×
Ad

ಝಮೀರ್ ಅಹ್ಮದ್‌ಗೆ ಡಿಸಿಎಂ, ಜೆ.ಎನ್.ಗಣೇಶಗೆ ಸಚಿವ ಸ್ಥಾನ ನೀಡಲು ಅಂಜುಮನ್ ಖಿದ್ಮತ್-ಏ-ಇಸ್ಲಾಂ ಆಗ್ರಹ

Update: 2026-06-10 18:31 IST

ಬಳ್ಳಾರಿ/ಕಂಪ್ಲಿ: ಮಾಜಿ ಸಚಿವ ಝಮೀರ್ ಅಹ್ಮದ್‌ ಅವರಿಗೆ ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನ ಹಾಗೂ ಕಂಪ್ಲಿ ಕ್ಷೇತ್ರದ ಶಾಸಕ ಜೆ. ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಂಪ್ಲಿ ಅಂಜುಮನ್ ಖಿದ್ಮತ್-ಏ-ಇಸ್ಲಾಂ ಅಧ್ಯಕ್ಷ ಅಬ್ದುಲ್ ಕರೀಂ ಲಡ್ಡು ಒತ್ತಾಯಿಸಿದರು.

ಪಟ್ಟಣದ ಅತಿಥಿ ಗೃಹದಲ್ಲಿ ಅಂಜುಮನ್ ಖಿದ್ಮತ್-ಏ-ಇಸ್ಲಾಂ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಚಿವರಾಗಿ ಜಮೀರ್ ಅಹ್ಮದ್ ಖಾನ್ ಅವರು ಜನಪರ ಕೆಲಸಗಳನ್ನು ಮಾಡಿದ್ದಾರೆ. ಸದಾ ಜನರ ಸೇವೆಯಲ್ಲಿ ತೊಡಗಿರುವ ಅವರಿಗೆ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಸ್ಥಾನ ನೀಡುವ ಮೂಲಕ ಮತ್ತಷ್ಟು ಜನಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಅದೇ ರೀತಿ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿರುವ ಜೆ.ಎನ್. ಗಣೇಶ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು. ಈ ಬೇಡಿಕೆಗಳನ್ನು ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದರ ಜೊತೆಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಯು. ಜಹೀರುದ್ದೀನ್ ಮಾತನಾಡಿ, ಜೆ.ಎನ್.ಗಣೇಶ ಅವರು ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನಪರ ಕಾರ್ಯಗಳ ಮೂಲಕ ಉತ್ತಮ ಹೆಸರು ಗಳಿಸಿದ್ದಾರೆ. ಜಮೀರ್ ಅಹ್ಮದ್ ಖಾನ್ ಅವರ ಸೇವೆಯೂ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಹೀಗಾಗಿ ಇಬ್ಬರಿಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೈಯದ್ ರಾಜಾಸಾಬ್, ಖಜಾಂಚಿ ಮೌಲಾ ಹುಸೇನ್, ಸದಸ್ಯರಾದ ಕೆ.ಮೆಹಬೂಬ್, ಮಸ್ತಾನ್ ವಲಿ ಕಡಪಾ, ಅತ್ತಾವುಲ್ಲಾ ರೆಹಮಾನ್, ಸೈಯದ್ ಗೇಸುದರಾಜ್ ಖಾದ್ರಿ, ಎನ್.ಯುನೂಸ್, ಮುಖಂಡರಾದ ಸೈಯದ್ ಉಸ್ಮಾನ್, ವಾಹಿದಸಾಬ್, ಮೆಹಮೂದ್ ಸಾಬ್, ವರ್ದಿ ಜಾಫರ್, ಅಬ್ದುಲ್ ವಾಹೀದ್ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News