ಪರಿಸರ ದಿನಾಚರಣೆ–2026ರ ಅಂಗವಾಗಿ ಎಂಎಸ್‌ಪಿಎಲ್ ಪೆಲ್ಲೆಟ್ ಪ್ಲಾಂಟ್ 2.0 (ಸೋಮಲಾಪುರ), ನರಸಿಂಹ ಕಬ್ಬಿಣದ ಅದಿರು ಗಣಿ (ಧರ್ಮಾಪುರ) ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಸಂಡೂರು ಇವರ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಐಟಿಐ ಸಂಸ್ಥೆಯ ಜೆಟಿಒ ಮಳಪ್ಪಯ್ಯ ಮಾತನಾಡಿ, ಬಲ್ಡೋಟ ಸಂಸ್ಥೆಯ ಪರಿಸರ ಕಾಳಜಿ ಮತ್ತು ಸಾಮಾಜಿಕ ಸೇವಾ ಕಾರ್ಯಗಳನ್ನು ವಿವರಿಸಿದರು. ಸಂಸ್ಥೆಯು ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದು, ಕೆರೆಗಳ ಹೂಳು ತೆಗೆಯುವ ಮೂಲಕ ರೈತರಿಗೆ ನೆರವಾಗಿದೆ ಎಂದು ತಿಳಿಸಿದರು. ಜೊತೆಗೆ 3ಆರ್ (Reduce, Reuse, Recycle) ತತ್ವಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಪುರಸಭೆಯ ಪರಿಸರ ಸಂರಕ್ಷಣಾ ಅಧಿಕಾರಿ ಅನ್ನಪೂರ್ಣ ಮಾತನಾಡಿ, ವಿಶ್ವ ಪರಿಸರ ದಿನಾಚರಣೆಯ ಹಿನ್ನೆಲೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಗಳ ಅಗತ್ಯತೆಯನ್ನು ವಿವರಿಸಿದರು. ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ವಿನಯ್ ಕುಮಾರ್ ಗೌಡ ಮಾತನಾಡಿ, ಪರಿಸರ ಹಾನಿಗೆ ಮಾನವನ ಅತಿಯಾದ ಆಸೆಯೇ ಪ್ರಮುಖ ಕಾರಣವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಉಪ ಅರಣ್ಯ ವಲಯಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, “ಇಂದಿನ ವಿದ್ಯಾರ್ಥಿಗಳೇ ನಾಳಿನ ಪರಿಸರ ಸಂರಕ್ಷಕರು. ಒಂದು ದಿನ ಗಿಡ ನೆಟ್ಟರೆ ಸಾಕಾಗುವುದಿಲ್ಲ, ವರ್ಷಪೂರ್ತಿ ಅದನ್ನು ಪೋಷಿಸುವ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕು” ಎಂದು ತಿಳಿಸಿದರು. ರಾಸಾಯನಿಕ ಗೊಬ್ಬರ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಸಂಕಲ್ಪ ಕೈಗೊಳ್ಳುವಂತೆ ಸಲಹೆ ನೀಡಿದರು.

ಬಲ್ಡೋಟ ಸಂಸ್ಥೆಯ ಸಮಾಜ ಕಲ್ಯಾಣ ಅಧಿಕಾರಿ ಎಚ್.ಕೆ. ರಮೇಶ್ ಮಾತನಾಡಿ, “ಪರಿಸರ ಉಳಿಸೋಣ, ಬೆಳೆಸೋಣ ಎಂಬ ಧ್ಯೇಯದೊಂದಿಗೆ ಸಂಸ್ಥೆ ಪರಿಸರ ಸಂರಕ್ಷಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಉತ್ತಮ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಶ್ರಮಿಸುತ್ತಿದೆ” ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಐಟಿಐ ಕಾಲೇಜು ಆವರಣದಲ್ಲಿ ನೂರಾರು ಸಸಿಗಳನ್ನು ನೆಡಲಾಯಿತು. ಸಸಿಗಳ ರಕ್ಷಣೆಗಾಗಿ ಕಬ್ಬಿಣದ ತಂತಿಯ ಕವಚ ಅಳವಡಿಸಿ ಅವುಗಳನ್ನು ಪೋಷಿಸುವ ಸಂಕಲ್ಪ ಕೈಗೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಐಟಿಐ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಗಣ್ಯರು ಭಾಗವಹಿಸಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News