Ballari | ಬಸ್-ಗಣಿ ಲಾರಿ ಅಪಘಾತ : ಟ್ರಾಫಿಕ್ ಅವ್ಯವಸ್ಥೆಗೆ ಸಾರ್ವಜನಿಕರ ಆಕ್ರೋಶ
ಸಂಡೂರು/ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರ ಸಮೀಪ ಶುಕ್ರವಾರ ಸಂಭವಿಸಿದ ಬಸ್ ಹಾಗೂ ಗಣಿ ಲಾರಿಗಳ ನಡುವಿನ ಅಪಘಾತ ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಮಾಡಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದಿದ್ದರೂ, ಬಸ್ಸಿನ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದ ಕೆಲ ಮಕ್ಕಳು ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಗಾಯಾಳುಗಳಿಗೆ ನೆರವು ನೀಡಿ ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಘಟನೆಯ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವಾಹನಗಳ ಉದ್ದನೆಯ ಸಾಲು ಕಂಡುಬಂತು.
ಗಣಿ ಲಾರಿಗಳ ಅಡ್ಡಾದಿಡ್ಡಿ ನಿಲುಗಡೆ ಹಾಗೂ ನಿಯಂತ್ರಣರಹಿತ ಸಂಚಾರವೇ ಇಂತಹ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೂಡ್ಲಿಗಿ ರಸ್ತೆಯಿಂದ ಸಂಡೂರಿಗೆ ಸಂಪರ್ಕಿಸುವ ಈ ಮಾರ್ಗದಲ್ಲಿ ಪ್ರತಿದಿನ ನೂರಾರು ಗಣಿ ಲಾರಿಗಳು ಸಂಚರಿಸುತ್ತಿದ್ದು, ರಸ್ತೆಯ ಎರಡೂ ಬದಿಗಳಲ್ಲೂ ಹಾಗೂ ಕೆಲವೊಮ್ಮೆ ಮೂರೂ ಸಾಲುಗಳಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ ಎಂದು ದೂರಿದರು.
ಇದರಿಂದ ಸಾಮಾನ್ಯ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದ್ದು, ಬೈಕ್ ಸವಾರರು ಧೂಳು ಹಾಗೂ ಟ್ರಾಫಿಕ್ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಬಸ್ ಪ್ರಯಾಣಿಕರೂ ಪದೇಪದೇ ಟ್ರಾಫಿಕ್ ಜಾಮ್‌ನಿಂದ ಸಮಯ ವ್ಯರ್ಥವಾಗುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಪ್ರತಿದಿನವೂ ಭಾರೀ ವಾಹನಗಳು ರಸ್ತೆಯ ಎರಡೂ ಬದಿಯಲ್ಲಿ ನಿಲ್ಲುವುದರಿಂದ ಸಂಚಾರ ದುಸ್ತರವಾಗಿದೆ. ಇಂದು ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಮುಂದಿನ ದಿನಗಳಲ್ಲಿ ಪ್ರಾಣಹಾನಿ ಸಂಭವಿಸಿದರೆ ಅದರ ಹೊಣೆ ಯಾರು?” ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ಇದೇ ಭಾಗದಲ್ಲಿ ಗಣಿ ಲಾರಿಗಳ ಅಸಮರ್ಪಕ ನಿಲುಗಡೆ, ಧೂಳು ಮಾಲಿನ್ಯ ಹಾಗೂ ಟ್ರಾಫಿಕ್ ಸಮಸ್ಯೆಗಳ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದರೂ, ಸಂಬಂಧಪಟ್ಟ ಇಲಾಖೆಗಳು ಯಾವುದೇ ಶಾಶ್ವತ ಪರಿಹಾರ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಯಶವಂತನಗರ ಭಾಗದಲ್ಲಿ ತಕ್ಷಣ ಟ್ರಾಫಿಕ್ ನಿಯಂತ್ರಣ ವ್ಯವಸ್ಥೆ ಬಲಪಡಿಸುವುದು, ಗಣಿ ಲಾರಿಗಳಿಗೆ ಪ್ರತ್ಯೇಕ ನಿಲುಗಡೆ ಪ್ರದೇಶ ಗುರುತಿಸುವುದು ಹಾಗೂ ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.