×
Ad

Ballari | ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ

ಎಸ್‌ಎಸ್‌ಎ ವೇತನ, ಗ್ಯಾಸ್ ಸಿಲಿಂಡರ್ ಪೂರೈಕೆ, ಮೊಟ್ಟೆ ದರ ಅನುದಾನ ಹೆಚ್ಚಳಕ್ಕೆ ಒತ್ತಾಯ

Update: 2026-07-11 18:28 IST

ಸಂಡೂರು/ಬಳ್ಳಾರಿ : ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯಗುರುಗಳು ಹಾಗೂ ಶಿಕ್ಷಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಹಾಗೂ ಪಿ.ಎಂ. ಪೋಷಣ್ ಅಭಿಯಾನದ ಸಹಾಯಕ ನಿರ್ದೇಶಕ ಶ್ರೀಧರ್ ಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಸಲ್ಲಿಸಲಾದ ಮನವಿಯಲ್ಲಿ, ಎಸ್‌ಎಸ್‌ಎ (SSA) ಶಿಕ್ಷಕರ ವೇತನಕ್ಕೆ ಸಂಬಂಧಿಸಿದ ಅನುದಾನವನ್ನು ತ್ವರಿತವಾಗಿ ಬಿಡುಗಡೆಗೊಳಿಸಿ, ನಿಗದಿತ ಸಮಯಕ್ಕೆ ವೇತನ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಸರ್ಕಾರಿ ಶಾಲೆಗಳ ಮಧ್ಯಾಹ್ನ ಉಪಾಹಾರ ಯೋಜನೆಗೆ ಅಗತ್ಯವಾಗಿರುವ ಅಡುಗೆ ಅನಿಲ (ಗ್ಯಾಸ್) ಸಿಲಿಂಡರ್‌ಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು. ಮೊಟ್ಟೆ ಖರೀದಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ನೀಡಲಾಗುತ್ತಿರುವ ಅನುದಾನವನ್ನು ಪರಿಷ್ಕರಿಸಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಮನವಿಗೆ ಸ್ಪಂದಿಸಿದ ಅಧಿಕಾರಿಗಳು, ನೋಂದಾಯಿತ ಮೊಬೈಲ್ ಸಂಖ್ಯೆಗಳ ಮೂಲಕ ಗ್ಯಾಸ್ ಬುಕ್ಕಿಂಗ್ ಮಾಡಿರುವ ಶಾಲೆಗಳಿಗೆ ತಕ್ಷಣವೇ ಸಿಲಿಂಡರ್ ಪೂರೈಸುವಂತೆ ಸಂಬಂಧಿತ ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಇನ್ನೂ ನೋಂದಣಿ ಮಾಡಿಸದ ಶಾಲೆಗಳು ಕೂಡಲೇ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ಸೌಲಭ್ಯ ಪಡೆಯುವಂತೆ ಸಲಹೆ ನೀಡಿದರು.

ಎಸ್‌ಎಸ್‌ಎ ಶಿಕ್ಷಕರ ಅನುದಾನ ಬಿಡುಗಡೆ ಹಾಗೂ ಮೊಟ್ಟೆ ದರ ಹೆಚ್ಚಳಕ್ಕೆ ಅನುಗುಣವಾಗಿ ಅನುದಾನ ಪರಿಷ್ಕರಣೆ ಕುರಿತು ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷೆ ಪ್ರೇಮ ಕೆ., ಕಾರ್ಯದರ್ಶಿ ರವಿ ಕೆ., ಜಿಲ್ಲಾ ಉಪಾಧ್ಯಕ್ಷ ಪರುಶುರಾಮಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News